ಟೀಮ್ ಇಂಡಿಯಾ ವೇಗಿ ಮೊಹಮ್ಮದ್​ ಸಿರಾಜ್  
ಕ್ರಿಕೆಟ್

ಐರ್ಲೆಂಡ್​, ಇಂಗ್ಲೆಂಡ್​ ಟೂರ್​ನಿಂದ ಹೊರಬಿದ್ದ ಸಿರಾಜ್​! ಸ್ಟಾರ್​ ವೇಗಿಯ ಬದಲಿಗೆ ಕನ್ನಡಿಗನಿಗೆ ಅವಕಾಶ; ಹೀಗಿದೆ ಬಿಸಿಸಿಐ ಉತ್ತರ

ಪ್ರಮುಖ ಮುಖ್ಯಾಂಶಗಳು

  • ಐರ್ಲೆಂಡ್​-ಇಂಗ್ಲೆಂಡ್​ ಟೂರ್​ನಿಂದ ವೇಗಿ ಮೊಹಮ್ಮದ್​​ ಸಿರಾಜ್​ ಔಟ್​
  • ಟೀಮ್​ ಇಂಡಿಯಾದಲ್ಲಿ ಪ್ರಮುಖ ಬದಲಾವಣೆ
  • ಸಿರಾಜ್ ಬದಲಿಗೆ ಕನ್ನಡಿಗನಿಗೆ ಅವಕಾಶ
Team India: ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗೆ ಈಗಾಗಲೇ ಭಾರತ ತಂಡವನ್ನು ಅಧಿಕೃತವಾಗಿ ಘೋಷಿಸಿರುವ ಬಿಸಿಸಿಐ, ಸ್ಟಾರ್​ ವೇಗಿ ಮೊಹಮ್ಮದ್​ ಸಿರಾಜ್​ ಅಲಭ್ಯತೆಯ ಬೆನ್ನಲ್ಲೇ ಕನ್ನಡಿಗ ಪ್ರಸಿದ್ಧ್​ ಕೃಷ್ಣ ಅವರಿಗೆ ಅವಕಾಶ ನೀಡಿದೆ.  
ಈ ಕುರಿತಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸ್ಪಷ್ಟನೆ ನೀಡಿದ್ದು, ಟಿ20 ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಿರುವುದಾಗಿ ತಿಳಿಸಿದೆ. ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ ಅವರಿಗೆ ವಿಶ್ರಾಂತಿ ನೀಡಿದ್ದು, ಅವರ ಸ್ಥಾನಕ್ಕೆ ಪ್ರಸಿದ್ಧ್​ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಇದು ಇಂಜುರಿ ಸಮಸ್ಯೆಯಿಂದಾಗಿ ಅಲ್ಲ, ಮುನ್ನೆಚ್ಚರಿಕೆ ಕ್ರಮವಾಗಿ ಸಿರಾಜ್‌ಗೆ ವಿಶ್ರಾಂತಿ ನೀಡಲು ನಿರ್ಧರಿಸಿರುವುದು ಎಂದು ಬಿಸಿಸಿಐ ಒತ್ತಿ ಹೇಳಿದೆ. 
ವೈದ್ಯಕೀಯ ತಂಡ ಮತ್ತು ಮ್ಯಾನೇಜ್​ಮೆಂಟ್​ನೊಂದಿಗೆ ಚರ್ಚಿಸಿದ ಬಳಿಕವೇ ಸಿರಾಜ್‌ಗೆ ವಿಶ್ರಾಂತಿಯ ಅಗತ್ಯವಿದೆ ಎಂದು ನಿರ್ಧರಿಸಿತು ಎಂದು ಮಂಡಳಿ ತಿಳಿಸಿದೆ. ದೀರ್ಘ ಅಂತಾರಾಷ್ಟ್ರೀಯ ಆವೃತ್ತಿಯ ದೃಷ್ಟಿಯಿಂದ ಅವರ ಕೆಲಸದ ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ವಿಶ್ರಾಂತಿ ಅವರಿಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಮತ್ತು ಮುಂಬರುವ ನಿರ್ಣಾಯಕ ಸರಣಿಗೆ ಸಿದ್ಧರಾಗಲು ಸಹಾಯ ಮಾಡಲಿದೆ ಎಂದು ಬಿಸಿಸಿಐ ತಿಳಿಸಿದೆ.

ಐರ್ಲೆಂಡ್ ಪ್ರವಾಸ ಯಾವಾಗ?

ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿ ಮೂಲಕ ಟೀಮ್ ಇಂಡಿಯಾ ವಿದೇಶಿ ಪ್ರವಾಸವನ್ನು ಪ್ರಾರಂಭಿಸಲಿದೆ. ಎರಡು ಪಂದ್ಯಗಳು ಜೂನ್ 26 ಮತ್ತು 28ರಂದು ಬೆಲ್‌ಫಾಸ್ಟ್‌ನ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್, ಸ್ಟೋರ್‌ಮಾಂಟ್‌ನಲ್ಲಿ ನಡೆಯಲಿವೆ. ಅದಾದ ನಂತರ ಭಾರತ ತಂಡವು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. 
ಜುಲೈ 1ರಿಂದ 11 ರವರೆಗೆ ನಡೆಯಲಿರುವ ಈ ಸರಣಿಗೆ ಚೆಸ್ಟರ್-ಲೆ-ಸ್ಟ್ರೀಟ್, ಮ್ಯಾಂಚೆಸ್ಟರ್, ನಾಟಿಂಗ್‌ಹ್ಯಾಮ್, ಬ್ರಿಸ್ಟಲ್ ಮತ್ತು ಸೌತಾಂಪ್ಟನ್‌ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಈ ಸರಣಿ ಬಳಿಕ ಭಾರತ ಮತ್ತು ಇಂಗ್ಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗಿಯಾಗಲಿದ್ದು, ಪಂದ್ಯಗಳು ಜುಲೈ 14, 16 ಮತ್ತು 19ರಂದು ಬರ್ಮಿಂಗ್ಹ್ಯಾಮ್, ಕಾರ್ಡಿಫ್ ಮತ್ತು ಲಾರ್ಡ್ಸ್‌ನಲ್ಲಿ ನಡೆಯಲಿವೆ.

ಭಾರತ ಟಿ20 ತಂಡ

ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೆ, ತಿಲಕ್ ವರ್ಮಾ (ಉಪನಾಯಕ), ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಅರ್ಷದೀಪ್​ ಸಿಂಗ್​, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಪ್ರಿನ್ಸ್​ ಯಾದವ್​, ಹರ್ಷಿತ್ ರಾಣಾ, ವೈಭವ್​ ಸೂರ್ಯವಂಶಿ, ಪ್ರಸಿದ್ಧ್ ಕೃಷ್ಣ