ಮುಂಬೈ ಇಂಡಿಯನ್ಸ್ ತಂಡದ ಆಟಗಾರರು
- ತಿಲಕ್ ಶತಕದಾಟಕ್ಕೆ ತಲೆಬಾಗಿದ ಗುಜರಾತ್ ಟೈಟನ್ಸ್
- 45 ಎಸೆತದಲ್ಲಿ ಅಜೇಯ 101 ರನ್ ಬಾರಿಸಿದ ತಿಲಕ್ ವರ್ಮಾ
- ಯುವ ಕ್ರಿಕೆಟಿಗನ ಸ್ಪೋಟಕ ಇನ್ನಿಂಗ್ಸ್ಗೆ ಅಭಿಮಾನಿಗಳು ಖುಷ್
Tilak Varma: ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ ಟೂರ್ನಮೆಂಟ್ನಲ್ಲಿ ಸತತ ಸೋಲುಗಳಿಂದ ಭಾರೀ ಟೀಕೆ, ಛೀಮಾರಿಗಳಿಗೆ ತುತ್ತಾಗಿದ್ದ ಐದು ಬಾರಿ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್, ಕಡೆಗೂ ಗುಜರಾತ್ ಟೈಟನ್ಸ್ ಎದುರು ದೊಡ್ಡ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿತು. ಇದರಿಂದ ಸಪ್ಪೆ ಮುಖ ಹಾಕಿಕೊಂಡು ಕುಳಿತ್ತಿದ್ದ ಪಾಂಡ್ಯ ಮುಖದಲ್ಲಿ ಖುಷಿ ಅರಳಿದ್ದು ವಿಶೇಷ.
ನಿನ್ನೆ (ಏ.20) ನಡೆದ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿಯೂ ಸೋಲುವ ಹಂತದಲ್ಲಿದ್ದ ಮುಂಬೈ ಇಂಡಿಯನ್ಸ್ಗೆ ತಿಲಕ್ ವರ್ಮಾ ಅವರಿಂದ ಬಂದ ಸ್ಫೋಟಕ ಶತಕ ಗೆಲುವಿನ ದಾರಿಗೆ ಕೊಂಡೊಯ್ದಿತು. ನಮನ್ ಧಿರ್ ಜೊತೆಗೂಡಿ ಅಬ್ಬರದ ಇನ್ನಿಂಗ್ಸ್ ಆಡಿದ ತಿಲಕ್, 45 ಎಸೆತದಲ್ಲಿ ಅಜೇಯ 101 ರನ್ ಗಳಿಸುವ ಮೂಲಕ ಎಂಐಗೆ ಭರ್ಜರಿ ಗೆಲುವು ತಂದುಕೊಟ್ಟರು. ಇದರಿಂದ ಅಂಕಪಟ್ಟಿಯಲ್ಲಿ ಕೊನೆ ಸ್ಥಾನ ಗಳಿಸಿದ್ದ ಈಗ ನೇರವಾಗಿ 7ನೇ ಸ್ಥಾನಕ್ಕೆ ಜಿಗಿದಿರುವುದು ಆಶ್ಚರ್ಯ.
ವೇಗದ ಶತಕ ಬಾರಿಸಿದ ತಿಲಕ್ ಮಾತನಾಡಿ, ಖಂಡಿತ! ನನ್ನ ಮೊದಲ ಸೆಂಚುರಿ ಸದಾ ವಿಶೇಷವಾಗಿ ಉಳಿಯಲಿದೆ. ಇಲ್ಲಿಂದ ನನಗೆ ಇನ್ಯಾವುದಕ್ಕೂ ಅಷ್ಟು ಸಮಯ ಇರೋದಿಲ್ಲ. ಪ್ರತಿಯೊಂದು ಪಂದ್ಯವು ಬಹಳ ಮುಖ್ಯ. ಮಿಡಲ್ ಓವರ್ಗಳಲ್ಲಿ ಹೆಚ್ಚು ಸಮಯ ಕಾದು ಗಮನಿಸಿದೆ. ನಂತರ ಸಮಯ ವ್ಯರ್ಥ ಮಾಡದೆ, ಇನ್ನಿಂಗ್ಸ್ ಕೈಗೆತ್ತಿಕೊಂಡೆವು. ಕಳೆದ ಐದು ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಅಷ್ಟಾಗಿ ಸಮಯ ಸಿಕ್ಕಿಲ್ಲ ಎಂದರು.
ಜಿಟಿ ವಿರುದ್ಧದ ಪಂದ್ಯದಲ್ಲಿ ಸಮಯ ಸಿಕ್ಕಿತು. ಇದನ್ನೇ ಗಮನಿಸಿದ ನಾನು, ಮೊದಲ 20 ಬಾಲ್ಗಳನ್ನು ನಿಧಾನವಾಗಿ ಆಡಿದೆ. ಆ ನಂತರ ನನ್ನ ಸಾಮರ್ಥ್ಯ ಮತ್ತು ತಂಡದ ಅಗತ್ಯತೆ ಬಗ್ಗೆ ಸೂಕ್ಷ್ಮವಾಗಿ ಅರಿತು, ಪರಿಸ್ಥಿತಿಗೆ ತಕ್ಕಂತೆ ಸ್ಫೋಟಕ ಇನ್ನಿಂಗ್ಸ್ ಆಡಲು ಪ್ರಾರಂಭಿಸಿದೆ. ಈಗಲೂ ನನ್ನ ಮಿದುಳು ಬೇಸಿಕ್ಗಳನ್ನು ಪಾಲಿಸುವಂತೆ ಹೇಳುವುದು ಖುಷಿಯಾಗುತ್ತೆ. ನನ್ನೊಂದಿಗೆ ಉತ್ತಮ ಬ್ಯಾಟಿಂಗ್ ನೀಡಿದ ನಮನ್ ಕೂಡ ಈ ಚಪ್ಪಾಳೆ, ಅಭಿನಂದನೆ ಸಲ್ಲುತ್ತದೆ ಎಂದರು.