ನಾವು ಕೆಲಸಗಾರರು ನನ್ನ ಕೆಲಸ ಕೇವಲ ಬೌಲಿಂಗ್​ ಮಾಡುವುದಷ್ಟೇ... ಶಮಿ ಹೇಳಿಕೆ ಹಿಂದಿದೆ ಈ ನೋವು! Mohammed Shami  
ಕ್ರಿಕೆಟ್

ನಾವು ಕೆಲಸಗಾರರು ನನ್ನ ಕೆಲಸ ಕೇವಲ ಬೌಲಿಂಗ್​ ಮಾಡುವುದಷ್ಟೇ... ಶಮಿ ಹೇಳಿಕೆ ಹಿಂದಿದೆ ಈ ನೋವು! Mohammed Shami

ಪ್ರಮುಖ ಮುಖ್ಯಾಂಶಗಳು

  • ದೇಶೀಯ ಕ್ರಿಕೆಟ್‌ ಮತ್ತು ಐಪಿಎಲ್ ಅದ್ಭುತ ಪ್ರದರ್ಶನ ನೀಡುತ್ತಿರುವ ಮೊಹಮ್ಮದ್​ ಶಮಿ
  • ಉತ್ತಮ ಪ್ರದರ್ಶನ ನೀಡಿದರೂ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಬಗ್ಗೆ ಶಮಿ ಪ್ರತಿಕ್ರಿಯೆ
  • ನಾವು ಕೆಲಸಗಾರರಂತೆ. ನಮ್ಮ ಏಕೈಕ ಕೆಲಸ ಬೌಲಿಂಗ್ ಮಾಡುವುದು ಎಂದ ಅನುಭವಿ ವೇಗಿ
Mohammed Shami  : ಐಪಿಎಲ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಟೀಮ್​ ಇಂಡಿಯಾಗೆ ಆಯ್ಕೆ ಮಾಡದಿರುವ ಬಗ್ಗೆ ಅನುಭವಿ ವೇಗಿ ಮೊಹಮ್ಮದ್ ಶಮಿ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. 
ಇತ್ತೀಚೆಗೆ ಶಮಿ ಬಂಗಾಳ ಪ್ರೊ ಟಿ20 ಲೀಗ್‌ನ ಮೂರನೇ ಸೀಸನ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅಲ್ಲಿ ನೆರೆದಿದ್ದ ಜನರು ಟೀಮ್​ ಇಂಡಿಯಾಗೆ ವಾಪಸ್ಸಾಗುವ ಬಗ್ಗೆ ಶಮಿ ಅವರನ್ನು ಕೇಳಿದರು. ಇದಕ್ಕೆ ಉತ್ತರ ನೀಡಿದ ಶಮಿ, ನಾವು ಕೆಲಸಗಾರರಂತೆ. ನಮ್ಮ ಏಕೈಕ ಕೆಲಸ ಬೌಲಿಂಗ್ ಮಾಡುವುದು. ವೃತ್ತಿಜೀವನದಲ್ಲಿ ಗಾಯಗಳು ಮತ್ತು ಏರಿಳಿತಗಳು ಸಹಜ. ಆದರೆ ಕಠಿಣ ಪರಿಶ್ರಮವನ್ನು ಬಿಡಬೇಡಿ ಎನ್ನುವ ಮೂಲಕ ಬಿಸಿಸಿಐ ಆಯ್ಕೆದಾರರಿಗೆ ಸಂದೇಶ ರವಾನಿಸಿದರು. ಅಲ್ಲದೆ, ಎಷ್ಟೇ ಉತ್ತಮ ಪ್ರದರ್ಶನ ತೋರಿದರು ತಂಡಕ್ಕೆ ಆಯ್ಕೆಯಾಗದ ನೋವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.
ಮಾತು ಮುಂದುವರಿಸಿದ ಶಮಿ, ಐಷಾರಾಮಿ ಜೀವನ ಮತ್ತು ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿಯನ್ನು ಬೆನ್ನಟ್ಟುವುದು ಕ್ರೀಡಾಪಟುವಿಗೆ ದೌರ್ಬಲ್ಯವಾಗಬಹುದು ಎಂದು ಭವಿಷ್ಯದ ಕ್ರೀಡಾಳುಗಳಿಗೆ ಎಚ್ಚರಿಕೆ ನೀಡಿದರು. ನಾನು ಉತ್ತರ ಪ್ರದೇಶದ ಕೃಷಿ ಕುಟುಂಬದಲ್ಲಿ ಜನಿಸಿದರು ಕೂಡ ನನ್ನ ಕರ್ಮಭೂಮಿ ಬಂಗಾಳ ಎಂದರು ಶಮಿ.
ಅಂದಹಾಗೆ, ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ನಲ್ಲಿ ಶಮಿ ಲಖನೌ ಸೂಪರ್​ಜೈಂಟ್ಸ್​ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇತ್ತೀಚೆಗೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 9 ರನ್ ನೀಡಿ 2 ವಿಕೆಟ್ ಪಡೆಯುವ ಮೂಲಕ ಲಖನೌ ತಂಡಕ್ಕೆ ಮೊದಲ ಜಯ ತಂದುಕೊಟ್ಟರು. ಗಾಯದ ನಂತರ ಫಾರ್ಮ್‌ಗೆ ಮರಳಿರುವ ಶಮಿ, ತಮ್ಮ ಚುರುಕಾದ ಬೌಲಿಂಗ್ ಮೂಲಕ ತಾವು ಇನ್ನೂ ಶ್ರೇಷ್ಠ ಲಯದಲ್ಲಿದ್ದೇನೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ದೇಶೀಯ ಕ್ರಿಕೆಟ್‌ನಲ್ಲೂ ಬೆಂಗಾಲ್ ಪರ ಅಮೋಘ ಪ್ರದರ್ಶನ ನೀಡಿರುವ ಶಮಿ, ರಣಜಿ ಟ್ರೋಫಿಯಲ್ಲಿ 37 ವಿಕೆಟ್ ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇಷ್ಟೆಲ್ಲಾ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಕಳೆದ ಮೂರು ವರ್ಷಗಳಿಂದ ಅವರು ರಾಷ್ಟ್ರೀಯ ತಂಡದಿಂದ ಹೊರಗುಳಿದಿರುವುದು ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಮತ್ತೊಮ್ಮೆ ಭಾರತ ತಂಡಕ್ಕೆ ಅವರು ಮರಳುವ ನಿರೀಕ್ಷೆಗಳು ಹೆಚ್ಚಾಗಿವೆ, (ಏಜೆನ್ಸೀಸ್​).