ಎಲ್ಲವನ್ನು ಒಪ್ಪಿ ಮುಂದೆ ಸಾಗುವ ಸಮಯ... ಶಮಿ, ಭುವನೇಶ್ವರ್‌ಗೆ ಬಗ್ಗೆ ಆಕಾಶ್ ಚೋಪ್ರಾ ಅಚ್ಚರಿ ಹೇಳಿಕೆ..! Aakash Chopra  
ಕ್ರಿಕೆಟ್

ಎಲ್ಲವನ್ನು ಒಪ್ಪಿ ಮುಂದೆ ಸಾಗುವ ಸಮಯ... ಶಮಿ, ಭುವನೇಶ್ವರ್‌ಗೆ ಬಗ್ಗೆ ಆಕಾಶ್ ಚೋಪ್ರಾ ಅಚ್ಚರಿ ಹೇಳಿಕೆ..! Aakash Chopra

ಪ್ರಮುಖ ಮುಖ್ಯಾಂಶಗಳು

  • ವೆಸ್ಟ್ ಇಂಡೀಸ್ ಸರಣಿಯಿಂದ ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ಔಟ್
  • ಶಮಿ ಮತ್ತು ಭುವನೇಶ್ವರ್ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ಆಕಾಶ್ ಚೋಪ್ರಾ ಆತಂಕ
  • ಹೊಸ ಆಟಗಾರರಿಗೆ ಮಣೆ ಹಾಕುತ್ತಿರುವುದು ಆಯ್ಕೆಗಾರರ ನಿರ್ಧಾರ
  • ದುಲೀಪ್ ಟ್ರೋಫಿ ಫೈನಲ್ ಮೂಲಕ 100ನೇ ಪ್ರಥಮ ದರ್ಜೆ ಪಂದ್ಯ ಪೂರೈಸಿದ ಶಮಿ
ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಬುಧವಾರ ಪ್ರಕಟಿಸಲಾದ ಭಾರತ ತಂಡದಲ್ಲಿ ಹಿರಿಯ ವೇಗದ ಬೌಲರ್‌ಗಳಾದ ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ಅವರಿಗೆ ಸ್ಥಾನ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ( Aakash Chopra ), ಇಬ್ಬರು ಆಟಗಾರರ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಐಪಿಎಲ್ 2026ರ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಭುವನೇಶ್ವರ್ ಕುಮಾರ್ 28 ವಿಕೆಟ್‌ಗಳನ್ನು ಪಡೆದಿದ್ದರು. ಮತ್ತೊಂದೆಡೆ, 2025ರ ಬಳಿಕ ಭಾರತ ತಂಡದಲ್ಲಿ ಆಡದಿರುವ ಮೊಹಮ್ಮದ್ ಶಮಿ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೂ ವೆಸ್ಟ್ ಇಂಡೀಸ್ ಸರಣಿಯ ತಂಡದಲ್ಲಿ ಇಬ್ಬರಿಗೂ ಅವಕಾಶ ನೀಡಿಲ್ಲ.
ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ, ಶಮಿ ಮತ್ತು ಭುವನೇಶ್ವರ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಮುಗಿಯುತ್ತಿರುವ ಸೂಚನೆ ಇದು ಎಂದಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭುವನೇಶ್ವರ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಶಮಿಯನ್ನು ಪರಿಗಣಿಸಬಹುದಾಗಿತ್ತು. ಆದರೆ, ಆಯ್ಕೆಗಾರರು ಇಬ್ಬರನ್ನೂ ಪರಿಗಣಿಸಿಲ್ಲ ಎಂದು ತಿಳಿಸಿದ್ದಾರೆ.
