ಮಹೇಂದ್ರ ಸಿಂಗ್ ಧೋನಿ (ಸಿಎಸ್​ಕೆ) 
ಕ್ರಿಕೆಟ್

4 ಸೋಲುಗಳ ಬೆನ್ನಲ್ಲೇ ಧೋನಿ ಕಣಕ್ಕೆ? ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದ್ದಾರಾ ಮಾಹಿ? ಇಲ್ಲಿದೆ ಹೊಸ ಅಪ್ಡೇಟ್​ | MS Dhoni

ಪ್ರಮುಖ ಮುಖ್ಯಾಂಶಗಳು

  • ಆಡಿರುವ 6 ಪಂದ್ಯದಲ್ಲಿ 2ರಲ್ಲಿ ಮಾತ್ರ ಗೆಲುವು
  • ಅಭ್ಯಾಸದ ವೇಳೆ ಕಾಣಿಸಿಕೊಳ್ಳುವ ಧೋನಿ, ಪಂದ್ಯದಲ್ಲಿ ಕಣ್ಮರೆ
  • ಮಹೇಂದ್ರ ಸಿಂಗ್​ ಧೋನಿ ನೋಡಲು ಕಾಯುತ್ತಿರುವ ಫ್ಯಾನ್ಸ್​ಗೆ ಪದೇ ಪದೇ ನಿರಾಶೆ
MS Dhoni: ಪ್ರಸಕ್ತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ನಲ್ಲಿ ಐದು ಬಾರಿ ಚಾಂಪಿಯನ್ಸ್ ತಂಡ ಎಂದೇ ಪಟ್ಟ ಗಳಿಸಿರುವ ಚೆನ್ನೈ ಸೂಪರ್ ಕಿಂಗ್ಸ್​, ಅದ್ಯಾಕೋ ಸತತ ಕಳಪೆ ಪ್ರದರ್ಶನದಿಂದ ಅಭಿಮಾನಿಗಳನ್ನು ಬೇಸರಕ್ಕೆ ದೂಡಿದೆ. ಇಲ್ಲಿಯವರೆಗೆ ಆಡಿರುವ 6 ಪಂದ್ಯಗಳಲ್ಲಿ 2 ಪಂದ್ಯಗಳಲ್ಲಿ ಗೆಲುವು ಕಂಡರೆ ಉಳಿದ 4ರಲ್ಲಿ ಹೀನಾಯ ಸೋಲು ಕಂಡಿದೆ. ಇಷ್ಟಾದರೂ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಮಾತ್ರ ಕಣಕ್ಕಿಳಿಯದೆ ಇರುವುದು ಫ್ಯಾನ್ಸ್​ಗಳಿಗೆ ಉಳಿದ ಪಂದ್ಯಗಳನ್ನು ನೋಡಬೇಕೋ, ಬೇಡವೋ ಎಂಬ ಗೊಂದಲವನ್ನು ಸೃಷ್ಟಿಸಿದೆ.
ಪ್ರಸ್ತುತ, ಐಪಿಎಲ್​ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಸಿಎಸ್​ಕೆ, ಇಂದು (ಏ.23) ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅಂಕಪಟ್ಟಿಯಲ್ಲಿನ ಜಿಗಿತಕ್ಕೆ ಸೆಣಸಲಿದೆ. ಮತ್ತೊಂದೆಡೆ, ಐಪಿಎಲ್​ ಆರಂಭದಿಂದಲೂ ಫಿಟ್ನೆಸ್​ ಸಮಸ್ಯೆಗಳಿಂದ ತಂಡದ ಪರ ಆಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ತಮ್ಮ ದರ್ಶನ ಪಡೆಯಲು ತೀವ್ರ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಪದೇ ಪದೇ ನಿರಾಶೆ ಮಾಡುತ್ತಿದ್ದಾರೆ. ಇದರಿಂದ ಸಿಎಸ್​ಕೆ ಒಂದೆರೆಡು ಪಂದ್ಯ ಗೆದ್ದರೂ ಅಭಿಮಾನಿಗಳಲ್ಲಿ ಅಂತಹ ಖುಷಿ ಕಾಣುತ್ತಿಲ್ಲ.
ತಮ್ಮ ನೆಚ್ಚಿನ ಕ್ಯಾಪ್ಟನ್​ ಕೂಲ್​ರನ್ನು ನೋಡದೆ, ಫ್ಯಾನ್ಸ್​ಗಳು ಅತೀವ ಬೇಸರಕ್ಕೀಡಾಗಿದ್ದಾರೆ. ಇಂದಿನ ಪಂದ್ಯದಲ್ಲಿಯೂ ತಂಡದಲ್ಲಿ ಅವರ ಅನುಪಸ್ಥಿತಿ ಕಾಡಲಿದೆ ಎಂದು ಕೆಲವು ವರದಿಗಳು ಸೂಚಿಸಿವೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಅವರ ಅನುಪಸ್ಥಿತಿ ಕಾಡಲಿದ್ದು, ಮೇ.21ರಂದು ನಡೆಯಲಿರುವ ಗುಜರಾತ್ ಟೈಟನ್ಸ್ ಎದುರಿನ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ ಎಂದು ರೆವ್ ಸ್ಪೋರ್ಟ್ಸ್ ವರದಿ ತಿಳಿಸಿದೆ. ಆದರೆ, ಅಂತಿಮ ನಿರ್ಧಾರವು ಸಂಪೂರ್ಣವಾಗಿ ಮಾಜಿ ನಾಯಕನ ಮೇಲಿದೆ ಎಂಬುದು ಗಮನಾರ್ಹ.