ಡಬ್ಲ್ಯುಪಿಎಲ್ ಇತಿಹಾಸದ ಚೊಚ್ಚಲ ಶತಕ ಸಿಡಿಸಿದ ನ್ಯಾಟ್ ಸೀವರ್-ಬ್ರಂಟ್
ವಡೋದರ: ಇಂಗ್ಲೆಂಡ್ ಆಲ್ರೌಂಡರ್ ನ್ಯಾಟ್ ಸೀವರ್-ಬ್ರಂಟ್ (100*ರನ್, 57 ಎಸೆತ, 16 ಬೌಂಡರಿ, 1 ಸಿಕ್ಸರ್) ವುಮೆನ್ಸ್ ಪ್ರೀಮಿಯರ್ ಲೀಗ್ (WPL) ಇತಿಹಾಸದ ಚೊಚ್ಚಲ ಶತಕ ಸಾಧಕಿ ಎನಿಸಿದ್ದಾರೆ. ಆರ್ಸಿಬಿ (RCB) ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ನ್ಯಾಟ್ ಸೀವರ್ ಬ್ರಂಟ್ ಇದರೊಂದಿಗೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪರ ಈ ಸಾಧನೆ ಮಾಡಿದರು.
ಕೋಟಂಬಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ 4ನೇ ಆವೃತ್ತಿಯ 16ನೇ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ದುಕೊಂಡಿತು. ನ್ಯಾಟ್ ಸೀವರ್ (Nat Sciver-Brunt) ಮತ್ತು ಹೇಲಿ ಮ್ಯಾಥ್ಯೂಸ್ (56 ರನ್, 39 ಎಸೆತ, 9 ಬೌಂಡರಿ) 2ನೇ ವಿಕೆಟ್ಗೆ 73 ಎಸೆತಗಳಲ್ಲಿ 131 ರನ್ ಜತೆಯಾಟವಾಡುವ ಮೂಲಕ ಆರ್ಸಿಬಿ ಬೌಲರ್ಗಳನ್ನು ಕಾಡಿದರು. ಅಂತಿಮವಾಗಿ ಮುಂಬೈ ತಂಡ 4 ವಿಕೆಟ್ಗೆ 199 ರನ್ ಕಲೆಹಾಕಿತು. ನ್ಯಾಟ್ ಸೀವರ್ ಇನಿಂಗ್ಸ್ನ ಕೊನೇ ಓವರ್ನ 4ನೇ ಎಸೆತದಲ್ಲಿ ಸಿಂಗಲ್ಸ್ ಕಸಿಯುವ ಮೂಲಕ 57 ಎಸೆತಗಳಲ್ಲಿ ಶತಕ ಪೂರೈಸಿದರು.
ಐಪಿಎಲ್ನಲ್ಲಿ ಚೊಚ್ಚಲ ಪಂದ್ಯದಲ್ಲೇ ಶತಕ (ಬ್ರೆಂಡನ್ ಮೆಕ್ಕಲಂ) ಸಿಡಿದಿದ್ದರೆ, ಡಬ್ಲ್ಯುಪಿಎಲ್ನಲ್ಲಿ ಈ ಹಿಂದೆ 10 ಬ್ಯಾಟರ್ಗಳು 90ರ ಗಡಿ ದಾಟಿದ್ದರೂ ಶತಕ ಒಲಿದಿರಲಿಲ್ಲ. ಕೊನೆಗೂ ನ್ಯಾಟ್ ಸೀವರ್ ಬ್ರಂಟ್ ಡಬ್ಲ್ಯುಪಿಎಲ್ ಇತಿಹಾಸದ ಚೊಚ್ಚಲ ಶತಕ ಸಾಧನೆ ಮಾಡಿದರು. 'ಮಹಿಳಾ ಐಪಿಎಲ್' ಆರಂಭಗೊಂಡು ಬರೋಬ್ಬರಿ 1,059 ದಿನಗಳು ಮತ್ತು 82 ಪಂದ್ಯಗಳ ನಂತರ ಚೊಚ್ಚಲ ಶತಕವೊಂದು ಸಿಡಿಯಿತು. ಇನ್ನು ಡಬ್ಲ್ಯುಪಿಎಲ್ನಲ್ಲಿ ಶತಕ ಸಿಡಿಸುವ ಮೊದಲ ಭಾರತೀಯರು ಯಾರು ಎಂಬ ಕುತೂಹಲವಷ್ಟೇ ಬಾಕಿ ಉಳಿದಿದೆ.