ಇಶಾನ್ ಕಿಶನ್, ಕಿವೀಸ್ ಕ್ಯಾಪ್ಟನ್ ಮಿಚೆಲ್ ಸ್ಯಾಟ್ನರ್
- ಭಾರತ ವಿರುದ್ಧದ ಎರಡನೇ ಟಿ20 ಸೋತ ನ್ಯೂಜಿಲೆಂಡ್
- ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಸೂರ್ಯಕುಮಾರ್ ಯಾದವ್ ಪಡೆ
- ಎರಡನೇ ಪಂದ್ಯದಲ್ಲೂ ಸೋಲು! ಮ್ಯಾಚ್ ಮುಗಿದ ಬೆನ್ನಲ್ಲೇ ಅಚ್ಚರಿ ಹೇಳಿಕೆ ನೀಡಿದ ಕ್ಯಾಪ್ಟನ್ ಮಿಚೆಲ್ ಸ್ಯಾಂಟ್ನರ್
IND vs NZ T20: ನಿನ್ನೆ (ಜ.24) ರಾಯ್ಪುರದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ 7 ವಿಕೆಟ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿತು. ಈ ಪಂದ್ಯದಲ್ಲಿ ಕಿವೀಸ್ ಪರ ನಾಯಕ ಸ್ಯಾಂಟ್ನರ್ ಅವರ ಸ್ಫೋಟಿಂಗ್ ಬ್ಯಾಟಿಂಗ್ ಶ್ರಮ ಕಡೆಗೂ ಫಲಿಸಲಿಲ್ಲ.
ಪಂದ್ಯ ಸೋತ ಬೆನ್ನಲ್ಲೇ ಬೇಸರದಿಂದ ಮಾತನಾಡಿದ ನ್ಯೂಜಿಲೆಂಡ್ ನಾಯಕ, "ನಮ್ಮ ಬೌಲರ್‌ಗಳು ಭಾರತೀಯ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಎಡವಿದರು. ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಬೇಕಾಗಿತ್ತು. ಬ್ಯಾಟಿಂಗ್‌ನಲ್ಲಿಯೂ ಆಕ್ರಮಣಕಾರಿಯಾಗಿ ಆಡಬೇಕಿತ್ತು. ಟೀಮ್ ಇಂಡಿಯಾಗೆ 200 ರನ್ಗಳ ಬದಲಿಗೆ 300 ರನ್ಗಳ ಬೃಹತ್ ಗುರಿಯನ್ನು ಕೊಟ್ಟರೂ ಸಾಲದು" ಎಂದು ನಗುತ್ತಲೇ ಹೇಳಿದರು.
"ಭಾರತ ತಂಡದಲ್ಲಿ ಉತ್ತಮ ಬ್ಯಾಟಿಂಗ್ ಆಳವಿದೆ. ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವಾಗಿತ್ತು. ಆದ್ದರಿಂದ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಮೊದಲ ಎಸೆತದಿಂದಲೇ ಉತ್ತಮ ಇನ್ನಿಂಗ್ಸ್ ಆಡಿ, ಹೆಚ್ಚುವರಿ ರನ್ ಗಳಿಸಿದರು. ನಮ್ಮ ತಂಡಕ್ಕೆ ಇನ್ನೂ ಕೆಲವು ಪ್ರಮುಖ ಆಟಗಾರರ ಅವಶ್ಯಕತೆಯಿದೆ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ನಮ್ಮ ತಂಡದ ಆಟಗಾರರೆಲ್ಲರೂ ಫಾರ್ಮ್‌ನಲ್ಲಿರಬೇಕೆಂದು ನಾವು ಬಯಸುತ್ತೇವೆ" ಎಂದರು.
ಪಂದ್ಯದ ವಿವರ
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ, ಕಿವೀಸ್ ಪಡೆಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ, ಬ್ಯಾಟ್ ಮಾಡಿದ ನ್ಯೂಜಿಲೆಂಡ್ 20 ಓವರ್ ಅಂತ್ಯಕ್ಕೆ ಆರು ವಿಕೆಟ್‌ಗಳ ನಷ್ಟಕ್ಕೆ 208 ರನ್ಗಳನ್ನು ಗಳಿಸಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ, ಕೇವಲ 15.2 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 209 ರನ್ಗಳನ್ನು ಸುಲಭವಾಗಿ ತಲುಪಿತು. ತಂಡದ ಪರ ಸೂರ್ಯಕುಮಾರ್ ಯಾದವ್ (37 ಎಸೆತ, ಅಜೇಯ 82 ರನ್), ಇಶಾನ್ ಕಿಶನ್ (32 ಎಸೆತ, 76 ರನ್) ಮತ್ತು ಶಿವಂ ದುಬೆ (18 ಎಸೆತ, ಅಜೇಯ 36 ರನ್) ಉತ್ತಮ ಇನ್ನಿಂಗ್ಸ್ ನೀಡಿದರು,(ಏಜೆನ್ಸೀಸ್).