- ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 103 ರನ್‌ಗಳ ಹೀನಾಯ ಸೋಲು
- ಕ್ಯಾಚ್ ಹಿಡಿಯುವಾಗ ಮಿಚೆಲ್ ಸ್ಯಾಂಟ್ನರ್ ಭುಜಕ್ಕೆ ಗಾಯ
- ಇಂಪ್ಯಾಕ್ಟ್ ಪ್ಲೇಯರ್ ಅಲ್ಲದೇ ಇದ್ದರೂ ಸ್ಯಾಂಟ್ನರ್ ಬದಲಿಗೆ ಬ್ಯಾಟಿಂಗ್ ಮಾಡಿದ ಶಾರ್ದುಲ್
- ಯಾಕಿಂತ ಮೋಸ ಎಂಬ ಪ್ರಶ್ನೆಗೆ ಎಂಐ ಕೋಚ್ ಸ್ಪಷ್ಟನೆ
MI vs CSK: ನಿನ್ನೆ (ಏ.23) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 19ನೇ ಐಪಿಎಲ್ ಆವೃತ್ತಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 103 ರನ್‌ಗಳ ಭಾರೀ ಅಂತರದ ಗೆಲುವನ್ನು ಸಾಧಿಸಿತು. ಈ ಮೂಲಕ 8ನೇ ಸ್ಥಾನದಲ್ಲಿದ್ದ ಸಿಎಸ್ಕೆ ಇದೀಗ ಉತ್ತಮ ರನ್ರೇಟ್ನಿಂದ 5ನೇ ಸ್ಥಾನಕ್ಕೆ ಜಿಗಿದಿರುವುದು ಸಿಎಸ್ಕೆ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಖುಷಿ ತಂದಿದೆ.
ಈ ಸೀಸನ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರುತ್ತಿರುವ ಮುಂಬೈ ಇಂಡಿಯನ್ಸ್ಗೆ ಇದು ಏಳನೇ ಸೋಲು. ಪ್ರಸ್ತುತ ಟೀಕೆಗಳ ಸುರಿಮಳೆಯನ್ನು ಎದುರಿಸುತ್ತಿರುವ ಹಾರ್ದಿಕ್ ಪಾಂಡ್ಯ ಪಡೆಗೆ ಭಾರೀ ಮುಖಭಂಗ ಉಂಟಾಗಿದೆ. ಉತ್ತಮ ಆಟಗಾರರನ್ನೇ ಹೊಂದಿರುವ ತಂಡದಿಂದಲೇ ಈ ಮಟ್ಟಿಗಿನ ಕಳಪೆ ಪ್ರದರ್ಶನ ಬರುತ್ತಿರುವುದು ಫ್ರಾಂಚೈಸಿಯ ಅಭಿಮಾನಿಗಳಿಗೆ ನಂಬಲು ಅಸಾಧ್ಯವಾಗಿದೆ. ಈ ಮಧ್ಯೆ, ನಿನ್ನೆಯ ಪಂದ್ಯದ ವೇಳೆ, ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ ಅವರ ಕನ್ಕ್ಯುಶನ್ ಬದಲಿ ನಿಯಮದ ದುರುಪಯೋಗ ಮಾಡಿಕೊಂಡ ಆರೋಪವೊಂದು ಎಂಐ ವಿರುದ್ಧ ಕೇಳಿಬಂದಿದೆ.
ಈ ಪಂದ್ಯದಲ್ಲಿ ಚೆನ್ನೈ ಇನ್ನಿಂಗ್ಸ್‌ನ 17ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಈ ಓವರ್ ಅನ್ನು ಜಸ್ಪ್ರೀತ್ ಬುಮ್ರಾ ಬೌಲ್ ಮಾಡಿದರು. ಓವರ್ನ ಐದನೇ ಎಸೆತದಲ್ಲಿ, ಸಿಎಸ್ಕೆ ಬ್ಯಾಟ್ಸ್‌ಮನ್ ಕಾರ್ತಿಕ್ ಶರ್ಮಾ ಬಿಗ್ ಶಾಟ್ ಆಡಿದರು. ಬೌಂಡರಿ ಲೈನ್‌ನಲ್ಲಿ ನಿಂತಿದ್ದ ನ್ಯೂಜಿಲೆಂಡ್ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್, ಈ ಕ್ಯಾಚ್ ಹಿಡಿಯಲು ಪ್ರಯತ್ನಿಸಿದಾಗ ಅವರ ಭುಜಕ್ಕೆ ಗಂಭೀರವಾದ ಪೆಟ್ಟು ಬಿದ್ದಿತು.
