MIvsPBKS  
ಕ್ರಿಕೆಟ್

MIvsPBKS: ಪಂಜಾಬ್‌ಗೆ ತಿಲಕ್ ವರ್ಮಾ ಶಾಕ್: ಮುಂಬೈ ಇಂಡಿಯನ್ಸ್‌ಗೆ 6 ವಿಕೆಟ್‌ಗಳ ಭರ್ಜರಿ ಜಯ!

ಧರ್ಮಶಾಲಾ: ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಗುರುವಾರ ನಡೆದ ಐಪಿಎಲ್ 2026ರ ಹಣಾಹಣಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್‌ಗಳ ರೋಚಕ ಜಯ(MIvsPBKS) ಸಾಧಿಸಿದೆ. ತಿಲಕ್ ವರ್ಮಾ ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಮುಂಬೈ ತಂಡವು ಪಂಜಾಬ್ ನೀಡಿದ್ದ 201 ರನ್‌ಗಳ ಬೃಹತ್ ಗುರಿಯನ್ನು ಇನ್ನು ಒಂದು ಎಸೆತ ಬಾಕಿ ಇರುವಂತೆಯೇ ತಲುಪಿತು.

ತಿಲಕ್ ಮಿಂಚಿನ ಆಟ

201 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೆ ಆರಂಭಿಕ ಆಟಗಾರ ರಯಾನ್ ರಿಕೆಲ್ಟನ್ (48 ರನ್) ಸ್ಫೋಟಕ ಆರಂಭ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಆಟವಾಡಿದ ತಿಲಕ್ ವರ್ಮಾ ಅಜೇಯ 75 ರನ್ ಸಿಡಿಸಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. 19ನೇ ಓವರ್ ಮುಕ್ತಾಯಕ್ಕೆ 186 ರನ್ ಗಳಿಸಿದ್ದ ಮುಂಬೈ, ಕೊನೆಯ ಓವರ್‌ನಲ್ಲಿ ವಿಲ್ ಜ್ಯಾಕ್ಸ್ ಮತ್ತು ತಿಲಕ್ ಅವರ ಸಾಹಸದಿಂದ 205/4 ರನ್ ಗಳಿಸಿ ಗೆಲುವು ಸಂಭ್ರಮಿಸಿತು.

ಶಾರ್ದೂಲ್ ದಾಳಿಗೆ ಪಂಜಾಬ್ ತತ್ತರ

ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್, ಪ್ರಭ್‌ಸಿಮ್ರಾನ್ ಸಿಂಗ್ (57) ಅವರ ಅರ್ಧಶತಕದ ನೆರವಿನಿಂದ 200/8 ರನ್ ಗಳಿಸಿತ್ತು. ಒಂದು ಹಂತದಲ್ಲಿ ದೊಡ್ಡ ಮೊತ್ತದ ಕಡೆಗೆ ಸಾಗುತ್ತಿದ್ದ ಪಂಜಾಬ್‌ಗೆ ಶಾರ್ದೂಲ್ ಠಾಕೂರ್ ಶಾಕ್ ನೀಡಿದರು. ಶಾರ್ದೂಲ್ ಕೇವಲ ಒಂದೇ ಪಂದ್ಯದಲ್ಲಿ 4 ವಿಕೆಟ್ ಪಡೆದು ಪಂಜಾಬ್ ತಂಡದ ಮಧ್ಯಮ ಕ್ರಮಾಂಕವನ್ನು ಧೂಳೀಪಟ ಮಾಡಿದರು. ಕೊನೆಯಲ್ಲಿ ಅಜ್ಮತುಲ್ಲಾ ಓಮರ್ಜಾಯ್ ಮತ್ತು ವಿಷ್ಣು ವಿನೋದ್ ಅವರ ಬಿರುಸಿನ ಬ್ಯಾಟಿಂಗ್ ತಂಡದ ಮೊತ್ತವನ್ನು 200ರ ಗಡಿ ದಾಟಿಸಿತು.

ಹಾರ್ದಿಕ್ ಅನುಪಸ್ಥಿತಿಯಲ್ಲಿ ಬುಮ್ರಾ ನಾಯಕತ್ವ

ನಿಯಮಿತ ನಾಯಕ ಹಾರ್ಡಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ಮುಂಬೈ ತಂಡವನ್ನು ಮುನ್ನಡೆಸಿದರು. ಈ ಸೋಲಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡ ಸತತ ಐದನೇ ಸೋಲಿಗೆ ಶರಣಾಗುವ ಮೂಲಕ ಪಾಯಿಂಟ್ಸ್​​ ಟೇಬಲ್​ನಲ್ಲಿ ಕೆಳಜಾರುವ ಭಯದಲ್ಲಿದೆ,(ಏಜೆನ್ಸೀಸ್​).