ತಂಡದಲ್ಲಿ ಹಲವು ಹೊಸ ಆಟಗಾರರಿಗೆ ಅವಕಾಶ ನೀಡಲಾಗುತ್ತಿರುವುದನ್ನೂ ಚೋಪ್ರಾ ಉಲ್ಲೇಖಿಸಿದ್ದಾರೆ. ಏಕದಿನ ತಂಡದಲ್ಲಿ ಔಕಿಬ್ ನಬಿ ಹಾಗೂ ಟಿ20 ತಂಡದಲ್ಲಿ ಮಯಾಂಕ್ ಯಾದವ್ ಮತ್ತು ಪ್ರಿನ್ಸ್ ಯಾದವ್ ಅವರಿಗೆ ಅವಕಾಶ ಸಿಕ್ಕಿದೆ. ಆದರೆ, ಭುವನೇಶ್ವರ್ ಮತ್ತು ಶಮಿ ತಂಡದಲ್ಲಿ ಇಲ್ಲದಿರುವುದು ಬದಲಾವಣೆಯ ಸ್ಪಷ್ಟ ಸೂಚನೆ ಎಂದು ಆಕಾಶ್​ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಈ ವಾಸ್ತವವನ್ನು ಒಪ್ಪಿಕೊಂಡು ಮುಂದೆ ಸಾಗಬೇಕಾದ ಸಮಯವೂ ಬಂದಿದೆ ಎಂದಿದ್ದಾರೆ.
ಇದರ ನಡುವೆ ಮೊಹಮ್ಮದ್ ಶಮಿ ತಮ್ಮ ಕ್ರಿಕೆಟ್ ಜೀವನದ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ತಲುಪಿದ್ದಾರೆ. ದುಲೀಪ್ ಟ್ರೋಫಿ 2026ರ ಫೈನಲ್‌ನಲ್ಲಿ ಈಸ್ಟ್ ಝೋನ್ ಪರ ಆಡಿದ ಶಮಿ ತಮ್ಮ 100ನೇ ಪ್ರಥಮ ದರ್ಜೆ ಪಂದ್ಯವನ್ನು ಪೂರ್ಣಗೊಳಿಸಿದ್ದಾರೆ. ಈ ಸಾಧನೆಯ ಕುರಿತು ಮಾತನಾಡಿದ ಶಮಿ, 100ನೇ ಪಂದ್ಯ ಯಾವಾಗಲೂ ವಿಶೇಷವಾಗಿರುತ್ತದೆ ಎಂದು ಹೇಳಿದ್ದಾರೆ. 100 ಪ್ರಥಮ ದರ್ಜೆ ಪಂದ್ಯಗಳನ್ನು ಆಡುವುದು ದೀರ್ಘ ಪ್ರಯಾಣ, ತ್ಯಾಗ ಮತ್ತು ಜೀವನದ ಗುರಿಯೊಂದನ್ನು ಸಾಧಿಸಿದಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ತಮ್ಮ ರಾಜ್ಯವನ್ನು ಪ್ರತಿನಿಧಿಸಿ ವಿವಿಧ ಸ್ಥಳಗಳಲ್ಲಿ, ವಿಭಿನ್ನ ಪರಿಸ್ಥಿತಿಗಳಲ್ಲಿ ಪಂದ್ಯಗಳನ್ನು ಆಡಿ ವಿಕೆಟ್ ಪಡೆಯುವುದು ದೊಡ್ಡ ಸಾಧನೆ ಮತ್ತು ಕನಸು ಎಂದು ಶಮಿ ಹೇಳಿದ್ದಾರೆ. ಭಾರತ ತಂಡದಿಂದ ದೂರವಿದ್ದರೂ ತಮ್ಮ ಕ್ರಿಕೆಟ್ ಮೇಲಿನ ಉತ್ಸಾಹ ಮತ್ತು ಹಸಿವು ಹಿಂದಿನಂತೆಯೇ ಉಳಿದಿದೆ ಎಂಬ ಸಂದೇಶವನ್ನು ಶಮಿ ತಮ್ಮ ಮಾತುಗಳ ಮೂಲಕ ನೆನಪಿಸಿದ್ದಾರೆ.
ಶಮಿಯ 100ನೇ ಪ್ರಥಮ ದರ್ಜೆ ಪಂದ್ಯ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಈಸ್ಟ್ ಝೋನ್ ಹಾಗೂ ಸೌತ್ ಝೋನ್ ನಡುವಿನ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಈಸ್ಟ್ ಝೋನ್ ಗೆಲುವು ಸಾಧಿಸಿತು. 2012ರಲ್ಲಿ ಈಸ್ಟ್ ಝೋನ್ ಮೊದಲ ಬಾರಿಗೆ ದುಲೀಪ್ ಟ್ರೋಫಿ ಗೆದ್ದಾಗ ಶಮಿಗೆ 21 ವರ್ಷ. 14 ವರ್ಷಗಳ ಬಳಿಕ ತಂಡ ಮೂರನೇ ಬಾರಿ ಪ್ರಶಸ್ತಿ ಗೆದ್ದಾಗಲೂ ಶಮಿ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದರು, (ಏಜೆನ್ಸೀಸ್​).