ವಿರಾಟ್​ ಕೊಹ್ಲಿ ಮತ್ತು ಎಂ.ಎಸ್​. ಧೋನಿ  
ಕ್ರಿಕೆಟ್

ಎಂ.ಎಸ್​. ಧೋನಿ ಕೊಹ್ಲಿಯನ್ನು ಎಷ್ಟು ಇಷ್ಟಪಡುತ್ತಾರೆ ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿ...Virat Kohli

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆಡಲು ಸಜ್ಜಾಗುತ್ತಿರುವ ಟೀಮ್​ ಇಂಡಿಯಾ
  • ನವೆಂಬರ್ 30ರಂದು ರಾಂಚಿಯಲ್ಲಿ ನಡೆಯಲಿದೆ ಮೊದಲ ಪಂದ್ಯ
  • ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಿವಾಸವು ಕೂಡ ರಾಂಚಿಯಲ್ಲೇ ಇದೆ
  • ಭಾರತೀಯ ಆಟಗಾರರಿಗೆ ಭೋಜನ ಕೂಟ ಆಯೋಜಿಸಿದ ಎಂ.ಎಸ್​. ಧೋನಿ
Virat Kohli : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಮ್​ ಇಂಡಿಯಾ 2-0 ಅಂತರದಿಂದ ಸೋತಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಇದೀಗ ಈ ಎರಡೂ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಸರಣಿಯ ಭಾಗವಾಗಿ ಮೊದಲ ಪಂದ್ಯ ನವೆಂಬರ್ 30ರಂದು ರಾಂಚಿಯಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಈಗಾಗಲೇ ರಾಂಚಿಯನ್ನು ತಲುಪಿದ್ದಾರೆ.
ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಿವಾಸವು ಕೂಡ ರಾಂಚಿಯಲ್ಲೇ ಇದೆ. ಗುರುವಾರ ರಾತ್ರಿ ತಮ್ಮ ನಿವಾಸದಲ್ಲಿ ಭಾರತೀಯ ಆಟಗಾರರಿಗೆ ಧೋನಿ ಅವರು ಭೋಜನ ಕೂಟವನ್ನು ಆಯೋಜಿಸಿದ್ದರು. ಈ ವೇಳೆ ಎಲ್ಲ ಆಟಗಾರರು ಹೋಟೆಲ್‌ನಿಂದ ಧೋನಿ ಮನೆಯವರೆಗೆ ಬಿಗಿ ಭದ್ರತೆಯಲ್ಲಿ ತೆರಳಿದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ವಿರಾಟ್ ಕೊಹ್ಲಿ, ರಿಷಭ್ ಪಂತ್, ರುತುರಾಜ್ ಗಾಯಕ್ವಾಡ್ ಮತ್ತು ಇನ್ನೂ ಅನೇಕರು ಗುರುವಾರ ಧೋನಿ ಮನೆಗೆ ಭೇಟಿ ನೀಡಿದ್ದರು. ಧೋನಿ ಮತ್ತು ಕೊಹ್ಲಿ ನಡುವಿನ ಬಾಂಧವ್ಯ ಎಷ್ಟು ಅದ್ಭುತವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಭೋಜನದ ನಂತರ, ಸ್ವತಃ ಧೋನಿ ಅವರೇ ಕೊಹ್ಲಿಯನ್ನು ತಮ್ಮ ಸ್ವಂತ ಕಾರಿನಲ್ಲಿ ಟೀಮ್ ಇಂಡಿಯಾ ತಂಗಿದ್ದ ಹೋಟೆಲ್‌ಗೆ ಕರೆದೊಯ್ದರು. ಧೋನಿ ಕಾರು ಚಲಾಯಿಸುತ್ತಿದ್ದಾಗ, ಕೊಹ್ಲಿ ಪಕ್ಕದಲ್ಲೇ ಕುಳಿತಿರುವ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲೂ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಆಡಲಿದ್ದಾರೆ. ಆಸ್ಟ್ರೇಲಿಯಾ ಏಕದಿನ ಸರಣಿಯ ನಂತರ, ರೋಹಿತ್ ಮತ್ತು ವಿರಾಟ್ ಮತ್ತೊಮ್ಮೆ ಭಾರತ ತಂಡಕ್ಕಾಗಿ ಮೈದಾನಕ್ಕಿಳಿಯಲಿದ್ದಾರೆ. ಏಕದಿನ ಸರಣಿಗೆ ಕೆ.ಎಲ್. ರಾಹುಲ್ ಅವರನ್ನು ನಾಯಕನನ್ನಾಗಿ ಪರಿಗಣಿಸಲಾಗಿದೆ. ಗಾಯದ ಕಾರಣದಿಂದಾಗಿ ನಿಯಮಿತ ನಾಯಕ ಶುಭಮಾನ್​ ಗಿಲ್ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ತವರಿನಲ್ಲೇ ಸೋತಿರುವ ಭಾರತ ತಂಡ, ಏಕದಿನ ಸರಣಿಯಲ್ಲಿ ಮೇಲುಗೈ ಸಾಧಿಸಲು ದೃಢನಿಶ್ಚಯ ಹೊಂದಿದೆ. ಆಟಗಾರರು ಪ್ರಸ್ತುತ ಏಕದಿನ ಸರಣಿಯನ್ನು ಗೆಲ್ಲುವ ಮೂಲಕ ತಮ್ಮ ವಿರುದ್ಧ ಕೇಳಿ ಬರುತ್ತಿರುವ ಟೀಕೆಗಳಿಗೆ ಖಡಕ್ಕೆ ಉತ್ತರ ಕೊಡಲು ಭಾರಿ ಸಿದ್ಧತೆಯನ್ನು ನಡೆಸುತ್ತಿದ್ದಾರೆ, (ಏಜೆನ್ಸೀಸ್​).