ಬೆಂಗಳೂರು: ಟೀಮ್ ಇಂಡಿಯಾ ಕಂಡ ಶ್ರೇಷ್ಠ ನಾಯಕ, ಅಭಿಮಾನಿಗಳ ಅಚ್ಚುಮೆಚ್ಚಿನ 'ಕ್ಯಾಪ್ಟನ್ ಕೂಲ್', ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಐಪಿಎಲ್ ಭವಿಷ್ಯದ ಬಗ್ಗೆ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗಳು ಭುಗಿಲೆದ್ದಿವೆ. ಈಗಾಗಲೇ ಬಹುತೇಕರು ಧೋನಿ ಅವರ ಐಪಿಎಲ್ ಕರಿಯರ್ 19ನೇ ಆವೃತ್ತಿಗೆ ಮುಗಿದಿದೆ ಎಂದೇ ಅಂದುಕೊಂಡಿದ್ದಾರೆ. ಈ ಕುರಿತಾದ ಕೆಲವು ಕುತೂಹಲಕಾರಿ ಪ್ರಶ್ನೆಗಳಿಗೆ ಅಭಿಮಾನಿಗಳ ನೆಚ್ಚಿನ ಮಾಹಿ ಕೊಟ್ಟಿರುವ ಉತ್ತರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಧೋನಿ, ಈ ಸಂದರ್ಭದಲ್ಲಿ, ತಮಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳಿಗೆ ಎಂದಿನಂತೆ ತಮ್ಮ ಶೈಲಿಯಲ್ಲೇ ಉತ್ತರಿಸಿದರು. ಒಂದಷ್ಟು ಪ್ರಶ್ನೆಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪೈಕಿ ನಿಮಗೆ ಯಾವುದು ಬೆಸ್ಟ್ ಅನಿಸುತ್ತೆ ಎಂಬ ಪ್ರಶ್ನೆಗೆ ಧೋನಿ ಪ್ರತಿಕ್ರಿಯಿಸಿದ್ದು ಹೀಗೆ.
ನೀವು ಇನ್ನೊಂದು ಸೀಸನ್ ಆಡುತ್ತೀರಾ ಎಂಬ ಮೊದಲ ಪ್ರಶ್ನೆಗೆ, ನಾನೀಗ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಿದೆ. ಯಾಕೆಂದರೆ, ನನ್ನ ದೈಹಿಕ ಸಾಮರ್ಥ್ಯವನ್ನು ತಿಳಿದ ಮೇಲೆಯೇ ಆಡುವುದು, ಬಿಡುವುದು ಗೊತ್ತಾಗುತ್ತದೆ. ನಾನು ಮೊದಲು ವೈದ್ಯಕೀಯ ಟೆಸ್ಟ್ಗೆ ಒಳಗಾಗಬೇಕು. ಆಮೇಲೆ ನೀವು ವರದಿಯನ್ನು ಕೊಡಬೇಕು. ಆಗ ಡಿಸೆಂಬರ್ ವೇಳೆಗೆ ಇನ್ನೊಂದು ಸೀಸನ್ ಆಡುವಷ್ಟು ನಾನು ಸ್ಟ್ರಾಂಗ್ ಇದೇನಾ ಎಂದು ನೋಡಬೇಕು' ಎಂದು ಹಾಸ್ಯಸ್ಪದವಾಗಿ ಹೇಳಿದರು.
ನಂತರದಲ್ಲಿ ಸಿಎಸ್ಕೆ ಅಥವಾ ಆರ್‌ಸಿಬಿ ಪೈಕಿ ಯಾವುದು ಬೆಸ್ಟ್ ತಂಡ ಎಂಬ ಪ್ರಶ್ನೆಗೆ ಉತ್ತರಿಸಿದ ಧೋನಿ, ಕಳೆದ ಎರಡು ವರ್ಷಗಳಲ್ಲಿ ನಮ್ಮ ಟೀಮ್ ತುಂಬಾನೆ ಪರದಾಡಿದೆ. ಇದರಲ್ಲಿ ಯಾವುದೇ ನಾಚಿಕೆಯಿಲ್ಲ. ಕಾರಣ, ಇದೇ ಸತ್ಯ. ಕಳೆದೆರಡು ವರ್ಷಗಳಿಂದ ಆರ್‌ಸಿಬಿ ಉತ್ತಮ ಪ್ರದರ್ಶನ ಕೊಟ್ಟಿದೆ. ಅದು ನಮ್ಮಿಂದ ಆಗಿಲ್ಲ. ಗಾಯಗಳ ಸಮಸ್ಯೆಯನ್ನು ಮುಂದಿಡದೆ, ನಮ್ಮ ಫಿಟ್ ಆಟಗಾರರು ಟೂರ್ನಿಯಲ್ಲಿ ಲಭ್ಯವಿರುವಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದರು.
19ನೇ ಆವೃತ್ತಿಯಲ್ಲಿ ತೊಡೆಯ ಸ್ನಾಯುವಿನ ಸಮಸ್ಯೆಯಿಂದಾಗಿ ಧೋನಿ ಒಂದೇ ಒಂದೂ ಪಂದ್ಯದಲ್ಲಿಯೂ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯಲಿಲ್ಲ. ಮೈದಾನದಲ್ಲಿ ಕಾಣಿಸಿಕೊಂಡರೂ ತಂಡದ ಪರ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇದು ಅವರ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ತೀವ್ರ ಬೇಸರ ಮೂಡಿಸಿತು. ಮತ್ತೊಂದೆಡೆ, ಇದೇ ಅವರ ಕೊನೇ ಐಪಿಎಲ್ ಎಂಬ ಮಾತುಗಳು ಕೇಳಿಬಂದಿವೆ. ಆದರೆ, ಆಟ ಮುಂದುವರಿಸುವುದು ಅಥವಾ ನಿವೃತ್ತಿ ಬಗ್ಗೆ ಇಲ್ಲಿಯವರೆಗೆ ಧೋನಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಎಂಬುದು ಗಮನಾರ್ಹ,(ಏಜೆನ್ಸೀಸ್).