ಅಭಿಷೇಕ್ ಶರ್ಮ, ಮೊಹಮ್ಮದ್ ಅಮೀರ್
- ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸದ ಅಭಿಷೇಕ್ ಶರ್ಮ
- ಸತತ ಮೂರು ಪಂದ್ಯಗಳಲ್ಲಿ ಡಕ್ ಔಟ್, ಸೂಪರ್-8 ಮೊದಲ ಪಂದ್ಯದಲ್ಲಿಯೂ ಫ್ಲಾಪ್
- ಅಭಿಷೇಕ್ ಒಬ್ಬ ಟೆಕ್ನಿಕ್ ಇಲ್ಲದೆ ಆಡುವ ಬ್ಯಾಟರ್ ಎಂದ ಪಾಕ್ ಆಟಗಾರ
Abhishek Sharma: ನಿನ್ನೆ (ಫೆ.22) ಅಹಮದಾಬಾದ್ನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೂಪರ್-8 ಹಂತದ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಟೀಮ್ ಇಂಡಿಯಾಗೆ ಭಾರೀ ಟೀಕೆಗಳು ಹರಿದುಬಂದಿವೆ. ಗ್ರೂಪ್ ಸ್ಟೇಜ್ನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಸರಣಿ ಜಯ ಸಾಧಿಸಿದ ಸೂರ್ಯಕುಮಾರ್ ಯಾದವ್ ಪಡೆಗೆ ಸೌತ್ ಆಫ್ರಿಕಾ ಎದುರು ಗೆಲುವಿನ ಓಟ ಮುಂದುವರೆಸಲು ಆಗಲಿಲ್ಲ. ಒಂದೆಡೆ, ಭಾರತ 74 ರನ್ಗಳ ಹೀನಾಯ ಸೋಲು ಅನುಭವಿಸಿದರೆ, ಮೂರು ಡಕ್ಔಟ್ ಬಳಿಕ ಮತ್ತೊಂದು ಪಂದ್ಯದಲ್ಲಿಯೂ ಫ್ಲಾಪ್ ಶೋ ಮುಂದುವರಿಸಿದ ಅಭಿಷೇಕ್ ಶರ್ಮ ಮತ್ತೊಂದೆಡೆ.
ತಂಡದ ಪರ ಸ್ಫೋಟಕ ಇನ್ನಿಂಗ್ಸ್ ಆಡುತ್ತಿದ್ದ ಅಭಿಷೇಕ್ ಶರ್ಮ, ಅದ್ಯಾಕೋ ಟಿ20 ವಿಶ್ವಕಪ್ನಲ್ಲಿ ಮಾತ್ರ ಬ್ಯಾಕ್ ಟು ಬ್ಯಾಕ್ ಡಕ್ಔಟ್ ಆಗುತ್ತಿರುವುದು ಸದ್ಯ ಕ್ರಿಕೆಟ್ ಪ್ರಿಯರನ್ನು ತೀವ್ರ ಕೆರಳಿಸಿದೆ. ಯುಎಸ್ಎ, ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಗಳಲ್ಲಿ ಶೂನ್ಯಕ್ಕೆ ಔಟ್ ಆದ ಅಭಿಷೇಕ್ಗೆ ಸೂಪರ್-8 ಪಂದ್ಯದಲ್ಲಿ ಅವಕಾಶ ನೀಡುವುದಿಲ್ಲ. ಅವರ ಬದಲಿಗೆ ಸಂಜು ಸ್ಯಾಮ್ಸನ್ ಆಡಿಸಬಹುದು ಎಂದೇ ಬಹುತೇಕರು ನಿರೀಕ್ಷಿಸಿದ್ದರು. ಆದ್ರೆ, ಮತ್ತೊಮ್ಮೆ ಅಭಿಷೇಕ್ಗೆ ಅವಕಾಶ ಕೊಟ್ಟ ಮ್ಯಾನೇಜ್ಮೆಂಟ್ ನಡೆಗೆ ಇದೀಗ ಭಾರೀ ಟೀಕೆ, ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಪಾಕಿಸ್ತಾನದ ಆಟಗಾರ ಮೊಹಮ್ಮದ್ ಅಮೀರ್ ಮೊದಲೇ ಆಡಿದ್ದ ಮಾತುಗಳು ಮತ್ತೆ ಮುನ್ನೆಲೆಗೆ ಬಂದಿದೆ.
ಪಾಕ್ ಆಟಗಾರ ಹೇಳಿದ್ದೇನು?
