IPL ಅಪರೂಪದ ದಾಖಲೆಯ ಲಿಸ್ಟ್‌ನಿಂದ ಧೋನಿ ಔಟ್: ಸದ್ಯ ಆ ಪಟ್ಟಿಯಲ್ಲಿ ಉಳಿದಿರೋದು ಈ ಮೂವರು ಮಾತ್ರ! MS Dhoni
- 2008ರಲ್ಲಿ ಬಹಳ ಅದ್ಧೂರಿಯಾಗಿ ಆರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್
- ಇಂದು ತನ್ನ 19ನೇ ಸೀಸನ್‌ನ ವೈಭವದಲ್ಲಿದೆ ವಿಶ್ವದ ಕ್ಯಾಶ್ ರಿಚ್ ಲೀಗ್
- ದೀರ್ಘಕಾಲ ಐಪಿಎಲ್ ಆಡಿದ ಧೀಮಂತರ ಸಾಲಿನಲ್ಲಿ ಧೋನಿ ಹೆಸರು ಸದಾ ಮುಂಚೂಣಿಯಲ್ಲಿರುತ್ತೆ
- ಆದರೆ ಈ ಬಾರಿ ಅಪರೂಪದ ದಾಖಲೆಯ ಪಟ್ಟಿಯಿಂದ ಧೋನಿ ಹೆಸರು ಹೊರಬಿದ್ದಂತಾಗಿದೆ
MS Dhoni : 2008ರಲ್ಲಿ ಬಹಳ ಅದ್ಧೂರಿಯಾಗಿ ಆರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ ( IPL ) ಇಂದು ತನ್ನ 19ನೇ ಸೀಸನ್‌ನ ವೈಭವದಲ್ಲಿದೆ. ಈ ಸುದೀರ್ಘ ಮಹಾ ಟೂರ್ನಿಯಲ್ಲಿ ಎಷ್ಟೋ ಯುವ ಆಟಗಾರರು ಉದಯಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಹಾನ್ ತಾರೆಗಳಾಗಿ ಮಿಂಚಿದ್ದಾರೆ. ಅದೇ ರೀತಿ ಅದೆಷ್ಟೋ ದಿಗ್ಗಜರು ತಮ್ಮ ಆಟ ಮುಗಿಸಿ ನಿವೃತ್ತಿ ಹೊಂದಿದ್ದಾರೆ. ಆದರೆ, ಕಾಲ ಬದಲಾದರೂ ಕ್ರೇಜ್ ಬದಲಾಗದಂತೆ ಐಪಿಎಲ್ ಆರಂಭದ ದಿನದಿಂದ ಇಂದಿನವರೆಗೂ ನಿರಂತರವಾಗಿ ಕಣಕ್ಕಿಳಿಯುತ್ತಾ, ಇಡೀ ಟೂರ್ನಿಯ ಅಸ್ತಿತ್ವಕ್ಕೆ ಹೆಮ್ಮೆಯ ಬ್ರ್ಯಾಂಡ್ ರಾಯಭಾರಿಗಳಾಗಿ ಉಳಿದುಕೊಂಡಿರುವ ಅಪರೂಪದ ಕ್ರಿಕೆಟಿಗರು ಕೆಲವೇ ಕೆಲವು ಜನ. ಅಂತಹ ಧೀಮಂತರ ಸಾಲಿನಲ್ಲಿ ಎಂ.ಎಸ್. ಧೋನಿ ಅವರ ಹೆಸರು ಸದಾ ಮುಂಚೂಣಿಯಲ್ಲಿ ನಿಲ್ಲುತ್ತದೆ.
