ಟಿ20 ವಿಶ್ವಕಪ್​ ಗೆದ್ದ ಭಾರತ ತಂಡಕ್ಕೆ ನೀತಾ ಎಂ. ಅಂಬಾನಿ ಅಭಿನಂದನೆ 
ಕ್ರಿಕೆಟ್

ಟಿ20 ವಿಶ್ವಕಪ್​ ಗೆದ್ದ ಭಾರತ ತಂಡಕ್ಕೆ ನೀತಾ ಎಂ. ಅಂಬಾನಿ ಅಭಿನಂದನೆ

ಮುಂಬೈ: ಅಹಮದಾಬಾದ್​ನಲ್ಲಿ ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡವನ್ನು 96 ರನ್​ಗಳಿಂದ ಮಣಿಸಿ ಸತತ ಎರಡನೇ ಮತ್ತು ಒಟ್ಟಾರೆ ಮೂರನೇ ಬಾರಿ ಟಿ20 ವಿಶ್ವಕಪ್​ (ICC Men’s T20 World Cup) ಪ್ರಶಸ್ತಿ ಗೆದ್ದುಕೊಂಡ ಭಾರತ ತಂಡದ ಐತಿಹಾಸಿಕ ಸಾಧನೆಗೆ ರಿಲಯನ್ಸ್​ ಫೌಂಡೇಶನ್​ನ (Reliance Foundation) ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಎಂ. ಅಂಬಾನಿ (Nita M. Ambani) ಅವರು ಅಭಿನಂದನೆ ಸಲ್ಲಿಸಿದ್ದಾರೆ. 
'ಈ ಚಾರಿತ್ರಿಕ ಗೆಲುವು ಶತಕೋಟಿಗೂ ಅಧಿಕ ಹೃದಯಗಳು ಹೆಮ್ಮೆ ಮತ್ತು ಸಂತೋಷದಿಂದ ಮಿಡಿಯುವಂತೆ ಮಾಡಿದೆ. ಐಸಿಸಿ ಪುರುಷರ ಟಿ20 ವಿಶ್ವಕಪ್​ ಟ್ರೋಫಿ ಎತ್ತಿಹಿಡಿದ ಮತ್ತು ಟೂರ್ನಿಯ ಇತಿಹಾಸದಲ್ಲೇ ಮೂರು ಬಾರಿ ಪ್ರಶಸ್ತಿ ಗೆದ್ದುಕೊಂಡ ಮೊದಲ ತಂಡವೆಂಬ ಸಾಧನೆ ಮಾಡಿರುವ ಟೀಮ್​ ಇಂಡಿಯಾಗೆ ಹೃತ್ಪೂರ್ವಕ ಅಭಿನಂದನೆಗಳು' ಎಂದು ನೀತಾ ಎಂ. ಅಂಬಾನಿ ಅವರು ಹೇಳಿದ್ದಾರೆ. 
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​​ಗೆ ಇಳಿದ ಭಾರತ ತಂಡ, 5 ವಿಕೆಟ್​ಗೆ 255 ರನ್​ ಕಲೆಹಾಕಿತು. ಇದು ಟಿ20 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ತಂಡವೊಂದು ದಾಖಲಿಸಿದ ಗರಿಷ್ಠ ಮೊತ್ತವೆನಿಸಿದೆ. ಸಂಜು ಸ್ಯಾಮ್ಸನ್​ (89), ಇಶಾನ್​ ಕಿಶನ್ (54) ಮತ್ತು ಅಭಿಷೇಕ್​ ಶರ್ಮ (52) ಬಿರುಸಿನ ಅರ್ಧಶತಕದಾಟ ಭಾರತಕ್ಕೆ ರನ್​ಮಳೆ ಹರಿಸಲು ನೆರವಾಯಿತು. ಪ್ರತಿಯಾಗಿ ಜಸ್​ಪ್ರೀತ್​ ಬುಮ್ರಾ (15ಕ್ಕೆ 3 ವಿಕೆಟ್) ಮತ್ತು ಅಕ್ಷರ್ ಪಟೇಲ್ (27ಕ್ಕೆ 3 ವಿಕೆಟ್​) ಮಾರಕ ಬೌಲಿಂಗ್​ ದಾಳಿಗೆ ಕುಸಿದ ನ್ಯೂಜಿಲೆಂಡ್​ ತಂಡ 19 ಓವರ್​ಗಳಲ್ಲಿ 156 ರನ್​ಗಳಿಗೆ ತನ್ನೆಲ್ಲ ವಿಕೆಟ್​ ಕಳೆದುಕೊಂಡು ಶರಣಾಯಿತು. ಭಾರತ ಈ ಮುನ್ನ 2007ರಲ್ಲಿ ಮಹೇಂದ್ರ ಸಿಂಗ್​​ ಧೋನಿ ಮತ್ತು 2024ರಲ್ಲಿ ರೋಹಿತ್ ಶರ್ಮ ನಾಯಕತ್ವದಲ್ಲಿ ಟಿ20 ವಿಶ್ವಕಪ್​ ಪ್ರಶಸ್ತಿ ಗೆದ್ದುಕೊಂಡಿತ್ತು. 
