ಕ್ರಿಕೆಟ್ ಅಭಿಮಾನಿಗಳ ಹೊಸ ಕ್ರಷ್ ಮೇಧಾವಿ ಬಿಧುರಿ; ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಮಿಂಚಿದ ಸುಂದರಿ!
ನವದೆಹಲಿ: ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ತಾರೆಯಾಗಿ ಹೊರಹೊಮ್ಮುತ್ತಿರುವ ಮೇಧಾವಿ ಬಿಧುರಿ (
) ಇತ್ತೀಚೆಗೆ ಮಹಿಳಾ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ (WDPL) ತಮ್ಮ ವಿಶಿಷ್ಟ ಸಂಭ್ರಮಾಚರಣೆಯ ಮೂಲಕ ದೇಶದಾದ್ಯಂತ ಗಮನ ಸೆಳೆದಿದ್ದಾರೆ. ಮೈದಾನದಲ್ಲಿ ವಿಕೆಟ್ ಪಡೆದ ಬಳಿಕ ಅವರು ಮಾಡಿದ ‘Gen-Z’ ಶೈಲಿಯ ಸಂಭ್ರಮಾಚರಣೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮೂಲಕ ಅವರು ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಹೊಸ ಕ್ರಷ್ ಎನಿಸಿದ್ದಾರೆ.
2005ರ ಅಕ್ಟೋಬರ್ 29ರಂದು ಜನಿಸಿದ ಮೇಧಾವಿ ಬಿಧುರಿ, ದೆಹಲಿ ಮೂಲದ ಪ್ರತಿಭಾವಂತ ಆಲ್‌ರೌಂಡರ್ ಆಗಿದ್ದಾರೆ. ಬಲಗೈ ಬ್ಯಾಟರ್ ಹಾಗೂ ಲೆಗ್‌ಸ್ಪಿನ್ ಬೌಲರ್ ಆಗಿರುವ ಅವರು ದೆಹಲಿ ಮಹಿಳಾ ತಂಡ ಹಾಗೂ ದೆಹಲಿ 19 ವಯೋಮಿತಿ ತಂಡವನ್ನು ಪ್ರತಿನಿಧಿಸಿದ್ದಾರೆ. ಅಂಡರ್-19 ತಂಡದ ನಾಯಕತ್ವವನ್ನೂ ವಹಿಸಿರುವ ಅವರು, ದೇಶೀಯ ಕ್ರಿಕೆಟ್‌ನಲ್ಲಿ ಭರವಸೆಯ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಬಾಲ್ಯದಿಂದಲೇ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಮೇಧಾವಿ, ದೆಹಲಿಯ ಸ್ಥಳೀಯ ಅಕಾಡೆಮಿಗಳಲ್ಲಿ ಕಠಿಣ ತರಬೇತಿ ಪಡೆದು ತಮ್ಮ ಕೌಶಲ್ಯವನ್ನು ಬೆಳೆಸಿಕೊಂಡರು. ಅವರ ಪರಿಶ್ರಮ ಮತ್ತು ಪ್ರತಿಭೆ ಅವರನ್ನು ವಯೋಮಿತಿ ಕ್ರಿಕೆಟ್‌ನಿಂದ ಹಿರಿಯ ಮಟ್ಟದ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕರೆತಂದಿತು. ಮಹಿಳಾ ಫ್ರಾಂಚೈಸಿ ಟಿ20 ಟೂರ್ನಿಗಳು ಅವರ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿವೆ.
ಮಹಿಳಾ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಸೆಂಟ್ರಲ್ ದೆಹಲಿ ಕ್ವೀನ್ಸ್ ಪರ ಆಡುತ್ತಿರುವ ಮೇಧಾವಿ, ಪ್ರಮುಖ ಲೆಗ್‌ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚಿನ ಪಂದ್ಯದಲ್ಲಿ 4 ಓವರ್‌ಗಳಲ್ಲಿ 24 ರನ್ ನೀಡಿ 2 ವಿಕೆಟ್ ಕಬಳಿಸಿದ ಅವರು ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ಆದರೆ ಅವರ ಹೆಸರು ದೇಶಾದ್ಯಂತ ಚರ್ಚೆಗೆ ಕಾರಣವಾದದ್ದು ಕ್ರಿಕೆಟ್ ಪ್ರದರ್ಶನ ಮಾತ್ರವಲ್ಲ. ವಿಕೆಟ್ ಪಡೆದ ನಂತರ ಅವರು ಮಾಡಿದ 6-7 ಎಂಬ ವಿಶಿಷ್ಟ ‘Gen-Z’ ಸಂಭ್ರಮಾಚರಣೆ ಹಾಗೂ 67ನೇ ಸಂಖ್ಯೆಯ ಜರ್ಸಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿತು. ಈ ಸಂಭ್ರಮಾಚರಣೆಯ ಕಲ್ಪನೆ ಅವರ ಸಹೋದರಿಯದ್ದಾಗಿದ್ದು, ಯುವಜನರಲ್ಲಿ ಜನಪ್ರಿಯವಾಗಿರುವ ಇಂಟರ್‌ನೆಟ್ ಟ್ರೆಂಡ್‌ನಿಂದ ಇದು ಪ್ರೇರಿತವಾಗಿದೆ ಎಂದು ವರದಿಗಳು ತಿಳಿಸಿವೆ.
ಕ್ರಿಕೆಟ್ ಅಭಿಮಾನಿಗಳ ದೃಷ್ಟಿಯಲ್ಲಿ ಮೇಧಾವಿ ಬಿಧುರಿ ಕೇವಲ ವೈರಲ್ ಸೆಲೆಬ್ರಿಟಿ ಅಲ್ಲ; ಭವಿಷ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಸಾಮರ್ಥ್ಯ ಹೊಂದಿರುವ ಯುವ ಪ್ರತಿಭೆ. ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸುತ್ತಿದ್ದರೂ, ತಮ್ಮ ಆಟದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಿ ರಾಷ್ಟ್ರೀಯ ತಂಡದ ಬಾಗಿಲು ತಟ್ಟುವ ಗುರಿಯತ್ತ ಅವರು ಸಾಗುತ್ತಿದ್ದಾರೆ.
ಯುವ ವಯಸ್ಸಿನಲ್ಲೇ ಪ್ರತಿಭೆ, ಆತ್ಮವಿಶ್ವಾಸ ಮತ್ತು ಹೊಸತನದ ಸಂಯೋಜನೆಯೊಂದಿಗೆ ಮುಂದುವರಿಯುತ್ತಿರುವ ಮೇಧಾವಿ ಬಿಧುರಿ, ಭಾರತೀಯ ಮಹಿಳಾ ಕ್ರಿಕೆಟ್‌ನ ಭವಿಷ್ಯದ ಆಶಾಕಿರಣಗಳಲ್ಲಿ ಒಬ್ಬರು ಎನ್ನುವುದರಲ್ಲಿ ಸಂಶಯವಿಲ್ಲ.