ಕ್ರಿಕೆಟಿಗ ಮೊಹಮ್ಮದ್ ಶಮಿ 
ಕ್ರಿಕೆಟ್

ಟೀಮ್​ ಇಂಡಿಯಾದಲ್ಲಿ ಸಿಗದ ಸ್ಥಾನ... ಮಹತ್ವದ ನಿರ್ಧಾರ ತೆಗೆದುಕೊಂಡ ಮೊಹಮ್ಮದ್​ ಶಮಿ! Mohammed Shami

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ತಂಡಕ್ಕೆ ಮರಳಲು ಎಲ್ಲ ಪ್ರಯತ್ನ ಮಾಡುತ್ತಿರುವ ಮೊಹಮ್ಮದ್ ಶಮಿ
  • ಉತ್ತಮ ಪ್ರದರ್ಶನ ನೀಡಿದರೂ ಆಯ್ಕೆ ಮಾಡದಿದ್ದಕ್ಕೆ ಶಮಿ ಅಸಮಾಧಾನ
  • ಇದೀಗ ಮಹತ್ವದ ನಿರ್ಧಾರ ತೆಗೆದುಕೊಂಡ ಟೀಮ್ ಇಂಡಿಯಾದ ಅನುಭವಿ ವೇಗಿ
ನವದೆಹಲಿ: ಟೀಮ್ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ ( Mohammed Shami ) ರಾಷ್ಟ್ರೀಯ ತಂಡಕ್ಕೆ ಮರಳಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ರಣಜಿ ಟ್ರೋಫಿಯಲ್ಲಿ ಪಶ್ಚಿಮ ಬಂಗಾಳದ ಪರ ಆಡಿ ಉತ್ತಮ ಪ್ರದರ್ಶನ ನೀಡಿದರೂ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡದಿದ್ದಕ್ಕೆ ಶಮಿ ಅಸಮಾಧಾನಗೊಂಡಿದ್ದಾರೆ. ಇದರ ನಡುವೆ ಶಮಿ ಅವರು ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅದೇನೆಂದು ನಾವೀಗ ತಿಳಿದುಕೊಳ್ಳೋಣ.
ದೇಶೀಯ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡುವ ಮೂಲಕ ಆಯ್ಕೆದಾರರಿಗೆ ಸವಾಲು ಹಾಕಲು ಶಮಿ ರೆಡಿಯಾಗುತ್ತಿದ್ದಾರೆ. ಡಿಸೆಂಬರ್‌ನಲ್ಲಿ ನಡೆಯಲಿರುವ ದೇಶೀಯ ಟಿ20 ಟೂರ್ನಮೆಂಟ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡಲು ಶಮಿ ನಿರ್ಧರಿಸಿದ್ದಾರೆ. ತಮ್ಮ ನಿರ್ಧಾರವನ್ನು ಬಂಗಾಳ ಕ್ರಿಕೆಟ್ ಅಸೋಸಿಯೇಷನ್‌ಗೆ ಈಗಾಗಲೇ ತಿಳಿಸಿರುವುದಾಗಿ ರೇವ್ ಸ್ಪೋರ್ಟ್ಸ್ ವರದಿ ಮಾಡಿದೆ.
ಈ ವರ್ಷದ ಮಾರ್ಚ್‌ ತಿಂಗಳಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊಹಮ್ಮದ್ ಶಮಿ ಕೊನೆಯ ಬಾರಿಗೆ ಭಾರತ ಪರ ಆಡಿದ್ದರು. ಆ ಪಂದ್ಯಾವಳಿಯ ನಂತರ, ಶಮಿ ಮತ್ತೆ ಟೀಮ್​ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಂಡಿಲ್ಲ. 2025ರ ಏಷ್ಯಾ ಕಪ್ ಹಾಗೂ ಇಂಗ್ಲೆಂಡ್, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳಿಗೂ ಶಮಿ ಅವರನ್ನು ಆಯ್ಕೆದಾರರು ಆಯ್ಕೆ ಮಾಡಲಿಲ್ಲ.
ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದ ಕಾರಣ ಶಮಿ ಅವರು ದೇಶೀಯ ಕ್ರಿಕೆಟ್​ನಲ್ಲಿ ಆಡುತ್ತಿದ್ದಾರೆ. ಇತ್ತೀಚಿನ ರಣಜಿ ಟ್ರೋಫಿಯಲ್ಲಿ ಅವರು ಬಂಗಾಳ ಪರ ಆಡಿದ್ದರು. ನಾಲ್ಕು ಪಂದ್ಯಗಳಲ್ಲಿ 20 ವಿಕೆಟ್‌ಗಳನ್ನು ಕಬಳಿಸಿ, ಭರ್ಜರಿ ಪ್ರದರ್ಶನ ನೀಡಿದ್ದರು. ಈ ಮೂಲಕ ಆಯ್ಕೆದಾರರಿಗೆ ಉತ್ತರ ನೀಡಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆ ಮಾಡಬಹುದೆಂದು ಶಮಿ ಎದುರು ನೋಡುತ್ತಿದ್ದರು. ಆದರೆ, ನಿರೀಕ್ಷೆ ಹುಸಿಯಾಯಿತು. ಫಿಟ್​ನೆಸ್​ ಇಲ್ಲದ ಕಾರಣ ಅವರನ್ನು ಆಯ್ಕೆ ಮಾಡಿಲ್ಲ ಎಂದು ಆಯ್ಕೆದಾರರು ಸಮಜಾಯಿಷಿ ನೀಡಿದರು. ನಾನು ರಣಜಿಯಲ್ಲಿ ಆಡಿ ಉತ್ತಮ ಪ್ರದರ್ಶನ ನೀಡಿದ್ದೀನಲ್ಲ ಮತ್ತೇನು ಮಾಡಬೇಕು ಎಂದು ಶಮಿ ಪ್ರತಿಕ್ರಿಯಿಸಿದರು.
ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿಲ್ಲ ಎಂಬ ಅಸಮಾಧಾನ ಇದ್ದರು ಕೂಡ ದೇಶಿಯ ಪಂದ್ಯಾವಳಿಯಲ್ಲಿ ಮುಂದುವರಿಯಲು ಶಮಿ ಬಯಸಿದ್ದಾರೆ. ಅಲ್ಲದೆ, ಮುಂದಿನ ವರ್ಷ ಐಪಿಎಲ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ಪರ ಆಡಲಿದ್ದಾರೆ. ಇತ್ತೀಚೆಗಷ್ಟೇ ಸನ್‌ರೈಸರ್ಸ್ ಹೈದರಾಬಾದ್ ತಂಡ ಶಮಿಯನ್ನು ಲಖನೌ ಸೂಪರ್ ಜೈಂಟ್ಸ್‌ಗೆ ವಿನಿಮಯ ಮಾಡಿಕೊಂಡಿತು. ಶಮಿ ಅವರು ಲಖನೌ ತಂಡದಿಂದ 10 ಕೋಟಿ ರೂ.ಗಳನ್ನು ಪಡೆಯಲಿದ್ದಾರೆ, (ಏಜೆನ್ಸೀಸ್​).