ಕ್ರಿಕೆಟ್ ನಿಯಮಗಳಲ್ಲಿ 73 ಬದಲಾವಣೆ ಮಾಡಿದ ಎಂಸಿಸಿ; ಚೆಂಡು-ಬ್ಯಾಟ್ ರೂಲ್ಸ್ ತಿದ್ದುಪಡಿ!
ಲಂಡನ್: ಕ್ರಿಕೆಟ್ (Cricket) ನಿಯಮಾವಳಿಗಳ ಮಹಾರಕ್ಷಕನಾಗಿರುವ "ಮೆರಿಲ್ಬೋನ್ ಕ್ರಿಕೆಟ್ ಕ್ಲಬ್' (MCC), ಚೆಂಡಿನ ತೂಕ&ಗಾತ್ರ, ಬ್ಯಾಟ್ ವಿಧಾನ ಸೇರಿದಂತೆ ಒಟ್ಟಾರೆ 73 ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಟೆಸ್ಟ್ ಸಹಿತ ಬಹುದಿನಗಳ ಪಂದ್ಯಗಳಲ್ಲಿ ವಿಕೆಟ್ ಬಿದ್ದರೂ ದಿನದ ಅಂತಿಮ ಓವರ್ಅನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂಬ ತಿದ್ದುಪಡಿಯೂ ಇದರಲ್ಲಿ ಸೇರಿದೆ. ಮುಂದಿನ ಅಕ್ಟೋಬರ್ 1ರಿಂದ ಕ್ರಿಕೆಟ್ನಲ್ಲಿ ಈ ಬದಲಾವಣೆ ಜಾರಿಗೆ ಬರಲಿದೆ.
"ಕ್ರಿಕೆಟ್ ನಿಯಮಾವಳಿ'ಯಲ್ಲಿ 2022ರ ಬಳಿಕ ಇದೇ ಮೊದಲ ಬಾರಿಗೆ ಬದಲಾವಣೆ ಮಾಡಿರುವ ಎಂಸಿಸಿ, ಆಧುನಿಕ ಕ್ರಿಕೆಟ್ಗೆ ಸೂಕ್ತವೆನಿಸುವಂತೆ ಕೆಲ ನಿಯಮಗಳನ್ನು ಪರಿಷ್ಕರಿಸಿದೆ. ಐಸಿಸಿ (ICC) ಈಗಾಗಲೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬಳಕೆಗೆ ತಂದಿರುವ "ಬೌಂಡರಿ ಗೆರೆ ಸಮೀಪದ ಕ್ಯಾಚ್', "ಶಾರ್ಟ್ ರನ್' ನಿಯಮಗಳೂ ಇದರಲ್ಲಿ ಸೇರಿವೆ.
ಕೀಪರ್ಸ್ ವಿಕೆಟ್ ಮುಂದೆಯೂ ಚೆಂಡು ಹಿಡಿಯಬಹುದು: ವಿಕೆಟ್ ಕೀಪರ್ಗಳು ಬೌಲರ್ ರನ್ಅಪ್ ವೇಳೆ ವಿಕೆಟ್ ಮುಂದೆ ಗ್ಲೌಸ್ ತಂದು ಚೆಂಡು ಹಿಡಿದರೆ ಅದನ್ನು ನೋಬಾಲ್ ಎನ್ನಲಾಗುತ್ತಿತ್ತು. ಚೆಂಡು ಸ್ಟ್ರೆ$ಕರ್ನ ವಿಕೆಟ್ ದಾಟುವ, ಬ್ಯಾಟ್ ಅಥವಾ ಬ್ಯಾಟರ್ಗೆ ಸ್ಪರ್ಶಿಸುವ ಮುನ್ನ ಕೀಪರ್ ವಿಕೆಟ್ನಿಂದ ಮುಂದೆ ಬರಲು ಅವಕಾಶವಿರಲಿಲ್ಲ. ಆದರೆ ಇನ್ನು ಕೀಪರ್ ಹಾಗೆ ಮಾಡಿದರೂ ಅದು ನೋಬಾಲ್ ಆಗುವುದಿಲ್ಲ.