"ಅಭಿಷೇಕ್ ಒಬ್ಬ ಅದ್ಭುತ ಬ್ಯಾಟರ್ ಏನಲ್ಲ. ಆತ ಸ್ಲಾಗರ್ (ಟೆಕ್ನಿಕ್ ಇಲ್ಲದೆ ಆಡುವ ಕ್ರಿಕೆಟಿಗ). ಅಭಿಷೇಕ್ರನ್ನು ನಾನು ನಮ್ಮದೇ ತಂಡದ ಬ್ಯಾಟರ್ ಸೈಮ್ ಆಯುಬ್ಗೆ ಹೋಲಿಸುತ್ತೇನೆ. ಕಾರಣ, ಆಯುಬ್ ಬಂದಾಗ ಅವನಿಗೆ ಯಾವ ಕಡೆ ಹೊಡೆಯಬೇಕು ಅನ್ನೋದೇ ಗೊತ್ತಿರಲಿಲ್ಲ. ಆಡಬಾರದ ಜಾಗದಲ್ಲಿ ಆಡ್ತಿದ್ದ. ಲೆಗ್ಸೈಡ್ ರನ್ಗಳನ್ನು ಕಲೆಹಾಕುತ್ತಿದ್ದ. ಬಾಲ್ ನಾಲ್ಕನೇ ಅಥವಾ ಐದನೇ ಸ್ಟಂಪ್ನತ್ತ ಬಂದರೆ ಅವನಿಗೆ ಏನು ಮಾಡಬೇಕೋ ತಿಳಿಯುತ್ತಿರಲಿಲ್ಲ. ಅಭಿಷೇಕ್ ಕೂಡ ಹಾಗೆಯೇ" ಎಂದಿದ್ದರು.
ಪಾಕಿಸ್ತಾನಿ ಟಿವಿಯಲ್ಲಿ ಮಾತನಾಡಿದ ಅಮೀರ್, ನಾನು ನನ್ನ ಹೇಳಿಕೆಗೆ ಈಗಲೂ ಬದ್ಧ. ಇಲ್ಲಿ ಅಭಿಷೇಕ್ ಶರ್ಮರನ್ನು ಕೆಳಗೆ ಹಾಕಿ ಮಾತಾಡಬೇಕು ಅಥವಾ ಟೀಕಿಸಬೇಕು ಅಂತ ಸ್ಲಾಗರ್ ಪರ ಬಳಸಲಿಲ್ಲ. ಅವರ ಬಗ್ಗೆ ಆ ರೀತಿ ಹೇಳುತ್ತಿದ್ದದ್ದು ಕೇವಲ ಒಬ್ಬ ಬೌಲರ್ ದೃಷ್ಟಿಯಲ್ಲಿ ಮಾತ್ರ. ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೂ ಅವರ ವಿಫಲರಾಗಿದ್ದಾರೆ. ಕೇವಲ 14 ರನ್ ಗಳಿಸಿದ್ದಾರೆ. ಇಷ್ಟು ರನ್ ಅನ್ನು ಒಂದೇ ಸೈಡ್ನಲ್ಲಿ ಅವರು ಕಲೆಹಾಕಿದ್ದಾರೆ. ಅಭಿಷೇಕ್ ಆಡಿದ್ದೆಲ್ಲ ಕೆಟ್ಟ ಬಾಲ್ಗಳೇ. ಯಾವಾಗ ರಬಾಡ ಉತ್ತಮ ಬೌಲಿಂಗ್ ದಾಳಿಗೆ ಮುಂದಾದರೋ, ಆಗ ಹೇಗೆ ಆಡಬೇಕು ಅನ್ನೋದೇ ಆತನಿಗೆ ತಿಳಿಯಲಿಲ್ಲ ಎಂದರು.
ನನ್ನ ಮಾತು ಕೇಳೋದಾದ್ರೆ...
ಒಬ್ಬ ಹಿರಿಯ ಆಟಗಾರನಾಗಿ ನನ್ನ ಸಲಹೆಯನ್ನು ಅವರು ಕೇಳಿಸಿಕೊಳ್ಳುವುದಾದರೆ, ಈ ಸಂದೇಶ ಅಭಿಷೇಕ್ಗೆ. ನಿಮ್ಮ ಟೆಕ್ನಿಕ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬೆತ್ತಲಾಗಿದೆ. ತಾಳ್ಮೆ ಹಾಗೂ ಜಾಣ್ಮೆಯಿಂದ ಬಾಲ್ಗಳನ್ನು ಆಡುವುದಾದರೆ ಉತ್ತಮ ಎಂದು ಅಮೀರ್ ಯುವ ಬ್ಯಾಟರ್ಗೆ ಸಲಹೆ ನೀಡಿದ್ದಾರೆ,(ಏಜೆನ್ಸೀಸ್).