ಐಪಿಎಲ್ ಇತಿಹಾಸದ ಆರಂಭದಿಂದಲೂ ನಿರಂತರವಾಗಿ ಆಡುತ್ತಾ ಬಂದಿದ್ದ ಅಪರೂಪದ ಆಟಗಾರರ ಗಣ್ಯರ ಪಟ್ಟಿಯಲ್ಲಿ ಇತ್ತೀಚಿನವರೆಗೂ ಎಂ.ಎಸ್. ಧೋನಿ ಅವರ ಹೆಸರಿತ್ತು. ಆದರೆ, ಪ್ರಸ್ತುತ ಐಪಿಎಲ್ 2026ರ ಸೀಸನ್‌ನಲ್ಲಿ ಗಾಯದ ಸಮಸ್ಯೆಯಿಂದಾಗಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಒಂದು ಪಂದ್ಯದಲ್ಲೂ ಕಣಕ್ಕಿಳಿಯಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಟೂರ್ನಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಮಹಾನ್ ದಾಖಲೆಯ ಪಟ್ಟಿಯಿಂದ ಅವರ ಹೆಸರು ಹೊರಬಿದ್ದಂತಾಗಿದೆ.
ಈ ಸೀಸನ್‌ನ ಲೀಗ್ ಹಂತದಲ್ಲಿ ಸಿಎಸ್‌ಕೆ ಆಡಿದ ಒಟ್ಟು 14 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದು 12 ಅಂಕಗಳೊಂದಿಗೆ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಪ್ಲೇಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಹೀಗಾಗಿ, ಧೋನಿ ಅವರು ಈ ಆವೃತ್ತಿಯಲ್ಲಿ ಮೈದಾನಕ್ಕಿಳಿಯುವ ಕೊನೆಯ ಆಸೆಯೂ ಮುಕ್ತಾಯಗೊಂಡಂತಾಗಿದ್ದು, ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ.
ಐಪಿಎಲ್ ಆರಂಭವಾದ 2008ರ ಮೊದಲ ಸೀಸನ್‌ನಿಂದ ಇಂದಿನವರೆಗೂ (2026ರ ಸೀಸನ್ ಒಳಗೊಂಡಂತೆ) ಪ್ರತಿಯೊಂದು ಆವೃತ್ತಿಯಲ್ಲೂ ಕನಿಷ್ಠ ಒಂದು ಪಂದ್ಯವನ್ನಾದರೂ ಆಡಿದ ಅಪರೂಪದ ದಾಖಲೆ ಕೇವಲ ಮೂವರು ಆಟಗಾರರ ಹೆಸರಿನಲ್ಲಿದೆ. ಅವರೇ ರನ್ ಮಷಿನ್ ವಿರಾಟ್ ಕೊಹ್ಲಿ, ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮತ್ತು ಕರ್ನಾಟಕದ ಮನೀಶ್ ಪಾಂಡೆ.
ವಿಶೇಷವೆಂದರೆ, ಈ ಪಟ್ಟಿಯಲ್ಲಿರುವ ರೋಹಿತ್ ಶರ್ಮಾ ಹಾಗೂ ಮನೀಶ್ ಪಾಂಡೆ ತಮ್ಮ ಐಪಿಎಲ್ ಜರ್ನಿಯಲ್ಲಿ ಕನಿಷ್ಠ ಎರಡು ಅಥವಾ ಅದಕ್ಕಿಂತ ಹೆಚ್ಚು ಫ್ರಾಂಚೈಸಿಗಳ ಪರ ಕಣಕ್ಕಿಳಿದು ಆಡಿದ್ದಾರೆ. ಆದರೆ, ಕಿಂಗ್ ವಿರಾಟ್ ಕೊಹ್ಲಿ ಮಾತ್ರ ಐಪಿಎಲ್ ಇತಿಹಾಸದ ಆರಂಭದಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನೇ ಮುನ್ನಡೆಸುತ್ತಾ, ಬೇರೆ ಯಾವುದೇ ಫ್ರಾಂಚೈಸಿಗೆ ಹೋಗದೆ ಒಂದೇ ತಂಡಕ್ಕಾಗಿ ನಿರಂತರವಾಗಿ ಆಡುತ್ತಿರುವ ವಿಶ್ವದ ಏಕೈಕ ಮತ್ತು ಹೆಮ್ಮೆಯ ಕ್ರಿಕೆಟಿಗನಾಗಿ ಮೈಲಿಗಲ್ಲು ಸೃಷ್ಟಿಸಿದ್ದಾರೆ.