'ನಮ್ಮ ಉತ್ಸಾಹಭರಿತ ಅಭಿಮಾನಿಗಳ ಎದುರು, ತವರು ನೆಲದಲ್ಲಿ ಇದನ್ನು ಸಾಧಿಸಿರುವುದು ಈ ವಿಜಯವನ್ನು ಇನ್ನಷ್ಟು ವಿಶೇಷಗೊಳಿಸಿದೆ. ನಿರ್ಭೀತ ಮನೋಭಾವ, ಅಸಾಧಾರಣ ಧೈರ್ಯ ಮತ್ತು ಅಚಲ ನಂಬಿಕೆಯೊಂದಿಗೆ ನಮ್ಮ ಆಟಗಾರರು ಭಾರತದ ನೀಲಿ ಬಣ್ಣದ ಜೆರ್ಸಿಯ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದರು. ಸೂರ್ಯಕುಮಾರ್ ಯಾದವ್​ ಬಳಗವನ್ನು ನರೇಂದ್ರ ಮೋದಿ ಸ್ಟೇಡಿಯಂನ ಪ್ರೇಕ್ಷಕರ ಸ್ಟ್ಯಾಂಡ್‌ಗಳಿಂದ, ತಮ್ಮ ಮನೆಗಳಿಂದ ಮತ್ತು ಪ್ರಪಂಚದ ಎಲ್ಲ ಮೂಲೆಯಿಂದಲೂ ಹುರಿದುಂಬಿಸಿದ ಪ್ರತಿಯೊಬ್ಬ ಭಾರತೀಯನಿಗೂ ಈ ಗೆಲುವು ಸೇರಿದೆ. ಈ ವಿಜಯದೊಂದಿಗೆ ತ್ರಿವರ್ಣ ಧ್ವಜವು ಇನ್ನಷ್ಟು ಎತ್ತರದಲ್ಲಿ ಮತ್ತು ಪ್ರಕಾಶಮಾನವಾಗಿ ಹಾರಾಡುತ್ತಿದೆ. ಇಡೀ ದೇಶ ಈ ಐತಿಹಾಸಿಕ ಗೆಲುವನ್ನು ಅಪಾರ ಹೆಮ್ಮೆ ಮತ್ತು ಸಂತೋಷದಿಂದ ಆಚರಿಸುತ್ತಿದೆ. ಇಂಥ ಕ್ಷಣಗಳು ಒಂದು ರಾಷ್ಟ್ರವನ್ನು ಒಂದುಗೂಡಿಸುವ ಮತ್ತು ಭಾರತಕ್ಕಾಗಿ ದೊಡ್ಡ ಕನಸು ಕಾಣಲು ಯುವ ಪೀಳಿಗೆಯನ್ನು ಪ್ರೇರೇಪಿಸುವ ಕ್ರೀಡೆಯ ಶಕ್ತಿಯನ್ನು ನಮಗೆ ನೆನಪಿಸುತ್ತಿವೆ' ಎಂದು ನೀತಾ ಎಂ. ಅಂಬಾನಿ ಅವರು ಹೇಳಿದ್ದಾರೆ.