ಭಾರತ-ಆಸ್ಟ್ರೇಲಿಯಾ ಕ್ವಾರ್ಟರ್‌ಫೈನಲ್ ಫೈಟ್: ಹೀಗಿದೆ ಹರ್ಮಾನ್‌ಪ್ರೀತ್ ಕೌರ್ ಪಡೆ ಸೆಮೀಸ್ ಲೆಕ್ಕಾಚಾರ
ಲಂಡನ್: ಮಹಿಳೆಯರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಅರ್ಹತೆಗೆ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಭಾರತ ತಂಡ ತಂಡ ಕೊನೇ ಲೀಗ್ ಪಂದ್ಯದಲ್ಲಿ ಆರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಸವಾಲು ಎದುರಿಸಲಿದೆ. ಲಾರ್ಡ್ಸ್ ಅಂಗಣದಲ್ಲಿ ಭಾನುವಾರ ನಡೆಯಲಿರುವ ನಿರ್ಣಾಯಕ ಪಂದ್ಯ ಹರ್ಮಾನ್‌ಪ್ರೀತ್ ಕೌರ್ ಪಡೆ ಸತತ 2ನೇ ಐಸಿಸಿ ಪ್ರಶಸ್ತಿ ಜಯಿಸುವ ಹಾದಿ ನಿರ್ಧರಿಸಲಿದೆ. ಎ ಗುಂಪಿನಿಂದ ಸೆಮೀಸ್ ರೇಸ್‌ನಲ್ಲಿರುವ ದ.ಆಫ್ರಿಕಾ ತಂಡ ಗುಂಪಿನ ತನ್ನ ಕೊನೇ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಆಡಲಿದೆ.
ಅಸ್ಥಿರ ಬ್ಯಾಟಿಂಗ್ ಜತೆಗೆ ಫೀಲ್ಡಿಂಗ್ ವೈಫಲ್ಯದಿಂದ ಮಾಡು ಇಲ್ಲವೇ ಮಡಿ ಒತ್ತಡದಲ್ಲಿರುವ ಭಾರತ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಕ್ವಾರ್ಟರ್‌ಫೈನಲ್ ಎನಿಸಿದೆ. ಭಾರತ ತಂಡ ಆಡಿರುವ 4ರಲ್ಲಿ 5 ಜಯ, 1 ಸೋಲಿನೊಂದಿಗೆ +2.268 ರನ್‌ರೇಟ್‌ನೊಂದಿಗೆ 6 ಅಂಕ ಕಲೆಹಾಕಿದೆ. ಆಡಿರುವ 4ರಲ್ಲೂ ಗೆದ್ದು 8 ಅಂಕದೊಂದಿಗೆ +4.724 ರನ್‌ರೇಟ್ ಹೊಂದಿರುವ ಆಸೀಸ್ ತಂಡ, ಭಾರತ ವಿರುದ್ಧ ಸೋತರೂ (ಕನಿಷ್ಠ 200 ರನ್ ಅಂತರ) ಸೆಮೀಸ್ ಸ್ಥಾನ ಬಹುತೇಕ ಖಾತ್ರಿಪಡಿಸಿಕೊಳ್ಳಲಿದೆ.
ಆರಂಭಿಕ ಬ್ಯಾಟಿಂಗ್ ಕಳವಳದೊಂದಿಗೆ ಟೂರ್ನಿ ಆರಂಭಿಸಿದ ಭಾರತಕ್ಕೆ ಸ್ಮತಿ ಮಂದನಾ (167ರನ್), ಶೆಫಾಲಿ ವರ್ಮ (145) ಆಧಾರವಾಗಿದ್ದಾರೆ. ಆದರೆ, ಹರ್ಮಾನ್‌ಪ್ರೀತ್ ಕೌರ್ (85), ಜೆಮೀಮಾ ರೋಡ್ರಿಗಸ್ (58) ವೈಲ್ಯ ಹಿನ್ನಡೆ ತಂದಿದೆ. ಜತೆಗೆ ಹಿಂದಿನ 2 ಪಂದ್ಯಗಳಲ್ಲಿ ಭಾರತ ಆರು ಕ್ಯಾಚ್ ಕೈಬಿಟ್ಟಿದೆ. ಕಳೆದ ವರ್ಷ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಫೈನಲ್‌ಗೇರಿದ್ದ ಭಾರತ, ಮತ್ತೊಮ್ಮೆ ನಿರ್ಣಾಯಕ ಪಂದ್ಯದಲ್ಲಿ ಅದೇ ಲಿತಾಂಶ ಪುನರಾವರ್ತಿಸುವ ನಿರೀಕ್ಷೆ ಇದೆ.
ಗ್ರೂಪ್ ಎನಿಂದ ಸೆಮೀಸ್‌ಗೇರಲು ಆಸ್ಟ್ರೇಲಿಯಾ, ಭಾರತ ಹಾಗೂ ದ.ಆಫ್ರಿಕಾ ನಡುವೆ ನಿಕಟ ಪೈಪೋಟಿ ಇದೆ. ಭಾನುವಾರ ನಡೆಯುವ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಗೆದ್ದರೆ, ಎಂಟು ಅಂಕದೊಂದಿಗೆ 3 ತಂಡಗಳು ಸಮಬಲ ಸಾಧಿಸಲಿದ್ದು, ರನ್‌ರೇಟ್‌ನಲ್ಲಿ ಮೇಲುಗೈ ಸಾಧಿಸುವ 2 ತಂಡಗಳು ಮುನ್ನಡೆಯಲಿವೆ.
ಭಾರತ ಒಂದು ರನ್ ಅಂತರದಿಂದ ಗೆದ್ದರೂ ಸೆಮಿಫೈನಲ್ ಸ್ಥಾನ ಖಚಿತವಾಗುತ್ತದೆ. ಆದರೆ, ರನ್‌ರೇಟ್‌ನಲ್ಲಿ ಭಾರತವನ್ನು ಹಿಂದಿಕ್ಕಲು ಆಫ್ರಿಕಾ ಕನಿಷ್ಠ 122 ರನ್ ಅಂತರದಿಂದ ಗೆಲ್ಲಬೇಕು. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಗೆದ್ದರೆ ಸೆಮಿಫೈನಲ್‌ಗೇರಲಿವೆ ಅಥವಾ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ಗೆದ್ದರೆ, ಆಸೀಸ್ ಜತೆ 2ನೇ ಸ್ಥಾನಿಯಾಗಿ ಭಾರತ ಉಪಾಂತ್ಯಕ್ಕೇರಲಿದೆ. ದ.ಆಫ್ರಿಕಾ-ಬಾಂಗ್ಲಾದೇಶ ಪಂದ್ಯದ ನಂತರ ಆಡುವ ಅನುಕೂಲತೆ ಭಾರತ ಹೊಂದಿದೆ.
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.