ಪಾಕ್ ಕ್ರಿಕೆಟಿಗರ ಮೊಬೈಲ್ ಕಸಿದುಕೊಂಡ ಪಿಸಿಬಿ! ಹೀಗಿದೆ ಕಾರಣ...
ಲಂಡನ್: ಆತಿಥೇಯ ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಪೂರ್ವಭಾವಿಯಾಗಿ ಪಾಕಿಸ್ತಾನ ತಂಡದ ಆಟಗಾರರ ಮೊಬೈಲ್ ಫೋನ್ಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನ್ನ ವಶಕ್ಕೆ ತೆಗೆದುಕೊಂಡಿದೆ. ಮ್ಯಾಚ್ ಫಿಕ್ಸಿಂಗ್ (Match-fixing) ಭೀತಿಯಿಂದಾಗಿ ಪಿಸಿಬಿ ಈ ಕ್ರಮ ತೆಗೆದುಕೊಂಡಿದೆ ಎಂದು ವರದಿಯಾಗಿದೆ.
ಪಾಕ್ ತಂಡ ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್ ಪಂದ್ಯಗಳಲ್ಲಿ ಸೋತು ಈಗಾಗಲೆ ಸರಣಿ ಕೈಚೆಲ್ಲಿದೆ. ಅಂತಿಮ ಪಂದ್ಯ ಬುಧವಾರದಿಂದ ರ್ಬಮಿಂಗ್ಹ್ಯಾಂನಲ್ಲಿ ನಡೆಯಲಿದೆ. ಪಂದ್ಯದ ಸಮಯದಲ್ಲಿ ಮೊಬೈಲ್ಗಳನ್ನು ಕ್ರಿಕೆಟಿಗರಿಂದ ದೂರವಿಡುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಪಂದ್ಯಕ್ಕೆ ಇನ್ನೂ ಕೆಲ ದಿನಗಳು ಬಾಕಿ ಇರುವಾಗಲೇ ಪಿಸಿಬಿ ಮೊಬೈಲ್ಗಳನ್ನು ವಶಪಡಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.
ಯಾವೆಲ್ಲ ಕ್ರಿಕೆಟಿಗರ ಮೊಬೈಲ್ಗಳನ್ನು ಪಿಸಿಬಿ ವಶಕ್ಕೆ ಪಡೆದಿದೆ ಎಂಬುದನ್ನು ಬಹಿರಂಗಪಡಿಸಲಾಗಿಲ್ಲ. ಅಲ್ಲದೆ ಯಾವ ಕಾರಣಕ್ಕಾಗಿ ಕ್ರಿಕೆಟಿಗರ ಮೊಬೈಲ್ ಪಡೆದುಕೊಳ್ಳಲಾಗಿದೆ ಎಂಬುದನ್ನು ಪಿಸಿಬಿ ಸ್ಪಷ್ಟವಾಗಿ ವಿವರಿಸಿಲ್ಲ. ಈ ಮೊಬೈಲ್ಗಳು ಇನ್ನು ಪಂದ್ಯ ಮುಗಿಯುವವರೆಗೂ ಪಿಸಿಬಿ ವಶದಲ್ಲೇ ಇರಲಿವೆ ಎಂದು "ಪಾಕಿಸ್ತಾನಿ 365 ನ್ಯೂಸ್' ವರದಿ ಮಾಡಿದೆ.