ಕೊಹ್ಲಿಯನ್ನು ತಮ್ಮ ತಂಡಕ್ಕೆ ಬೌಲರ್​ ಆಗಿ ಆಯ್ಕೆ ಮಾಡಿದ ಮಾರ್ಕಸ್ ಸ್ಟೋನಿಸ್: ಕಾರಣ ಕೇಳಿದ್ರೆ ಅಚ್ಚರಿಯಾಗೋದು ಖಚಿತ! Virat Kohli  
ಕ್ರಿಕೆಟ್

ಕೊಹ್ಲಿಯನ್ನು ತಮ್ಮ ತಂಡಕ್ಕೆ ಬೌಲರ್​ ಆಗಿ ಆಯ್ಕೆ ಮಾಡಿದ ಮಾರ್ಕಸ್ ಸ್ಟೋನಿಸ್: ಕಾರಣ ಕೇಳಿದ್ರೆ ಅಚ್ಚರಿಯಾಗೋದು ಖಚಿತ! Virat Kohli

ಪ್ರಮುಖ ಮುಖ್ಯಾಂಶಗಳು

  • ಮಾರ್ಕಸ್ ಸ್ಟೋನಿಸ್ ತಮ್ಮ ತಂಡಕ್ಕೆ ವಿರಾಟ್ ಕೊಹ್ಲಿಯನ್ನು ಬೌಲರ್ ಆಗಿ ಆಯ್ಕೆ ಮಾಡಿದ್ದಾರೆ
  • ಕೊಹ್ಲಿಯ ಅಸಹಜ ಬೌಲಿಂಗ್ ಶೈಲಿ ಬ್ಯಾಟ್ಸ್‌ಮನ್‌ಗಳನ್ನು ಗೊಂದಲಕ್ಕೀಡು ಮಾಡುತ್ತದೆ ಎಂದ ಸ್ಟೋನಿಸ್
  • ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು ಒಂಭತ್ತು ವಿಕೆಟ್‌ಗಳನ್ನು ಪಡೆದಿದ್ದಾರೆ
  • ಐಪಿಎಲ್ ಮತ್ತು ವಿಶ್ವಕಪ್ ಪಂದ್ಯಗಳಲ್ಲಿ ಕೊಹ್ಲಿ ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿದ್ದಾರೆ
  • ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್ಕೊಹ್ಲಿ ಬೌಲರ್ ಆಗಿ ಆಯ್ಕೆಯಾಗಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ
Virat Kohli : ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಮಾರ್ಕಸ್ ಸ್ಟೋನಿಸ್ ಅವರು ತಮ್ಮ 'ಬ್ಯಾಕ್‌ಯಾರ್ಡ್ ಕ್ರಿಕೆಟ್' ತಂಡದಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿಯನ್ನು ಬ್ಯಾಟ್ಸ್‌ಮನ್ ಬದಲಿಗೆ ಒಬ್ಬ ಬೌಲರ್ ಆಗಿ ಆಯ್ಕೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಕೊಹ್ಲಿ ಬ್ಯಾಟಿಂಗ್ ದಿಗ್ಗಜರಾಗಿದ್ದರು ಕೂಡ ಹಳ್ಳಿಯ ಶೈಲಿಯ ಅಥವಾ ಬ್ಯಾಕ್​ಯಾರ್ಡ್​ ಕ್ರಿಕೆಟ್​ಗೆ ಬೌಲಿಂಗ್ ಮಾಡಲು ಕೊಹ್ಲಿ ಸೂಕ್ತ ಎಂಬ ಕಾರಣ ನೀಡುವ ಮೂಲಕ ಮಾರ್ಕಸ್ ಸ್ಟೋನಿಸ್ ಎಲ್ಲರ ಗಮನ ಸೆಳೆದಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆಸ್ಟ್ರೇಲಿಯಾದ ಆಲ್ ರೌಂಡರ್ ಮಾರ್ಕಸ್ ಸ್ಟೋನಿಸ್, ಬ್ಯಾಕ್‌ಯಾರ್ಡ್ ಕ್ರಿಕೆಟ್​ಗೆ ವಿರಾಟ್ ಕೊಹ್ಲಿಯನ್ನು ಬೌಲರ್ ಆಗಿ ಆಯ್ಕೆ ಮಾಡುವುದಾಗಿ ತಿಳಿಸಿದ್ದು, ಹೆಚ್ಚಿನ ಬ್ಯಾಟ್ಸ್‌ಮನ್‌ಗಳು ಕೊಹ್ಲಿಯ ಬೌಲಿಂಗ್ ಕಡೆಗೆ ಹೆಚ್ಚು ಗಮನ ಹರಿಸುವುದಿಲ್ಲವಾದ್ದರಿಂದ ಅವರ ಎಸೆತಗಳು ಎದುರಾಳಿಗಳನ್ನು ಅಚ್ಚರಿಗೊಳಿಸಬಹುದು ಹಾಗೂ ಅವರ ವಿಚಿತ್ರ ಅಥವಾ ಕೊಂಚ ಅಸಹಜ ಬೌಲಿಂಗ್ ಶೈಲಿಯು ಬ್ಯಾಟ್ಸ್‌ಮನ್‌ಗಳನ್ನು ಗೊಂದಲಕ್ಕೀಡು ಮಾಡುತ್ತದೆ ಎಂಬ ಕಾರಣ ನೀಡಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ತಮ್ಮ ಅತ್ಯುತ್ತಮ ಬ್ಯಾಟಿಂಗ್‌ಗಾಗಿ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದ್ದರೂ, ಸಾಂದರ್ಭಿಕವಾಗಿ ಮಧ್ಯಮ ವೇಗದ ಬೌಲಿಂಗ್‌ ಮಾಡಿಯೂ ಗಮನ ಸೆಳೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟಿ20 ಮಾದರಿಯಲ್ಲಿ 152 ಎಸೆತಗಳನ್ನು ಎಸೆದು 4 ವಿಕೆಟ್‌ಗಳನ್ನು ಕಬಳಿಸಿರುವ ಇವರು, ಏಕದಿನ (ODI) ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಇದುವರೆಗೆ ಒಂದೇ ಒಂದು ವಿಕೆಟ್ ಪಡೆದಿಲ್ಲ. ಭಾರತೀಯ ರಾಷ್ಟ್ರೀಯ ತಂಡದ ಜೊತೆಗೆ ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ತಂಡದ ಪರವಾಗಿಯೂ ಕೊಹ್ಲಿ ಸಾಂದರ್ಭಿಕವಾಗಿ ಬೌಲಿಂಗ್ ಮಾಡಿ ವಿಕೆಟ್ ಪಡೆದಿರುವ ದಾಖಲೆ ಹೊಂದಿದ್ದಾರೆ.
