ಪ್ರೀತಿಯ ನಾಯಿಯೊಂದಿಗೆ ಆಂಡ್ರೀವಾ ಟ್ರೋಫಿ ಗೆದ್ದ ಸಂಭ್ರಮ
ಪ್ಯಾರಿಸ್: ರಷ್ಯಾದ 19 ವರ್ಷದ ಮಿರ‌್ರಾ ಆಂಡ್ರೀವಾ (mirra Andreeva) ಆವೆಮಣ್ಣಿನ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ (Grand Slam) ಮಹಿಳಾ ಸಿಂಗಲ್ಸ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡರು. ಇದರೊಂದಿಗೆ ಹೊಸ ಗ್ರಾಂಡ್ ಸ್ಲಾಂ ಚಾಂಪಿಯನ್ ಎನಿಸಿದ ಅವರು, 1992ರ ನಂತರ ಪ್ಯಾರಿಸ್‌ನಲ್ಲಿ ಪ್ರಶಸ್ತಿ ಗೆದ್ದ ಅತಿ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಭಾಜನರಾದರು. ಅರ್ಹತಾ ಸುತ್ತಿನಿಂದ ಕನಸಿನ ಓಟ ಆರಂಭಿಸಿದ್ದ ಪೋಲೆಂಡ್‌ನ ಮಾಯ ಚ್ವಾಲಿನ್‌ಸ್ಕಾ ಪ್ರಶಸ್ತಿ ಸುತ್ತಿನಲ್ಲಿ ನಿರಾಸೆ ಕಂಡು ರನ್ನರ್‌ಅಪ್‌ಗೆ ಸಮಾಧಾನ ಕಂಡರು.
8ನೇ ಶ್ರೇಯಾಂಕಿತೆ ಮಿರ‌್ರಾ ಆಂಡ್ರೀವಾ ಶನಿವಾರ ನಡೆದ ಫೈನಲ್‌ನಲ್ಲಿ 6-3, 6-2 ನೇರ ಸೆಟ್‌ಗಳಿಂದ ವಿಶ್ವ ನಂ. 114 ಚ್ವಾಲಿನ್‌ಸ್ಕಾ ಎದುರು 51 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು. ಈ ಮೂಲಕ ಕಳೆದ 34 ವರ್ಷಗಳಲ್ಲಿ ರೋಲ್ಯಾಂಡ್ ಗ್ಯಾರಸ್‌ನಲ್ಲಿ ಪ್ರಶಸ್ತಿ ಗೆದ್ದ ಅತಿ ಕಿರಿಯರೆನಿಸಿದರು.
1992ರಲ್ಲಿ ಮೊನಿಕಾ ಸೆಲೆಸ್ 18ನೇ ವಯಸ್ಸಿನಲ್ಲೇ ಗೆದ್ದಿದ್ದರು. ಆಂಡ್ರೀವಾ ಮುಕ್ತ ಟೆನಿಸ್ ಯುಗದಲ್ಲಿ ಒಟ್ಟಾರೆ ಚೊಚ್ಚಲ ಗ್ರಾಂಡ್ ಸ್ಲಾಂ ಗೆದ್ದ 7ನೇ ಕಿರಿಯರಾಗಿದ್ದಾರೆ( youngest player ). 2023ರಲ್ಲಿ ಮೊದಲ ಬಾರಿ ರೋಲ್ಯಾಂಡ್ ಗ್ಯಾರಸ್‌ನಲ್ಲಿ ಪ್ರಧಾನ ಸುತ್ತಿಗೆ ಪ್ರವೇಶಿಸಿದ್ದ ಆಂಡ್ರೀವಾ ಸೆಮಿಫೈನಲ್‌ನಲ್ಲಿ ನಿರಾಸೆ ಕಂಡಿದ್ದರು. 2005ರ ನಂತರ ಜನಿಸಿದವರಲ್ಲಿ ಗ್ರಾಂಡ್ ಸ್ಲಾಂನ ಪುರುಷರ-ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಮೊದಲ ಸಾಧಕಿ ಎಂಬ ಹೆಗ್ಗಳಿಕೆಗೂ ಆಂಡ್ರೀವಾ ಪಾತ್ರರಾಗಿದ್ದಾರೆ.
