- ಬಾಂಗ್ಲಾ ಆಟಗಾರ ಮುಸ್ತಾಫಿಜುರ್ ರೆಹಮಾನ್ ಕೈಬಿಟ್ಟ ಕೆಕೆಆರ್
- ಕಡೆಗೂ ಪ್ರತಿಕ್ರಿಯೆ ನೀಡಿದ ಬಾಂಗ್ಲಾ ಆಟಗಾರ ಮುಸ್ತಾಫಿಜುರ್
- ಐಸಿಸಿ ಮೊರೆ ಹೋದ ಬಾಂಗ್ಲಾ ಕ್ರಿಕೆಟ್
ನವದೆಹಲಿ: ಬಾಂಗ್ಲಾ ಆಟಗಾರ ಮುಸ್ತಾಫಿಜುರ್ ರೆಹಮಾನ್ ಸೇರಿ ಒಂದಷ್ಟು ಕ್ರಿಕೆಟಿಗರನ್ನು ಐಪಿಎಲ್ನಿಂದ ಕೈಬಿಡಿ ಎಂಬ ಕೂಗುಗಳು ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಕಿಚ್ಚು ಹಚ್ಚಿತು.
ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮಾಲೀಕ ಹಾಗೂ ನಟ ಶಾರುಖ್ ಖಾನ್ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದು, ಬಾಂಗ್ಲಾದೇಶದಲ್ಲಿ ಹಿಂದುಗಳ ಕೊಲೆ ಆಗುತ್ತಿರುವಾಗ, ಅಲ್ಲಿನ ಕ್ರಿಕೆಟಿಗರನ್ನು ಇಲ್ಲಿ ಆಡಿಸುವುದು ಎಷ್ಟು ಸರಿ? ಎಂದು ಕಿಡಿಕಾರಿದ್ದರು. ಅಂತೆಯೇ, ಬಿಸಿಸಿಐ ನಿರ್ದೇಶನದಂತೆ ಕೆಕೆಆರ್ ಇಂದು ಮುಸ್ತಾಫಿಜುರ್ರನ್ನು 2026ರ ಐಪಿಎಲ್ನಿಂದ ಕೈಬಿಟ್ಟಿತು. ಈ ನಿರ್ಧಾರಕ್ಕೆ ಕಡೆಗೂ ರೆಹಮಾನ್ ಪ್ರತಿಕ್ರಿಯಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ನಡೆದ ಹಿಂದೂ ವ್ಯಕ್ತಿಯ ಬರ್ಬರ ಹತ್ಯೆ ಭಾರತದಲ್ಲಿ ವ್ಯಾಪಕ ಆಕ್ರೋಶ ಸ್ಫೋಟಿಸಿತು. ಹಿಂದುಗಳ ಮೇಲಿನ ದೌರ್ಜನ್ಯ, ಸರಣಿ ಹತ್ಯೆಗಳು ಬಾಂಗ್ಲಾ ಕ್ರಿಕೆಟಿಗರನ್ನು ಭಾರತದ ಐಪಿಎಲ್ನಲ್ಲಿ ಆಡಿಸುವುದು ಬೇಡ ಎಂಬ ಒತ್ತಾಯಗಳು ಕೇಳಿಬಂದ ಬೆನ್ನಲ್ಲೇ ಬಿಸಿಸಿಐ, ಕೆಕೆಆರ್ಗೆ ಮುಸ್ತಾಫಿಜುರ್ರನ್ನು ರಿಲೀಸ್ ಮಾಡುವಂತೆ ನಿರ್ದೇಶಿಸಿತು. ಇದಕ್ಕೆ ಹೆಚ್ಚು ಮಾತನಾಡದ ಕೋಲ್ಕತ ಫ್ರಾಂಚೈಸಿ, ಅಸ್ತು ಎಂದಿತು. ಬಿಸಿಸಿಐನ ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ರೆಹಮಾನ್, ಅವರು ನನ್ನ ರಿಲೀಸ್ ಮಾಡಿದ್ರೆ, ಅದಕ್ಕೆ ನಾನೇನು ಮಾಡಲಿ ಎಂದು ಹೇಳಿದ್ದಾರೆ.
ಇನ್ನು ಬಿಸಿಸಿಐ ಕಟು ನಿರ್ಧಾರದ ಬೆನ್ನಲ್ಲೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಇದೀಗ ಐಸಿಸಿ ಮೊರೆ ಹೋಗಿದೆ. ಫೆ.7ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಯ ಭಾಗವಾಗಿ ಬಾಂಗ್ಲಾ ಭಾರತದಲ್ಲಿ ಪಂದ್ಯಗಳನ್ನಾಡಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಟೂರ್ನಿ ಆಯೋಜನೆ ಮಾಡುತ್ತಿರುವ ಹಿನ್ನೆಲೆ ತಮ್ಮ ಆಟಗಾರರಿಗೆ ಭದ್ರತೆಯ ಕೋರಿ, ಸ್ಥಳಗಳ ಬದಲಾವಣೆಗೆ ಬಿಸಿಬಿ ಮನವಿ ಸಲ್ಲಿಸಿದೆ,(ಏಜೆನ್ಸೀಸ್).