ಡೆಡ್ಬಾಲ್ ನಿಯಮ ಬದಲು: ಎಸೆತವೊಂದರ ಬಳಿಕ ಚೆಂಡು ಯಾವಾಗ "ಡೆಡ್' ಆಗಿದೆ ಎಂದು ನಿರ್ಧರಿಸುವ ನಿಯಮವನ್ನೂ ಎಂಸಿಸಿ ತಿದ್ದುಪಡಿ ಮಾಡಿದೆ. "ಡೆಡ್ಬಾಲ್' ಎಂದು ಪರಿಗಣಿಸಲು ಅದು ಇನ್ನು ಕೀಪರ್ ಅಥವಾ ಬೌಲರ್ ಕೈಸೇರಬೇಕಾಗಿಲ್ಲ. ಅಂತಿಮವಾಗಿ ಫೀಲ್ಡರ್ ಕೈಯಲ್ಲಿ ಅಥವಾ ನೆಲದ ಮೇಲೆ ಚೆಂಡು ಸ್ಥಿರವಾಗಿ ನಿಂತರೂ ಅದು "ಡೆಡ್ಬಾಲ್' ಆಗಲಿದೆ.
ಜೂನಿಯರ್, ಮಹಿಳಾ ಕ್ರಿಕೆಟ್ಗೆ ಭಿನ್ನ ಚೆಂಡು
ಜೂನಿಯರ್ ಮತ್ತು ಮಹಿಳಾ ಕ್ರಿಕೆಟ್ನಲ್ಲಿ ಭಿನ್ನ ತೂಕ ಮತ್ತು ಅಳತೆಯ ಚೆಂಡಿನ ಬಳಕೆಗೆ ಎಂಸಿಸಿ ನಿಯಮ ಬದಲಾವಣೆ ಮಾಡಿದೆ. ಮಹಿಳಾ ಕ್ರಿಕೆಟಿಗರು ಮತ್ತು ಚೆಂಡು ತಯಾರಕರೊಂದಿಗೆ ಚರ್ಚಿಸಿ ಎಂಸಿಸಿ ಈ ಭಿನ್ನ ಚೆಂಡುಗಳನ್ನು ರೂಪಿಸಿದೆ. ಇದರನ್ವಯ ಇನ್ನು ಕ್ರಿಕೆಟ್ ಚೆಂಡುಗಳು, "ಸೈಜ್ 1, 2, 3' ಎಂಬ 3 ಭಿನ್ನ ಗಾತ್ರ&ತೂಕಗಳನ್ನು ಹೊಂದಿರಲಿವೆ. ಸೈಜ್ 1 ಈಗಿರುವ ಚೆಂಡುಗಳೇ ಆಗಿರಲಿದ್ದು, ಪುರುಷರ ಕ್ರಿಕೆಟ್ನಲ್ಲಿ ಇದರ ಬಳಕೆ ಮುಂದುವರಿಯಲಿದೆ. ಸೈಜ್ 2 ಮಹಿಳಾ ಕ್ರಿಕೆಟ್ ಮತ್ತು ಸೈಜ್ 3 ಜೂನಿಯರ್ ಕ್ರಿಕೆಟ್ನಲ್ಲಿ ಬಳಕೆಯಾಗಲಿದೆ.
ಟೆಸ್ಟ್ ಸಹಿತ ಬಹುದಿನ ಪಂದ್ಯಗಳಲ್ಲಿ ಸದ್ಯ ದಿನದ ಕೊನೇ ಓವರ್ನಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಬಿದ್ದರೂ, ಆ ಓವರ್ ಅಲ್ಲಿಗೆ ಸ್ಥಗಿತಗೊಂಡು ದಿನದಾಟ ಮುಕ್ತಾಯಗೊಳ್ಳುತ್ತದೆ. ಆದರೆ ಇನ್ನು ಆ ಓವರ್ನ ಬಾಕಿ ಎಸೆತಗಳನ್ನೂ ಪೂರ್ಣಗೊಳ್ಳುವುದು ಕಡ್ಡಾಯವಾಗಿರುತ್ತದೆ. ವಿಕೆಟ್ ಬಿದ್ದಾಗ ಓವರ್ನ ಕೊನೇ ಎಸೆತವಷ್ಟೇ ಬಾಕಿ ಉಳಿದಿದ್ದರೂ, ಮುಂದಿನ ಬ್ಯಾಟರ್ ಬಂದು ಆ ಎಸೆತ ಎದುರಿಸಬೇಕಾಗುತ್ತದೆ. ಆದರೆ ಇದು ಭೋಜನ ಅಥವಾ ಚಹಾ ವಿರಾಮಕ್ಕೆ ಮೊದಲಿನ ಕೊನೇ ಓವರ್ಗೆ ಅನ್ವಯಿಸುವುದಿಲ್ಲ.