ವಿರಾಟ್ ಕೊಹ್ಲಿ 2023ರ ಏಕದಿನ ವಿಶ್ವಕಪ್‌ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೊನೆಯದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡಿದ್ದರು. ಆ ಪಂದ್ಯದಲ್ಲಿ ಚೆಂಡನ್ನು ಕೈಗೆತ್ತಿಕೊಂಡ ಅವರು, ಡಚ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರ ವಿಕೆಟ್ ಪಡೆದಿದ್ದರು. ವಿಕೆಟ್ ಕೀಪರ್ ಕೆ.ಎಲ್. ರಾಹುಲ್ ಕ್ಯಾಚ್ ಹಿಡಿಯುವ ಮೂಲಕ ಕೊಹ್ಲಿ ಬಹಳ ಕಾಲದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಈ ಹಿಂದೆ ಕೂಡ ತಮ್ಮ ಸಾಂದರ್ಭಿಕ (ಪಾರ್ಟ್‌ಟೈಮ್) ಬೌಲಿಂಗ್ ಮೂಲಕ ನಿರ್ಣಾಯಕ ಸಮಯದಲ್ಲಿ ಕೊಹ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಿದ್ದರು. ಈ ಕಾರಣಕ್ಕಾಗಿಯೇ ಮಾರ್ಕಸ್ ಸ್ಟೋನಿಸ್ ಅವರು ಬ್ಯಾಕ್​ಯಾರ್ಡ್​ ಕ್ರಿಕೆಟ್‌ನಲ್ಲಿ ಕೊಹ್ಲಿಯನ್ನು ಓರ್ವ 'ಮಿಸ್ಟರಿ ಬೌಲರ್' ಆಗಿ ಬಳಸಿಕೊಳ್ಳಬಹುದು ಎಂದು ಭಾವಿಸಿದ್ದಾರೆ.
ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪರವಾಗಿಯೂ ಬೌಲಿಂಗ್ ಮಾಡಿದ್ದು, ಇಲ್ಲಿಯವರೆಗೆ ಐಪಿಎಲ್‌ನಲ್ಲಿ ಒಟ್ಟು 4 ವಿಕೆಟ್‌ಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 2016ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ 25 ರನ್ ನೀಡಿ 2 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ. ಆದರೂ, ಆ ಬಳಿಕ ಕೊಹ್ಲಿ ದೀರ್ಘಕಾಲದವರೆಗೆ ಆರ್‌ಸಿಬಿ ಪರ ಬೌಲಿಂಗ್ ಮಾಡಲಿಲ್ಲ. ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಬೌಲಿಂಗ್‌ನಲ್ಲಿ ಯಾವುದೇ ಗಮನಾರ್ಹ ದಾಖಲೆಗಳನ್ನು ಹೊಂದಿಲ್ಲದಿದ್ದರೂ, ಅಗತ್ಯವಿದ್ದ ಸರಿಯಾದ ಸಮಯದಲ್ಲಿ ಬೌಲಿಂಗ್ ಮಾಡಿ ಎದುರಾಳಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್‌ ಪ್ರದರ್ಶನದಿಂದ ಮಾತ್ರ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ, ಆಸ್ಟ್ರೇಲಿಯಾದ ಆಲ್-ರೌಂಡರ್ ಮಾರ್ಕಸ್ ಸ್ಟೋನಿಸ್, ವಿಶ್ವಮಟ್ಟದ ಬ್ಯಾಟ್ಸ್‌ಮನ್ ಆಗಿರುವ ಕೊಹ್ಲಿಯನ್ನು ತಮ್ಮ ಬ್ಯಾಕ್​ಯಾರ್ಡ್​ ಕ್ರಿಕೆಟ್ ತಂಡದಲ್ಲಿ ಒಬ್ಬ ಬೌಲರ್ ಆಗಿ ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿಕೆ ನೀಡಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಕೊಹ್ಲಿ ಅವರ ಬ್ಯಾಟಿಂಗ್ ಬಗ್ಗೆ ಮಾತ್ರ ಮಾತನಾಡುವ ಅಭಿಮಾನಿಗಳ ನಡುವೆ, ಸ್ಟೋನಿಸ್ ಅವರ ಪಾರ್ಟ್‌ಟೈಮ್ ಬೌಲಿಂಗ್ ಹಾಗೂ ವಿಚಿತ್ರ ಬೌಲಿಂಗ್ ಶೈಲಿಯ ಕುರಿತು ನೀಡಿರುವ ಈ ಕಾಮೆಂಟ್‌ಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿವೆ, (ಏಜೆನ್ಸೀಸ್​).