ಪಾಕ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ನಖ್ವಿ
- ಪಿಎಸ್ಎಲ್ಗೆ ಎದುರಾಗಿರುವುದು ದುಸ್ಥಿತಿ ಅನ್ನೋದಕ್ಕೆ ಪಿಸಿಬಿ ಮುಖ್ಯಸ್ಥನ ಕ್ಷಮೆಯೇ ಜ್ವಲಂತ ಸಾಕ್ಷಿ
- ಪಿಎಸ್ಎಲ್ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಿದ ನಖ್ವಿ
- ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸುವುದಾಗಿ ಹೇಳಿಕೆ
ಕರಾಚಿ: ಐಪಿಎಲ್ಗೆ ಟಕ್ಕರ್ ಕೊಡಲೆಂದೇ ಶುರು ಮಾಡಿದ ಪಾಕಿಸ್ತಾನ ಸೂಪರ್ ಲೀಗ್ ಸ್ಥಿತಿ ಈಗ ಅದೋ ಗತಿ ಎನ್ನುವಂತಾಗಿದೆ. ಭಾರತೀಯ ಕ್ರಿಕೆಟ್ ಹಾಗೂ ಕ್ರಿಕೆಟಿಗರ ವಿರುದ್ಧ ಪ್ರತಿಬಾರಿ ಉರಿದುಬೀಳುತ್ತಿದ್ದ ಪಾಕ್ ಕ್ರಿಕೆಟ್ ಮಂಡಳಿಗೆ ಇದೀಗ ಭಾರೀ ಮುಖಭಂಗವೇ ಉಂಟಾಗಿದೆ. ಐಪಿಎಲ್ಗೆ ಪೈಪೋಟಿ ಇರಲಿ, ಅದರ ಅರ್ಧದಷ್ಟು ಇಲ್ಲದ ಪಿಎಸ್ಎಲ್ಗೆ ಎದುರಾಗಿರುವುದು ದುಸ್ಥಿತಿ ಅನ್ನೋದಕ್ಕೆ ಪಿಸಿಬಿ ಮುಖ್ಯಸ್ಥನ ಕ್ಷಮೆಯೇ ಜ್ವಲಂತ ಸಾಕ್ಷಿ.
ಈ ಬಾರಿಯ ಪಿಎಸ್ಎಲ್ ಅನ್ನು ಮುಂದೂಡಿಕೆ ಮಾಡಿರುವ ಮೊಹ್ಸಿನ್ ನಖ್ವಿ, ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಿದ್ದಾರೆ. ಲಾಹೋರ್ ಮತ್ತು ಕರಾಚಿಯಲ್ಲಿ ಮಾತ್ರ ಪಂದ್ಯಗಳು ನಡೆಯಲಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ. ಇರಾನ್-ಇಸ್ರೇಲ್ ಯುದ್ಧದಿಂದ, ದೇಶದಲ್ಲಿ ಇಂಧನ ಕೊರತೆ ಉದ್ಭವಿಸಿದೆ. ಈ ಎಲ್ಲ ಕಾರಣಗಳಿಂದ 2026ರ ಪಾಕಿಸ್ತಾನ ಸೂಪರ್ ಲೀಗ್ ಆವೃತ್ತಿಯನ್ನು ನಡೆಸಲಾಗುವುದು ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಖ್ವಿ, "ಲೀಗ್ ಮಾರ್ಚ್ 26ರಿಂದ ಲಾಹೋರ್ ಮತ್ತು ಕರಾಚಿಯಲ್ಲಿ ಮಾತ್ರ ನಡೆಯಲಿದೆ. ಮೂಲ ವೇಳಾಪಟ್ಟಿಯ ಪ್ರಕಾರವೇ ಪಂದ್ಯಗಳು ನಡೆಯುತ್ತವೆ. ಆದರೆ, ಈ ಬಾರಿ ಕ್ರೀಡಾಂಗಣಕ್ಕೆ ಜನರಿಗೆ ಪ್ರವೇಶ ಇರುವುದಿಲ್ಲ. ಇಂಧನ ಬಿಕ್ಕಟ್ಟಿನ ಹಿನ್ನೆಲೆ ಪಾಕಿಸ್ತಾನಿಗಳು ತಮ್ಮ ಓಡಾಟಕ್ಕೆ ಬ್ರೇಕ್ ಹಾಕುವುದು ಒಳಿತು. ಇದರಿಂದ ಇಂಧನದ ಅನಗತ್ಯ ಖರ್ಚು ತಪ್ಪುತ್ತದೆ" ಎಂದು ತಮ್ಮ ಪ್ರಧಾನಿಯ ಮಾತನ್ನು ನೆನಪಿಸಿ ವಿನಂತಿಸಿದ್ದಾರೆ.
“ಪ್ರತಿದಿನ 30,000 ಜನರನ್ನು ಕ್ರೀಡಾಂಗಣಗಳಲ್ಲಿ ಇರಿಸಿಕೊಳ್ಳಲು ಸಾಧ್ಯವಿಲ್ಲ. ಈ ಬಿಕ್ಕಟ್ಟು ಮುಂದುವರಿಯುವವರೆಗೆ ಪಂದ್ಯಗಳಿಗೆ ಜನರು ಎಂಟ್ರಿ ಆಗುವುದು ಬೇಡ. ಆದಾಯಕ್ಕೆ ಬೀಳುವ ಹೊಡೆತಕ್ಕೆ ಫ್ರಾಂಚೈಸಿಗಳಿಗೆ ಪರಿಹಾರ ನೀಡಲಾಗುವುದು" ಎಂದು ನಖ್ವಿ ಭರವಸೆ ನೀಡಿದ್ದಾರೆ. ಪಿಸಿಬಿಯ ಈ ನಿರ್ಧಾರವನ್ನು ನೋಡಿದ ನೆಟ್ಟಿಗರು ಮತ್ತು ಭಾರತೀಯ ಕ್ರಿಕೆಟ್ ಪ್ರೇಮಿಗಳು ಲೇವಡಿ ಮಾಡಿದ್ದು, ಸೊಕ್ಕಿನ ಮಾತುಗಳನ್ನಾಡುವ ನಖ್ವಿಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ,(ಏಜೆನ್ಸೀಸ್).