ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ
- 19ನೇ ಐಪಿಎಲ್ ಆವೃತ್ತಿಯಿಂದ ಮುಂಬೈ ಇಂಡಿಯನ್ಸ್ ಹೊರಗೆ
- ಕ್ಯಾಪ್ಟನ್ ಸ್ಥಾನದಿಂದ ಹಾರ್ದಿಕ್ರನ್ನು ಕೆಳಗಿಳಿಸಿ ಎಂದ ಮಾಜಿ ಕ್ರಿಕೆಟಿಗ
Hardik Pandya: ಪ್ರಸಕ್ತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ನಿಂದ ಮುಂಬೈ ಇಂಡಿಯನ್ಸ್ ಅಧಿಕೃತವಾಗಿ ಹೊರಬಿದ್ದಿದೆ. ಸರಣಿ ಹೀನಾಯ ಸೋಲು ಮತ್ತು ಆಟಗಾರರ ಕಳಪೆ ಪ್ರದರ್ಶನದಿಂದ ತಂಡ ಪೈಪೋಟಿ ಕೊಡದೆಯೇ ಎಲಿಮಿನೇಟ್ ಆಗಿದ್ದು ಸದ್ಯ ಮುಂಬೈ ಫ್ರಾಂಚೈಸಿಯ ಅಭಿಮಾನಿಗಳನ್ನು ಭಾರೀ ಬೇಸರಕ್ಕೆ ದೂಡಿದೆ. ಟೀಮ್ನ ಸೋಲಿಗೆ ನಾಯಕ ಹಾರ್ದಿಕ್ ಪಾಂಡ್ಯ ಕಾರಣ ಎಂಬ ಟೀಕೆಗಳು ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಗುಜರಾತ್ ಟೈಟನ್ಸ್ ಪಡೆಗೆ ಕ್ಯಾಪ್ಟನ್ ಆಗಿದ್ದ ಸ್ಟಾರ್ ಆಲ್ರೌಂಡ್ ಆಟಗಾರ ಹಾರ್ದಿಕ್ ಪಾಂಡ್ಯ, ತಂಡವನ್ನು ಒಂದು ಬಾರಿ ಚಾಂಪಿಯನ್ ಪಟ್ಟಕೇರಿಸಿ, ಎರಡನೇ ಬಾರಿ ಫೈನಲ್ವರೆಗೂ ಕೊಂಡೊಯ್ದಿದ್ದರು. ಆದರೆ, ಅದೇ ಮುಂಬೈ ಇಂಡಿಯನ್ಸ್ಗೆ ಬಂದು ರೋಹಿತ್ ಶರ್ಮರಿಂದ ನಾಯಕನ ಸ್ಥಾನ ಪಡೆದಿದ್ದೇ ತಡ, ಅವರ ವಿರುದ್ಧ ಸಾಲು ಸಾಲು ಟೀಕೆಗಳು ವ್ಯಕ್ತವಾಯಿತು. ಮತ್ತೊಂದೆಡೆ, ಈ ವರ್ಷದ ಐಪಿಎಲ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ ಹಾರ್ದಿಕ್, ಬೌಲಿಂಗ್, ಬ್ಯಾಟಿಂಗ್ ಮತ್ತು ಕ್ಯಾಪ್ಟನ್ಸಿ ಯಾವುದರಲ್ಲೂ ಉತ್ತಮ ಪ್ರದರ್ಶನ ತೋರದೆ ಹೋಗಿದ್ದೇ ಫ್ರಾಂಚೈಸಿಯ ಸೋಲಿಗೆ ಮುಖ್ಯ ಕಾರಣ ಎಂದು ದೂಷಿಸಲಾಗಿದೆ.
ಇಲ್ಲಿ ತಂಡದ ಉಳಿದ ಆಟಗಾರರು ಸಹ ಉತ್ತಮ ಪ್ರದರ್ಶನ ನೀಡುವಲ್ಲಿ ಮುಗ್ಗರಿಸಿದ್ದಾರೆ ಎಂಬುದನ್ನು ಲೆಕ್ಕಿಸದ ಅನೇಕರು, ಕ್ಯಾಪ್ಟನ್ ಸ್ಥಾನದಲ್ಲಿರುವ ಹಾರ್ದಿಕ್ರನ್ನು ಮಾತ್ರ ದೂಷಿಸಿ, ಟೀಕಿಸುತ್ತಿರುವುದು ಆಶ್ಚರ್ಯಕರ. ನಾಯಕನ ಜವಾಬ್ದಾರಿ ತೋರುವಲ್ಲಿ ಪಾಂಡ್ಯ ಎಡವಿದ್ದಾರೆ ಎಂದಿರುವ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, ಕ್ಯಾಪ್ಟನ್ ಸ್ಥಾನದಿಂದ ಹಾರ್ದಿಕ್ಗೆ ಮೊದಲು ಗೇಟ್ಪಾಸ್ ಕೊಡಿ ಎಂದು ಫ್ರಾಂಚೈಸಿಗೆ ತಿಳಿಸಿದ್ದಾರೆ.
ಇಲ್ಲಿ ಫ್ರಾಂಚೈಸಿ ತಮ್ಮ ನಿರ್ಧಾರದ ಬಗ್ಗೆ ಮರು ಪರಿಶೀಲನೆ ಮಾಡಬೇಕು. ಹಾರ್ದಿಕ್ ಪಾಂಡ್ಯರನ್ನು ಕ್ಯಾಪ್ಟನ್ ಸ್ಥಾನದಿಂದ ಕಳಗಿಳಿಸಿ, ಜಸ್ಪ್ರೀತ್ ಬುಮ್ರಾರನ್ನು ನೂತನ ನಾಯಕನ್ನನಾಗಿ ಮಾಡಬೇಕು ಎಂದು ಮುಂಬೈ ಇಂಡಿಯನ್ಸ್ಗೆ ತಿಳಿಸಿದ್ದಾರೆ,(ಏಜೆನ್ಸೀಸ್).