ತನ್ನ ಕೋಚ್ ಕೊಂಚಿತಾ ಮಾರ್ಟಿನೆಜ್ ಕನಸನ್ನೂ ನನಸಾಗಿಸಿದರು(coach's dream). 2000ರ ಫೈನಲ್‌ನಲ್ಲಿ ಕೊಂಚಿತಾರನ್ನು ಮಣಿಸಿ ಚಾಂಪಿಯನ್ ಆಗಿದ್ದ ಫ್ರಾನ್ಸ್‌ನ ಮೇರಿ ಪಿಯರ್ಸ್ ಅವರಿಂದಲೇ ಪ್ರಶಸ್ತಿ ಸ್ವೀಕರಿಸಿ ಮತ್ತಷ್ಟು ವಿಶೇಷಗೊಳಿಸಿದರು.
30: ಚಾಂಪಿಯನ್ ಆಂಡ್ರೀವಾ 30.85 ಕೋಟಿ ರೂ. ಬಹುಮಾನ ಪಡೆದರೆ, ರನ್ನರ್‌ಅಪ್ ಚ್ವಾಲಿನ್‌ಸ್ಕಾ 15.26 ಕೋಟಿ ರೂ. ಗಳಿಸಿದರು.
3. ಆಂಡ್ರಿವಾ 2000ರ ನಂತರ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದ 3ನೇ ಕಿರಿಯ ಆಟಗಾರ್ತಿ. ಮರಿಯಾ ಶರಪೋವಾ (17 ವರ್ಷ, ವಿಂಬಲ್ಡನ್, 2004), ಎಮ್ಮಾ ರಾಡುಕಾನು (18 ವರ್ಷ, ಯುಎಸ್ ಓಪನ್, 2021) ಹಿಂದಿನ ಕಿರಿಯ ಸಾಧಕಿಯರು.
ಮಹಿಳಾ ಸಿಂಗಲ್ಸ್‌ನಂತೆಯೇ ಪುರುಷರ ವಿಭಾಗದಲ್ಲೂ ಭಾನುವಾರ ಯಾರೇ ಗೆದ್ದರೂ ಚೊಚ್ಚಲ ಗ್ರಾಂಡ್ ಸ್ಲಾಂ ಚಾಂಪಿಯನ್ ಉದಯವಾಗಲಿದೆ. ವಿಶ್ವ ನಂ.3 ಅಲೆಕ್ಸಾಂಡರ್ ಜ್ವೆರೆವ್ ಹಾಗೂ 10ನೇ ಶ್ರೇಯಾಂಕಿತ ಫ್ಲಾವಿಯೊ ಕೊಬೊಲ್ಲಿ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಸ್ಟಾರ್ ಆಟಗಾರರ ನಿರ್ಗಮನ ನಂತರ ಜರ್ಮನಿಯ ಜ್ವೆರೆವ್ ಪ್ರಶಸ್ತಿ ಫೇವರಿಟ್ ಎನಿಸಿದರೂ, ಇಟಲಿಯ ಕೊಬೊಲ್ಲಿ ವರ್ಷಾರಂಭದಲ್ಲಿ ಜ್ವೆರೆವ್‌ಗೆ ತವರಿನಂಗಣದಲ್ಲಿ ಸೋಲುಣಿಸಿದ್ದರು.
ಹಿಂದಿನ 3 ಗ್ರಾಂಡ್ ಸ್ಲಾಂ ಫೈನಲ್‌ನಲ್ಲಿ ರನ್ನರ್ ಅಪ್ ಆಗಿದ್ದ ಜ್ವೆರೆವ್‌ಗೆ 4ನೇ ಗ್ರಾಂಡ್ ಸ್ಲಾಂ ಫೈನಲ್ ಇದಾಗಿದ್ದು, ಕೊಬೊಲ್ಲಿ ಮೊದಲ ಬಾರಿ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. 29 ವರ್ಷದ ಜ್ವೆರೆವ್ ಮೂರು ವರ್ಷಗಳ ಅಂತರದಲ್ಲಿ 2ನೇ ಬಾರಿಗೆ ಪ್ಯಾರಿಸ್‌ನಲ್ಲಿ ಪ್ರಶಸ್ತಿ ಸನಿಹದಲ್ಲಿದ್ದಾರೆ.
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್.