ಲ್ಯಾಮಿನೇಟೆಡ್ ಬ್ಯಾಟ್ಗೆ ಅನುಮತಿ
ಕ್ರಿಕೆಟ್ ಬ್ಯಾಟ್ಗಳಲ್ಲಿ ಹೆಚ್ಚಾಗಿ ಬಳಸಲಾಗುವ ಹಗುರವಾದ "ಇಂಗ್ಲಿಷ್ ವಿಲ್ಲೋ' ಮರದ ಕೊರತೆಯಿಂದಾಗಿ ಕ್ರಿಕೆಟ್ ಜಗತ್ತಿನಲ್ಲಿ ಸದ್ಯ ಆ ಮರದ ಬ್ಯಾಟ್ಗಳ ಅಭಾವ ಉಂಟಾಗಿದೆ ಮತ್ತು ಆ ಬ್ಯಾಟ್ಗಳ ಬೆಲೆಯೂ ಭಾರಿ ಏರಿಕೆ ಕಂಡಿದೆ. ಇದರಿಂದಾಗಿ ಇನ್ನು ಎಲ್ಲ ವಯೋಮಿತಿಯ ಕ್ರಿಕೆಟ್ನಲ್ಲೂ ಲ್ಯಾಮಿನೇಟೆಡ್ ಬ್ಯಾಟ್ಗಳ ಬಳಕೆಗೆ ಎಂಸಿಸಿ ಅವಕಾಶ ಕಲ್ಪಿಸಿದೆ. ಸದ್ಯ ಜೂನಿಯರ್ ಕ್ರಿಕೆಟ್ನಲ್ಲಿ ಮಾತ್ರ ಇದರ ಬಳಕೆಗೆ ಅವಕಾಶ ನೀಡಲಾಗಿತ್ತು. ಇದು ಮೂರು ಮರದ ತುಂಡುಗಳಿಂದ ತಯಾರಿಸಲಾದ (ಟೈಪ್ ಡಿ) ಬ್ಯಾಟ್ ಆಗಿದೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಾತ್ರ ಒಂದೇ ಮರದ ತುಂಡಿನ ಬ್ಯಾಟ್ ಬಳಕೆ ಮುಂದುವರಿಯಬೇಕೆಂದು ಎಂಸಿಸಿ ಸ್ಪಷ್ಟಪಡಿಸಿದೆ.
ಎಂಸಿಸಿ ಇದೇ ಮೊದಲ ಬಾರಿಗೆ ಓವರ್ಥ್ರೋ ಬಗ್ಗೆ ವ್ಯಾಖ್ಯಾನ ನೀಡಿದ್ದು, ಬ್ಯಾಟರ್ ರನ್ ಕಸಿಯುವುದನ್ನು ತಡೆಯಲು ಅಥವಾ ರನೌಟ್ ಮಾಡಲು ಯತ್ನಿಸುವಾಗ ವಿಕೆಟ್ನತ್ತ ಚೆಂಡು ಎಸೆಯುವುದಷ್ಟೇ ಓವರ್ಥ್ರೋ ಎಂದು ಪರಿಗಣಿಸಲಾಗುತ್ತದೆ. ಚೆಂಡನ್ನು ತಡೆಯುವ ಯತ್ನದಲ್ಲಿ ಮಿಸ್ಫೀಲ್ಡ್ ಮಾಡಿದಾಗ ಅಥವಾ ಸಮೀಪದ ಫೀಲ್ಡರ್ಗೆ ಚೆಂಡನ್ನು ದಾಟಿಸುವುದು ಓವರ್ಥ್ರೋ ಆಗುವುದಿಲ್ಲ ಎಂದು ಎಂಸಿಸಿ ಸ್ಪಷ್ಟಪಡಿಸಿದೆ.
ಹಿಟ್ ವಿಕೆಟ್ ನಿಯಮದಲ್ಲೂ ಎಂಸಿಸಿ ತಿದ್ದುಪಡಿ ತಂದಿದೆ. ಬ್ಯಾಟರ್ ದೇಹದ ಸಮತೋಲ ತಪ್ಪಿ ತಾನಾಗಿಯೇ ಸ್ಟಂಪ್ಸ್ ಬೀಳಿಸಿದರೆ ಅದು ಎಂದಿನಂತೆ ಹಿಟ್ ವಿಕೆಟ್ ಎನಿಸಲಿದೆ. ಆದರೆ ಬ್ಯಾಟರ್ ತನ್ನ ದೇಹದ ಸಮತೋಲನ ಕಾಪಾಡುವ ಪ್ರಯತ್ನದಲ್ಲಿ ಫೀಲ್ಡರ್ ಅಥವಾ ಕೀಪರ್ಗೆ ಡಿಕ್ಕಿ ಹೊಡೆದಾಗ ಸ್ಟಂಪ್ಸ್ ಬಿದ್ದರೆ ಅದನ್ನು ಹಿಟ್ ವಿಕೆಟ್ ನೀಡಲಾಗುವುದಿಲ್ಲ ಎಂದು ಎಂಸಿಸಿ ವಿವರಿಸಿದೆ.