ಭುಜದ ನೋವಿನಿಂದ ಬಳಲುತ್ತಿದ್ದ ಸ್ಯಾಂಟ್ನರ್ ಅವರನ್ನು ತಕ್ಷಣವೇ ಮೈದಾನದಿಂದ ಹೊರಗೆ ಕಳುಹಿಸಲಾಯಿತು. ಸಿಎಸ್ಕೆ ನೀಡಿದ ಗುರಿಯನ್ನು ಚೇಸ್ ಮಾಡುವಾಗ ಮುಂಬೈ ಪಡೆಯ ವಿಕೆಟ್ಗಳು ಬ್ಯಾಕ್ ಟು ಬ್ಯಾಕ್ ಉದುರಿದವು. ಈ ವೇಳೆ ಬ್ಯಾಟಿಂಗ್ಗೆ ಬರಲು ಆಗದ ಸ್ಥಿತಿಯಲ್ಲಿಲ್ಲದ ಕಾರಣ, ಅವರ ಜಾಗಕ್ಕೆ ಶಾರ್ದೂಲ್ ಠಾಕೂರ್ ಅವರನ್ನು ಕನ್ಕ್ಯುಶನ್ ಬದಲಿಯಾಗಿ ಕಳುಹಿಸಲಾಯಿತು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಅನೇಕರಿಂದ ಆಕ್ಷೇಪಣೆ ವ್ಯಕ್ತವಾಗಿದೆ.
ನಿಯಮಗಳ ಪ್ರಕಾರ, ತಲೆ ಮತ್ತು ಕುತ್ತಿಗೆಯಂತಹ ಸೂಕ್ಷ್ಮ ಪ್ರದೇಶಗಳಿಗೆ ಗಾಯಗಳಾದರೆ ಮಾತ್ರ ಕನ್ಕ್ಯುಶನ್ ಬದಲಿ ರೂಲ್ನಡಿ ಆಟಗಾರನನ್ನು ಅನುಮತಿಸಲಾಗುತ್ತದೆ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ, ಕನ್ಕ್ಯುಶನ್ ಬದಲಿ ಆಟಗಾರನಿಗೆ ಅಸ್ತು ಎನ್ನುವ ಮೊದಲು ಪಂದ್ಯದ ರೆಫರಿ ಗಾಯದ ತೀವ್ರತೆಯನ್ನು ನಿರ್ಧರಿಸಬೇಕು.
ನೆಟ್ಟಿಗರು ಕಿಡಿ
ಮಿಚೆಲ್ ಸ್ಯಾಂಟ್ನರ್ ಭುಜದ ಗಾಯವನ್ನು ಹೊಂದಿದ್ದರೆ ಕನ್ಕ್ಯುಶನ್ ಬದಲಿ ಆಟಗಾರನನ್ನು ಹೇಗೆ ಅನುಮತಿಸಲು ಸಾಧ್ಯ? ಸ್ಯಾಂಟ್ನರ್ ಅವರ ಭುಜದಲ್ಲಿ ಏನಾದರೂ ಮೆದುಳು ಇದೆಯೇ? ಎಂಬ ಹಲವು ಪ್ರಶ್ನೆಗಳು ಕೇಳಿಬಂದಿವೆ. ಕೆಲವರು, ಮುಂಬೈ ಮೋಸ ಮಾಡಿದೆ ಎಂದು ಜಾಲತಾಣಗಳಲ್ಲಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಜಯವರ್ಧನೆ ಸ್ಪಷ್ಟನೆ
ಪಂದ್ಯ ಸೋತ ಬೆನ್ನಲ್ಲೇ ಈ ಬಗ್ಗೆ ಮಾತನಾಡಿದ ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಮಹೇಲಾ ಜಯವರ್ಧನೆ, "ಸ್ಯಾಂಟ್ನರ್ಗೆ ಆರಂಭದಲ್ಲೇ ತಲೆ ಮತ್ತು ಕುತ್ತಿಗೆಗೆ ಗಾಯವಾಗಿತ್ತು. ಆಟದ ಮಧ್ಯೆ ಭುಜಕ್ಕೂ ಗಾಯವಾಯಿತು. ನಾವು ಅವರನ್ನು ಸ್ಕ್ಯಾನ್‌ಗೆ ಕಳುಹಿಸಿದೆವು. ಅವರು ವಾಪಾಸ್ ಆದಾಗ, ಆಡಲು ಕಷ್ಟವಾಗುತ್ತಿದೆ ಎಂದು ವಿಶ್ರಾಂತಿ ಪಡೆಯಲು ಮುಂದಾದರು. ಇದನ್ನು ಗಮನಿಸಿದ ಬಳಿಕ ನಾವು ಅಂಪೈರ್ ಬಳಿ ಮಾತಾಡಿದೆವು. ಅದರ ನಂತರವೇ ನಾವು ಕನ್ಕ್ಯುಶನ್ ಬದಲಿ ಆಟಗಾರನಾಗಿ ಶಾರ್ದುಲ್ ಅವರನ್ನು ಬ್ಯಾಟಿಂಗ್ಗೆ ಕಳುಹಿಸಿದೆವು ಎಂದರು,(ಏಜೆನ್ಸೀಸ್).