Nepal, despite losing, showed determination: Heroic performance against England, the father of cricket 
ಕ್ರಿಕೆಟ್

ಸೋತರೂ ಮನಗೆದ್ದ ನೇಪಾಳ: ಕ್ರಿಕೆಟ್ ಜನಕ ಇಂಗ್ಲೆಂಡ್ ಎದುರು ವೀರೋಚಿತ ಆಟ

ಮುಂಬೈ: ಕ್ರಿಕೆಟ್ ಜನಕ ಹಾಗೂ ಎರಡು ಬಾರಿಯ ಚಾಂಪಿಯನ್ ಇಂಗ್ಲೆಂಡ್ ತಂಡ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ  #T20WorldCup #T20WorldCup2026 ತನ್ನ ಮೊದಲ ಪಂದ್ಯದಲ್ಲಿ ಆಘಾತ ತಪ್ಪಿಸಿಕೊಂಡಿದೆ. ಲೋಕೇಶ್ ಬಮ್ (39* ರನ್, 20 ಎಸೆತ, 4 ಬೌಂಡರಿ, 2 ಸಿಕ್ಸರ್) ಸಾಹಸದ ನಡುವೆಯೂ ಕೊನೇ ಓವರ್‌ನಲ್ಲಿ ಸ್ಯಾಮ್ ಕರ‌್ರನ್ (27ಕ್ಕೆ 1) ನಡೆಸಿದ ಕರಾರುವಾಕ್ ಬೌಲಿಂಗ್ ದಾಳಿ ಎದುರು ಮಂಕಾದ ನೇಪಾಳ nepal, ಇಂಗ್ಲೆಂಡ್ ವಿರುದ್ಧ 4 ರನ್‌ಗಳ ವೀರೋಚಿತ ಸೋಲು ಕಂಡಿತು.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಜೇಕಬ್ ಬೆಥೆಲ್(55 ರನ್, 35 ಎಸೆತ, 4 ಬೌಂಡರಿ, 4 ಸಿಕ್ಸರ್) ಮತ್ತು ನಾಯಕ ಹ್ಯಾರಿ ಬ್ರೂಕ್ (53 ರನ್, 32 ಎಸೆತ, 4 ಬೌಂಡರಿ, 3 ಸಿಕ್ಸರ್) ಅರ್ಧಶತಕಗಳ ನೆರವಿನಿಂದ 7 ವಿಕೆಟ್‌ಗೆ 184 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ದೀಪೇಂದ್ರ ಸಿಂಗ್ (44 ರನ್, 29 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ನಾಯಕ ರೋಹಿತ್ ಪೌಡೆಲ್ (39 ರನ್, 34 ಎಸೆತ, 2 ಬೌಂಡರಿ, 2 ಸಿಕ್ಸರ್) ಜತೆಯಾಟದಿಂದ ನೇಪಾಳ ಒಂದು ಹಂತದಲ್ಲಿ 14 ಓವರ್‌ಗಳಲ್ಲಿ 123 ರನ್‌ಗಳಿಸಿ ಸುಸ್ಥಿತಿಯಲ್ಲಿತ್ತು.
ಕೊನೇ 18 ಎಸೆತಗಳಲ್ಲಿ 46 ರನ್ ಬೇಕಿದ್ದಾಗ ಲೋಕೇಶ್ ತೋರಿದ ಪ್ರತಿರೋಧದ ಹೊರತಾಗಿಯೂ ನೇಪಾಳ 6 ವಿಕೆಟ್‌ಗೆ 180 ರನ್‌ಗಳಿಸಲಷ್ಟೇ ಶಕ್ತಗೊಂಡಿತು. ಸ್ಯಾಮ್ ಕರ‌್ರನ್ ಎಸೆದ ಅಂತಿಮ ಓವರ್‌ನಲ್ಲಿ ನೇಪಾಳಕ್ಕೆ 10 ರನ್ ಅಗತ್ಯವಿತ್ತು. 2024ರ ಆವೃತ್ತಿಯಲ್ಲೂ ನೇಪಾಳ ತಂಡ ಗುಂಪಿನ ಪಂದ್ಯದಲ್ಲಿ ದ.ಆಫ್ರಿಕಾ ಎದುರು ಕೇವಲ 1 ರನ್‌ನಿಂದ ಸೋತಿತ್ತು.
ಇಂಗ್ಲೆಂಡ್: 7 ವಿಕೆಟ್‌ಗೆ 184(ಫಿಲ್ ಸಾಲ್ಟ್ 1, ಬಟ್ಲರ್ 26, ಬೆಥೆಲ್ 55, ಬ್ರೂಕ್ 53, ವಿಲ್ ಜಾಕ್ಸ್ 39*, ದಿಪೇಂದ್ರ 23ಕ್ಕೆ 2, ನಂದನ್ 25ಕ್ಕೆ 2). ನೇಪಾಳ: 6 ವಿಕೆಟ್‌ಗೆ 180 (ಕುಶಾಲ್ 29, ಆಸ್ೀ 7, ರೋಹಿತ್ 39, ದಿಪೇಂದ್ರ 44, ಲೋಕೇಶ್ 39*, ಲಿಯಾಮ್ ಡಾಸನ್ 21ಕ್ಕೆ 2, ವಿಲ್ ಜಾಕ್ಸ್ 17ಕ್ಕೆ 1).
ಪಂದ್ಯಶ್ರೇಷ್ಠ: ವಿಲ್ ಜಾಕ್ಸ್ 
ಸೋತರೂ ಮನಗೆದ್ದರು!
ಇಂಗ್ಲೆಂಡ್ ವಿರುದ್ಧ ನೇಪಾಳ ತಂಡದ ದಿಟ್ಟ ಹೋರಾಟದ ಮನೋಭಾವ ಹಲವು ಕ್ರಿಕೆಟ್ ತಾರೆಯರ ಮನಗೆದ್ದಿದ್ದು, ಭಾರತ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ದ.ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೈಯ್ನ ಸಹಿತ ಹಲವರು ಶ್ಲಾಸಿದ್ದಾರೆ. ನೇಪಾಳ ತಂಡಕ್ಕೆ ಎಂದಾದರೂ ನೆರವು ಬೇಕಿದ್ದರೆ, ಕಾರ್ಯನಿರ್ವಹಿಸಲು ತಾನು ಸಿದ್ಧವಾಗಿರುವುದಾಗಿ ಡೇಲ್ ಸ್ಟೈಯ್ನ ಎಕ್ಸ್‌ನಲ್ಲಿ (x) ಆರ್ ಸಹ ನೀಡಿದ್ದಾರೆ.