ಈ ಬಾರಿ ಧೋನಿ ಅವರು ಒಂದೇ ಒಂದು ಪಂದ್ಯವನ್ನು ಆಡದೇ ಈ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಒಂದಲ್ಲ ಒಂದು ಪಂದ್ಯದಲ್ಲಿ ಧೋನಿ ಆಡೇ ಆಡುತ್ತಾರೆ ಅಂತಾ ಅಭಿಮಾನಿಗಳು ಬಯಸಿದ್ದರು. ಅಲ್ಲದೆ, ಧೋನಿ ಆಡುವುದನ್ನು ಎದುರು ನೋಡುತ್ತಿದ್ದರು. ಆದರೆ, ಈ ಸೀಸನ್‌ನಲ್ಲಿ ಅದು ಸಾಧ್ಯವಾಗಲೇ ಇಲ್ಲ. ಇಲ್ಲಿಗೆ ಆಟಗಾರನಾಗಿ ಧೋನಿ ಅವರ ಐಪಿಎಲ್ ಪ್ರಯಾಣ ಮುಗಿಯುವ ಸಾಧ್ಯತೆ ಇದೆ. ಮುಂದಿನ ಸೀಸನ್‌ನಲ್ಲಿ ಧೋನಿ ಆಡುವುದು ಬಹುತೇಕ ಅನುಮಾನವಾಗಿದೆ.
ಧೋನಿ ಐಪಿಎಲ್ ಸಾಧನೆ
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕ ಹಾಗೂ ಶ್ರೇಷ್ಠ ಫಿನಿಶರ್ ಆಗಿ ಹೊರಹೊಮ್ಮಿರುವ ಎಂ.ಎಸ್. ಧೋನಿ ಅವರ ಐಪಿಎಲ್ ಸಾಧನೆ ನಿಜಕ್ಕೂ ಅದ್ವಿತೀಯ. ತಮ್ಮ ಚಾಣಾಕ್ಷ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಬರೋಬ್ಬರಿ 5 ಬಾರಿ (2010, 2011, 2018, 2021, 2023) ಚಾಂಪಿಯನ್ ಪಟ್ಟಕ್ಕೇರಿಸಿರುವ ಧೋನಿ, ತಂಡವನ್ನು ದಾಖಲೆಯ 10 ಬಾರಿ ಫೈನಲ್‌ಗೆ ಹಾಗೂ 12 ಬಾರಿ ಪ್ಲೇಆಫ್‌ಗೆ ಮುನ್ನಡೆಸಿದ ಹೆಗ್ಗಳಿಕೆ ಹೊಂದಿದ್ದಾರೆ. ಐಪಿಎಲ್‌ನಲ್ಲಿ 260ಕ್ಕೂ ಹೆಚ್ಚು ಪಂದ್ಯಗಳನ್ನಾಡಿರುವ 'ತಲಾ' ಧೋನಿ, ಲೋಯರ್ ಆರ್ಡರ್‌ನಲ್ಲಿ ಕಣಕ್ಕಿಳಿದರೂ 39ಕ್ಕೂ ಹೆಚ್ಚಿನ ಸರಾಸರಿ ಹಾಗೂ 137ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನೊಂದಿಗೆ 5,200ಕ್ಕೂ ಹೆಚ್ಚು ರನ್ ಚಚ್ಚಿದ್ದಾರೆ. ವಿಕೆಟ್ ಹಿಂಭಾಗದಲ್ಲೂ ಮಿಂಚಿನ ಸ್ಟಂಪಿಂಗ್ ಹಾಗೂ ಅತ್ಯಧಿಕ ಕೀಪಿಂಗ್ ಶಿಕಾರಿಗಳ ಮೂಲಕ ಐಪಿಎಲ್‌ನ ಸಾರ್ವಕಾಲಿಕ ಶ್ರೇಷ್ಠ ನಾಯಕ ಹಾಗೂ ಆಟಗಾರನಾಗಿ ಕ್ರಿಕೆಟ್ ಸಾಮ್ರಾಜ್ಯದಲ್ಲಿ ಅಳಿಸಲಾಗದ ಮುದ್ರೆ ಒತ್ತಿದ್ದಾರೆ, (ಏಜೆನ್ಸೀಸ್).