1 ಬಾಲ್ಗೆ 2.5 ಕೋಟಿ... ಆತ ಎಸೆಯುವ "ಬೆಂಕಿ ಚೆಂಡು"ಗಳನ್ನೇ ನಂಬಿ 18 ಕೋಟಿ ಸುರಿದ KKRಗೆ ಕೊನೇಲಿ ಸಿಕ್ಕಿದ್ದು ಚೊಂಬು!
- ಅಂತಿಮ ಹಂತದಲ್ಲಿ ಐಪಿಎಲ್ ಪ್ಲೇ ಆಫ್ ರೇಸ್ನಿಂದ ಹೊರಬಿದ್ದ ಕೆಕೆಆರ್ ತಂಡ
- 2024ರಲ್ಲಿ ಚಾಂಪಿಯನ್ಸ್ ಆಗಿದ್ದ ಕೆಕೆಆರ್ ತಂಡ ಕಳೆದ ಎರಡು ಸೀಸನ್ಗಳಲ್ಲಿ ಭಾರಿ ವೈಫಲ್ಯ
- ದುಬಾರಿ ಆಟಗಾರರೇ ಕೋಲ್ಕತ ನೈಟ್ ರೈಡರ್ಸ್ ತಂಡದ ಪಾಲಿಗೆ ದುಬಾರಿ
- ಶ್ರೀಲಂಕಾ ಮೂಲದ ಯುವ ವೇಗಿ ಮತೀಶ ಪತಿರಣಗೆ 18 ಕೋಟಿ ಕೊಟ್ಟಿದ್ದು ವ್ಯರ್ಥ
KKR : ಶ್ರೀಲಂಕಾ ಮೂಲದ ಯುವ ವೇಗಿ ಮತೀಶ ಪತಿರಣ ಎಸೆಯುವ "ಬೆಂಕಿ ಚೆಂಡು"ಗಳನ್ನೇ ನಂಬಿ, ಐಪಿಎಲ್ 2026ರ ಸೀಸನ್‌ನಲ್ಲಿ ಎದುರಾಳಿ ಬ್ಯಾಟರ್‌ಗಳನ್ನು ನಡುಗಿಸಿ ಎಲ್ಲಾ ಪಂದ್ಯಗಳನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರ ಹಾಕಿ, ಬರೋಬ್ಬರಿ 18 ಕೋಟಿ ರೂಪಾಯಿ ಸುರಿದು ಖರೀದಿ ಮಾಡಿದ್ದ ಫ್ರಾಂಚೈಸಿಗೆ ಈಗ ಚೊಂಬು ಗಿಫ್ಟ್ ಸಿಕ್ಕಂತಾಗಿದೆ!
ಹೌದು, ಕೋಟಿ ಕೋಟಿ ಹಣ ಕೊಟ್ಟು ಅಬ್ಬರಿಸಲು ಕರೆತಂದ ಆಟಗಾರ ಈ ಇಡೀ ಸೀಸನ್‌ನಲ್ಲಿ ಎಸೆದಿದ್ದು ಕೇವಲ 8 ಎಸೆತಗಳನ್ನು ಮಾತ್ರ ಎಂದರೆ ನೀವು ನಂಬಲೇಬೇಕು. ಅಂದರೆ, ಪತಿರಣ ಅವರು ಎಸೆದ ಒಂದೊಂದು ಬಾಲ್‌ಗೂ ಫ್ರಾಂಚೈಸಿ ಬರೋಬ್ಬರಿ 2.25 ಕೋಟಿ ರೂಪಾಯಿ ಪಾವತಿಸಿದಂತಾಗಿದೆ. ಸದ್ಯ 18 ಕೋಟಿ ರೂಪಾಯಿ ನೀರಿನಲ್ಲಿ ಹೋಮ ಮಾಡಿದಂತಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ಗೆ ಗುರಿಯಾಗಿದೆ.
ಐಪಿಎಲ್ 2026ರ ಸೀಸನ್‌ನಲ್ಲಿ ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ಫ್ರಾಂಚೈಸಿಗೆ ಮಥೀಶ ಪತಿರಣ ಅವರ ಗಾಯದ ಸಮಸ್ಯೆ ದೊಡ್ಡ ಆಘಾತವನ್ನು ನೀಡಿದೆ. ಶ್ರೀಲಂಕಾದ ಈ ಯುವ ವೇಗಿಯನ್ನು ಡೆತ್ ಓವರ್‌ಗಳ ಸ್ಪೆಷಲಿಸ್ಟ್ ಎಂದು ನಂಬಿ, ಎದುರಾಳಿ ತಂಡಗಳ ಬ್ಯಾಟಿಂಗ್ ಬೆನ್ನೆಲುಬು ಮುರಿಯಲು ಕೆಕೆಆರ್ ಮ್ಯಾನೇಜ್‌ಮೆಂಟ್ ಹರಾಜಿನಲ್ಲಿ ಬರೋಬ್ಬರಿ 18 ಕೋಟಿ ರೂಪಾಯಿ ಭಾರಿ ಮೊತ್ತ ನೀಡಿ ಖರೀದಿಸಿತ್ತು. ಆದರೆ, ದುರಾದೃಷ್ಟವಶಾತ್, ಈ ಸೀಸನ್ ಕೆಕೆಆರ್ ಪಾಲಿಗೆ ಅತ್ಯಂತ ದುಬಾರಿ ಮತ್ತು ಹೃದಯವಿದ್ರಾವಕ ಆಘಾತವಾಗಿ ಪರಿಣಮಿಸಿದೆ.
ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಪತಿರಣ ಕಾಲಿನ ಸ್ನಾಯು ಸೆಳೆತದ (ಕಾಫ್ ಮಸಲ್ ಇಂಜುರಿ) ಸಮಸ್ಯೆಯಿಂದ ಬಳಲುತ್ತಿದ್ದರು. ಈ ಗಾಯದ ಸಮಸ್ಯೆಯಿಂದಾಗಿ ಅವರು ಸೀಸನ್‌ನ ಆರಂಭಿಕ 12 ಪಂದ್ಯಗಳಿಂದ ಸಂಪೂರ್ಣವಾಗಿ ಹೊರಗುಳಿಯಬೇಕಾಯಿತು. ಪ್ರಮುಖ ಬೌಲರ್ ಇಲ್ಲದೆ ಕೆಕೆಆರ್ ಸಾಕಷ್ಟು ಪಂದ್ಯಗಳಲ್ಲಿ ಪರದಾಡುವಂತಾಯಿತು. ಆದರೂ ಅವರು ಚೇತರಿಸಿಕೊಂಡು ತಂಡಕ್ಕೆ ಮರಳಲಿದ್ದಾರೆ ಎಂಬ ಭರವಸೆಯನ್ನು ಮ್ಯಾನೇಜ್‌ಮೆಂಟ್ ಹೊಂದಿತ್ತು.
ಕೊನೆಗೂ ಗಾಯದಿಂದ ಚೇತರಿಸಿಕೊಂಡ ಪತಿರಣ, ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮೈದಾನಕ್ಕೆ ಪ್ರವೇಶಿಸಿದರು. ಅವರು ಮೈದಾನಕ್ಕಿಳಿಯುತ್ತಿದ್ದಂತೆ ಅಭಿಮಾನಿಗಳು ಮತ್ತು ತಂಡದ ಮ್ಯಾನೇಜ್‌ಮೆಂಟ್ ಪತಿರಣ ತಮ್ಮ ಹಳೆಯ ಲಯದಲ್ಲಿ ಬೆಂಕಿ ಚೆಂಡುಗಳನ್ನು ಎಸೆಯಲಿದ್ದಾರೆ ಎಂದು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಕೇವಲ 8 ಎಸೆತಗಳನ್ನು ಬೌಲಿಂಗ್ ಮಾಡಿದ ಬೆನ್ನಲ್ಲೇ ಪತಿರಣ ಅವರಿಗೆ ಮತ್ತೆ ಅದೇ ಸ್ನಾಯು ಸೆಳೆತ ತೀವ್ರವಾಗಿ ಕಾಡಲಾರಂಭಿಸಿತು. ಗಾಯದ ನೋವು ಉಲ್ಬಣಗೊಂಡ ಕಾರಣ ಅವರು ಅರ್ಧದಲ್ಲೇ ಮೈದಾನದಿಂದ ಹೊರನಡೆಯಬೇಕಾಯಿತು.
ಗಾಯ ಗಂಭೀರ ಸ್ವರೂಪದ್ದಾಗಿದ್ದರಿಂದ ಪತಿರಣ ಲೀಗ್‌ನ ಉಳಿದ ಪಂದ್ಯಗಳಿಂದಲೂ ಹೊರಬಿದ್ದು ತವರಿಗೆ ಮರಳುವಂತಾಯಿತು. ಇದರಿಂದ ಈ ಸೀಸನ್‌ನಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳಲು ಕೆಕೆಆರ್‌ಗೆ ಸಾಧ್ಯವಾಗಲೇ ಇಲ್ಲ. ಆದರೆ, ಐಪಿಎಲ್ ನಿಯಮಗಳ ಪ್ರಕಾರ ಆಟಗಾರ ಪಂದ್ಯಾವಳಿಯ ಅವಧಿಯಲ್ಲಿ ಲಭ್ಯವಿದ್ದು ಗಾಯಗೊಂಡರೆ ಅವರಿಗೆ ಸಂಪೂರ್ಣ ಸಂಭಾವನೆ ನೀಡಬೇಕಾಗುತ್ತದೆ. ಹೀಗಾಗಿ, ಈ ಇಡೀ ಸೀಸನ್‌ನಲ್ಲಿ ಕೇವಲ 8 ಎಸೆತಗಳನ್ನು ಮಾತ್ರ ಎಸೆದಿದ್ದರೂ ಪತಿರಣ ಅವರಿಗೆ ಕೆಕೆಆರ್ ಒಪ್ಪಂದದ ಪ್ರಕಾರ ಪೂರ್ಣ 18 ಕೋಟಿ ರೂಪಾಯಿಗಳನ್ನು ಪಾವತಿಸಬೇಕಾಗಿದೆ. ಅಂದರೆ ಅವರು ಎಸೆದ ಪ್ರತಿ ಬಾಲ್‌ಗೂ ಬರೋಬ್ಬರಿ 2.25 ಕೋಟಿ ರೂಪಾಯಿ ಖರ್ಚಾದಂತಾಗಿದ್ದು, ಕೆಕೆಆರ್‌ಗೆ ಇದು ನುಂಗಲಾರದ ತುತ್ತಾಗಿದೆ, (ಏಜೆನ್ಸೀಸ್).