WPL: ರಿಚಾ ಘೋಷ್ ಹೋರಾಟ ವ್ಯರ್ಥ; ಆರ್ಸಿಬಿಗೆ ಸತತ 2ನೇ ಸೋಲು
ವಡೋದರ: ಇಂಗ್ಲೆಂಡ್ ಆಲ್ರೌಂಡರ್ ನ್ಯಾಟ್ ಸೀವರ್-ಬ್ರಂಟ್ (100*ರನ್, 57 ಎಸೆತ, 16 ಬೌಂಡರಿ, 1 ಸಿಕ್ಸರ್) ಸಿಡಿಸಿದ ವುಮೆನ್ಸ್ ಪ್ರೀಮಿಯರ್ ಲೀಗ್ (WPL) ಇತಿಹಾಸದ ಚೊಚ್ಚಲ ಶತಕ ಮತ್ತು ಹೀಲಿ ಮ್ಯಾಥ್ಯೂಸ್ (56 ರನ್, 39 ಎಸೆತ, 9 ಬೌಂಡರಿ, 10ಕ್ಕೆ 3 ವಿಕೆಟ್) ಆಲ್ರೌಂಡ್ ಆಟದ ಎದುರು ಮಂಕಾದ ಆರ್ಸಿಬಿ (RCB) ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 15 ರನ್ಗಳಿಂದ ಪರಾಭವಗೊಂಡಿದೆ. ಇದರಿಂದ ಸ್ಮೃತಿ ಮಂದನಾ ಬಳಗ ಇನ್ನು ನೇರವಾಗಿ ಫೈನಲ್ಗೇರುವುದನ್ನು ಖಾತ್ರಿಪಡಿಸಿಕೊಳ್ಳಲು ಕೊನೇ ಲೀಗ್ ಪಂದ್ಯದವರೆಗೆ ಕಾಯಬೇಕಾಗಿದೆ. ಆರ್ಸಿಬಿಗೆ ಸತತ 5 ಗೆಲುವಿನ ಬಳಿಕ ಇದು ಸತತ 2ನೇ ಸೋಲಾಗಿದೆ.
ಕೋಟಂಬಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ 4ನೇ ಆವೃತ್ತಿಯ 16ನೇ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ದುಕೊಂಡಿತು. ನ್ಯಾಟ್ ಸೀವರ್ ಮತ್ತು ಹೇಲಿ ಮ್ಯಾಥ್ಯೂಸ್ 2ನೇ ವಿಕೆಟ್ಗೆ 73 ಎಸೆತಗಳಲ್ಲಿ 131 ರನ್ ಜತೆಯಾಟವಾಡುವ ಮೂಲಕ ಆರ್ಸಿಬಿ ಬೌಲರ್ಗಳನ್ನು ಕಾಡಿದರು. ನ್ಯಾಟ್ ಸೀವರ್ ಇನಿಂಗ್ಸ್ನ ಕೊನೇ ಓವರ್ನ 4ನೇ ಎಸೆತದಲ್ಲಿ ಸಿಂಗಲ್ಸ್ ಕಸಿಯುವ ಮೂಲಕ 57 ಎಸೆತಗಳಲ್ಲಿ ಶತಕ ಪೂರೈಸಿದರು. ಅಂತಿಮವಾಗಿ ಮುಂಬೈ ತಂಡ 4 ವಿಕೆಟ್ಗೆ 199 ರನ್ ಕಲೆಹಾಕಿತು.
ಪ್ರತಿಯಾಗಿ ಆರ್ಸಿಬಿ ತಂಡ 35 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು. ನಾಯಕಿ ಸ್ಮೃತಿ ಮಂದನಾ (6), ಗ್ರೇಸ್ ಹ್ಯಾರಿಸ್ (15), ಜಾರ್ಜಿಯಾ ವೊಲ್ (9) , ಗೌತಮಿ ನಾಯ್ಕ್ (1) ವೈಫಲ್ಯ ಆರ್ಸಿಬಿ ತಂಡವನ್ನು ಬೃಹತ್ ಮೊತ್ತದ ಚೇಸಿಂಗ್ನ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿಸಿತು. ಕೊನೆಗೆ ಆರ್ಸಿಬಿ 9 ವಿಕೆಟ್ಗೆ 184 ರನ್ಗಳಿಗೆ ಸರ್ವಪತನ ಕಂಡು ಶರಣಾಯಿತು. (Richa Ghosh) ರಿಚಾ ಘೋಷ್ (90 ರನ್, 50 ಎಸೆತ, 10 ಬೌಂಡರಿ, 6 ಸಿಕ್ಸರ್) ಹೋರಾಟ ಸೋಲಿನ ಅಂತರವನ್ನಷ್ಟೇ ತಗ್ಗಿಸಿತು. ಆರ್ಸಿಬಿ ಇನ್ನು ತನ್ನ ಕೊನೇ ಲೀಗ್ ಪಂದ್ಯದಲ್ಲಿ ಗುರುವಾರ ಯುಪಿ ವಾರಿಯರ್ಸ್ ವಿರುದ್ಧ ಆಡಲಿದೆ.
ಮುಂಬೈ ಇಂಡಿಯನ್ಸ್: 4 ವಿಕೆಟ್ಗೆ 199 (ಮ್ಯಾಥ್ಯೂಸ್ 56, ಸಜನಾ 7, ನ್ಯಾಟ್ ಸೀವರ್ 100*, ಹರ್ಮಾನ್ಪ್ರೀತ್ 20, ಅಮನ್ಜೋತ್ 4, ಲಾರೆನ್ ಬೆಲ್ 21ಕ್ಕೆ 2, ನಾಡಿನ್ ಡಿ ಕ್ಲರ್ಕ್ 40ಕ್ಕೆ 1, ಶ್ರೇಯಾಂಕಾ 34ಕ್ಕೆ 1). ಆರ್ಸಿಬಿ: 9 ವಿಕೆಟ್ಗೆ 184 (ಹ್ಯಾರಿಸ್ 15, ಸ್ಮೃತಿ 6, ವೊಲ್ 9, ಗೌತಮಿ ನಾಯ್ಕ್ 1, ರಾಧಾ 0, ರಿಚಾ 90, ನಾಡಿನ್ 28, ಅರುಂಧತಿ 14, ಶ್ರೇಯಾಂಕಾ 12* ಮ್ಯಾಥ್ಯೂಸ್ 10ಕ್ಕೆ 3, ಶಬ್ನಿಲ್ 25ಕ್ಕೆ 2, ಕೆರ್ 37ಕ್ಕೆ 2).