- ಧೋನಿ, ಕೊಹ್ಲಿ, ರೋಹಿತ್ ಮೀರಿಸಿದ ಟೀಮ್ ಇಂಡಿಯಾದ ಯುವ ಕ್ರಿಕೆಟಿಗ
- 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ
- ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲಾದ ಕ್ರಿಕೆಟಿಗ
ಮುಂಬೈ: ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರಿಗೆ ಅಪಾರ ಸಂಖ್ಯೆಯ ಹಾಗೂ ವಿಶೇಷ ಅಭಿಮಾನಿ ಬಳಗವಿದೆ. ಈ ಬಗ್ಗೆ ಬಹುತೇಕರಿಗೆ ಗೊತ್ತೇ ಇದೆ. ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುವ ಅಭಿಮಾನಿಗಳು, ಅವರು ನಿವೃತ್ತಿ ಹೊಂದಿದರೆ ಕೇವಲ ಸೋಷಿಯಲ್ ಮೀಡಿಯಾ ಅಥವಾ ಖಾಸಗಿ ಕಾರ್ಯಕ್ರಮಗಳಲ್ಲಿ ನೋಡಿ ಸಂಭ್ರಮಿಸುತ್ತಾರೆ. 'ಕ್ಯಾಪ್ಟನ್ ಕೂಲ್' ಮಹೇಂದ್ರ ಸಿಂಗ್ ಧೋನಿ 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿ, ಇದೀಗ ಐಪಿಎಲ್ನಲ್ಲಿ ಮಾತ್ರ ಕಣಕ್ಕಿಳಿಯುತ್ತಿದ್ದಾರೆ. ಇಂದಿಗೂ ಅವರ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ ಎಂಬುದಕ್ಕೆ ಅವರು ಮೈದಾನಕ್ಕಿಳಿದಾಗ ಸ್ಪಷ್ಟವಾಗುತ್ತದೆ. ಮತ್ತೊಂದೆಡೆ, 'ರೋಕೊ' ಜೋಡಿ ಪ್ರಸ್ತುತ ಏಕದಿನ ಫಾರ್ಮೆಟ್ನಲ್ಲಿ ಮಾತ್ರ ಆಡುತ್ತಿರುವುದರಿಂದ, ಅವರನ್ನು ಸಂಭ್ರಮಿಸುವ ಬಳಗ ಬಹಳ ದೊಡ್ಡದಿದೆ. ಇದು ಒಂದೆಡೆಯಾದರೆ, ಮತ್ತೊಂದೆಡೆ ಈ ವರ್ಷ, ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲಾದ ಕ್ರಿಕೆಟಿಗರ ಪೈಕಿ ಈತನ ಹೆಸರು ಮುಂಚೂಣಿಯಲ್ಲಿದೆ.
ಕೊಹ್ಲಿ, ರೋಹಿತ್, ಧೋನಿ ಅವರಂತಹ ದಿಗ್ಗಜರ ಹೆಸರುಗಳನ್ನೇ ಹಿಂದಿಕ್ಕಿ, ತನ್ನ ಹೆಸರನ್ನು ನೆಟ್ಟಿಗರು ಅತಿ ಹೆಚ್ಚಾಗಿ ಗೂಗಲ್‌ನಲ್ಲಿ ಹುಡುಕುವಂತೆ ಮಾಡಿರುವ ಆಟಗಾರ ಬೇರಾರು ಅಲ್ಲ, ಆತನೇ ಟೀಮ್ ಇಂಡಿಯಾದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ. 14 ವರ್ಷ ವಯಸ್ಸಿನ ವೈಭವ್, ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಐಪಿಎಲ್, ಭಾರತ 'ಎ' ಪಂದ್ಯಗಳು ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಈ ಯುವ ಬ್ಯಾಟರ್, ಟೀಮ್ ಇಂಡಿಯಾದ ಭರವಸೆಯ ಓಪನರ್ ಎಂಬ ಬಲವಾದ ನಂಬಿಕೆಗೆ ಅರ್ಹರಾಗಿದ್ದಾರೆ.
ತಮ್ಮ ಬ್ಯಾಟಿಂಗ್ ಶೈಲಿಯ ಮೂಲಕವೇ ಇಂದು ಅನೇಕರ ಗಮನ ಸೆಳೆದಿರುವ ವೈಭವ್, 12ನೇ ವಯಸ್ಸಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಯುವ ಕ್ರಿಕೆಟಿಗ. ಈ ಮೂಲಕ ಕ್ರಿಕೆಟ್ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಈಗ, ಗೂಗಲ್ ಇಯರ್ ಇನ್ ಸರ್ಚ್ 2025 ವರದಿಯ ಪ್ರಕಾರ, ವೈಭವ್ ಹೆಸರು ಮೊದಲ ಸ್ಥಾನದಲ್ಲಿದೆ. ಮತ್ತೊಬ್ಬ ಯುವ ಕ್ರಿಕೆಟಿಗ ಪಂಜಾಬ್ ಕಿಂಗ್ಸ್ ಆಟಗಾರ ಪ್ರಿಯಾಂಶ್ ಆರ್ಯ ಎರಡನೇ ಸ್ಥಾನದಲ್ಲಿದ್ದಾರೆ. ಈ ಇಬ್ಬರ ನಂತರ, ಅಭಿಷೇಕ್ ಶರ್ಮ ಮತ್ತು ಶೇಖ್ ರಶೀದ್ ಇದ್ದಾರೆ. ಅದೇ ರೀತಿ, ಮಹಿಳಾ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಜೆಮಿಮಾ ರೋಡ್ರಿಗಸ್ ಹೆಸರು ಕೂಡ ಗೂಗಲ್‌ನಲ್ಲಿ ಸರ್ಚ್ ಆಗಿದೆ,(ಏಜೆನ್ಸೀಸ್).