ಶತಕವೀರರಾದ ಕುಮಾರ್ ಕುಶಾಗ್ರ ಮತ್ತು ತಿಲಕ್​ ವರ್ಮ ಏಜೆನ್ಸಿ
ಕ್ರಿಕೆಟ್

ರೈಸಿಂಗ್​ ಸ್ಟಾರ್ಸ್ ಏಷ್ಯಾಕಪ್: ನೇಪಾಳವನ್ನು 26 ರನ್​ಗಳಿಗೆ ಆಲೌಟ್​ ಮಾಡಿ ಗೆದ್ದ ಭಾರತ ಎ!

ತಿಲಕ್​ ವರ್ಮ-ಕುಮಾರ್ ಕುಶಾಗ್ರ ಭರ್ಜರಿ ಶತಕ; ಪ್ರಿನ್ಸ್​ ಯಾದವ್​-ಹರ್ಷಿತ್​ ರಾಣಾ ಮಾರಕ ದಾಳಿ

ದೋಹಾ: ನಾಯಕ ತಿಲಕ್​ ವರ್ಮ (107 ರನ್​, 113 ಎಸೆತ, 6 ಬೌಂಡರಿ, 4 ಸಿಕ್ಸರ್​) ಮತ್ತು ವಿಕೆಟ್​ ಕೀಪರ್​-ಬ್ಯಾಟರ್​ ಕುಮಾರ್​ ಕುಶಾಗ್ರ (117 ರನ್​, 102 ಎಸೆತ, 10 ಬೌಂಡರಿ, 5 ಸಿಕ್ಸರ್​) ಶತಕ ಹಾಗೂ ವೇಗಿಗಳಾದ ಪ್ರಿನ್ಸ್​ ಯಾದವ್​ (6ಕ್ಕೆ 5) ಮತ್ತು ಹರ್ಷಿತ್​ ರಾಣಾ (16ಕ್ಕೆ 4) ಮಾರಕ ದಾಳಿಯ ನೆರವಿನಿಂದ ಭಾರತ ಎ ತಂಡ ರೈಸಿಂಗ್​ ಸ್ಟಾರ್ಸ್​ ಏಷ್ಯಾಕಪ್​ ಏಕದಿನ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ನೇಪಾಳ ಎದುರು 306 ರನ್​ಗಳ ಬೃಹತ್​ ಗೆಲುವು ದಾಖಲಿಸಿದೆ.

ವೆಸ್ಟ್​ ಎಂಡ್​ ಪಾರ್ಕ್​ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಭಾರತ ಎ ತಂಡ, 42 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಎಡಗೈ ಆರಂಭಿಕರಾದ ಅಭಿಷೇಕ್​ ಶರ್ಮ (9), ವೈಭವ್​ ಸೂರ್ಯವಂಶಿ (26) ಮತ್ತು ಆಯುಷ್​ ಬಡೋನಿ (2) ಹೆಚ್ಚು ಹೊತ್ತು ನಿಲ್ಲಲಿಲ್ಲ. ಆಗ ಜತೆಗೂಡಿದ ತಿಲಕ್​&ಕುಶಾಗ್ರ ಜೋಡಿ 4ನೇ ವಿಕೆಟ್​ಗೆ 206 ರನ್​ ಜತೆಯಾಟವಾಡಿ ಆಸರೆಯಾಯಿತು. ಇದರಿಂದ ಭಾರತ ಅಂತಿಮವಾಗಿ 9 ವಿಕೆಟ್​ಗೆ 332 ರನ್​ ಕಲೆಹಾಕಿತು. ಸ್ಲಾಗ್​ ಓವರ್​ಗಳಲ್ಲಿ ಉಪನಾಯಕ ರಿಂಕು ಸಿಂಗ್​ (9), ಶಾಬಾಜ್​ ಅಹ್ಮದ್​ (8), ವಿಪ್ರಜ್​ ನಿಗಮ್​ (0), ಹರ್ಷಿತ್​ ರಾಣಾ (1) ನಿರಾಸೆ ಮೂಡಿಸಿದರೆ, ಆಲ್ರೌಂಡರ್​ ಸೂರ್ಯಾಂಶ್​ ಶೆಡ್ಗೆ (36* ರನ್​, 14 ಎಸೆತ, 1 ಬೌಂಡರಿ, 4 ಸಿಕ್ಸರ್​) ಮೊತ್ತವನ್ನು 330ರ ಗಡಿ ದಾಟಿಸಲು ನೆರವಾದರು. ಪ್ರತಿಯಾಗಿ ನೇಪಾಳ 11.3 ಓವರ್​ಗಳಲ್ಲೇ ಕೇವಲ 26 ರನ್​ಗಳಿಗೆ ಆಲೌಟ್​ ಆಯಿತು.

ಭಾರತ ಎ: 9 ವಿಕೆಟ್​ಗೆ 332 (ವೈಭವ್​ ಸೂರ್ಯವಂಶಿ 26, ಅಭಿಷೇಕ್​ ಶರ್ಮ 9, ಆಯುಷ್​ ಬಡೋನಿ 2, ತಿಲಕ್​ ವರ್ಮ 107, ಕುಮಾರ್​ ಕುಶಾಗ್ರ 117, ರಿಂಕು ಸಿಂಗ್​ 9, ಸೂರ್ಯಾಂಶ್​ ಶೆಡ್ಗೆ 36*, ಶಾಬಾಜ್​ ಅಹ್ಮದ್​ 8, ವಿಪ್ರಜ್​ ನಿಗಮ್​ 0, ಹರ್ಷಿತ್​ ರಾಣಾ 1, ಪ್ರಿನ್ಸ್​ ಯಾದವ್​ 1*, ಸಂದೀಪ್​ ಲಮಿಚೇನ್​ 61ಕ್ಕೆ 3, ಲಲಿತ್​ ರಾಜಬಂಶಿ 61ಕ್ಕೆ 3, ನಂದನ್​ ಯಾದವ್​ 49ಕ್ಕೆ 2). ನೇಪಾಳ: 11.3 ಓವರ್​ಗಳಲ್ಲಿ 26 (ಪವನ್​ 6, ರಶೀದ್​ 6, ಪ್ರಿನ್ಸ್​ 6ಕ್ಕೆ 5, ಹರ್ಷಿತ್​ 16ಕ್ಕೆ 4).

ಭಾರತ ಎ ಮುಂದಿನ ಪಂದ್ಯ

ಯಾವಾಗ: ಭಾನುವಾರ

ಎದುರಾಳಿ: ಪಾಕಿಸ್ತಾನ ಎ

ಆರಂಭ: ಮಧ್ಯಾಹ್ನ 3.30