ಅಭಿಷೇಕ್ ಶರ್ಮ  
ಕ್ರಿಕೆಟ್

ಮೊದಲು ನಿನ್ನ... 3 ಡಕ್​ಔಟ್​, ಕಳಪೆ ಫೀಲ್ಡಿಂಗ್​ ಮಾಡಿದ 'ಅಭಿ'ಗೆ ಮನೋಜ್ ತಿವಾರಿ ಕ್ಲಾಸ್​! ​Abhishek Sharma

ಪ್ರಮುಖ ಮುಖ್ಯಾಂಶಗಳು

  • ಗ್ರೂಪ್​ ಸ್ಟೇಜ್​ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಡಕ್​ಔಟ್
  • ವೆಸ್ಟ್ ಇಂಡೀಸ್​ ವಿರುದ್ಧದ ಪಂದ್ಯದಲ್ಲಿಯೂ ಕಳಪೆ ಪ್ರದರ್ಶನ
  • 2 ಬಹುಮುಖ್ಯ ಕ್ಯಾಚ್​ ಬಿಟ್ಟ ಅಭಿಗೆ ಮನೋಜ್ ತಿವಾರಿ ಬುದ್ಧಿ ಮಾತು
ನವದೆಹಲಿ: ಟೀಮ್ ಇಂಡಿಯಾದ ಸ್ಪೋಟಕ ಆರಂಭಿಕ ಯುವ ಬ್ಯಾಟರ್​ ಅಭಿಷೇಕ್ ಶರ್ಮ, ಅದ್ಯಾಕೋ ಏನೋ ಟಿ20 ವಿಶ್ವಕಪ್​ ಟೂರ್ನಿಯ ಮೊದಲ ಪಂದ್ಯದಿಂದಲೂ ಕಳಪೆ ಪ್ರದರ್ಶನದಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಗ್ರೂಪ್​ ಸ್ಟೇಜ್​ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಡಕ್​ಔಟ್​ ಆದ ಅಭಿ, ಸೂಪರ್​-8 ಪಂದ್ಯಗಳಲ್ಲಿಯೂ ತಮ್ಮ ಫ್ಲಾಪ್ ಶೋ ಮುಂದುವರಿಸಿದ್ದಾರೆ. ವೆಸ್ಟ್ ಇಂಡೀಸ್​ ವಿರುದ್ಧದ ಮ್ಯಾಚ್​ನಲ್ಲಿ ಎರಡು ಬಹುಮುಖ್ಯ ಕ್ಯಾಚ್​ ಕೈಚೆಲ್ಲಿದ ಶರ್ಮಗೆ ಸದ್ಯ ಕ್ರಿಕೆಟ್​ ಪ್ರಿಯರಿಂದ ಭಾರೀ ಟೀಕೆಗಳು ವ್ಯಕ್ತವಾಗಿವೆ.
ವೆಸ್ಟ್​ ಇಂಡೀಸ್​ ವಿರುದ್ಧದ ಸೂಪರ್​-8 ಪಂದ್ಯದಲ್ಲಿ ಕೇವಲ 10 ರನ್​ಗೆ ಪೆವಿಲಿಯನ್​ ಹಾದಿ ಹಿಡಿದ ಅಭಿಷೇಕ್​ಗೆ ಇನ್ನೆಷ್ಟು ಅವಕಾಶ ಕೊಡ್ತೀರಾ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ. ಬ್ಯಾಟಿಂಗ್​ ಮತ್ತು ಫೀಲ್ಡಿಂಗ್​ನಲ್ಲಿ ಕಳಪೆ ಪ್ರದರ್ಶನ ನೀಡಿರುವ ಶರ್ಮಾ ಬದಲು ಇನ್ಯಾರಿಗಾದರೂ ಚಾನ್ಸ್ ಕೊಡಬಹುದಲ್ಲವೇ ಎಂಬ ಮಾತುಗಳು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದೇ ವಿಷಯವನ್ನು ಮುಂದಿಟ್ಟು ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮನೋಜ್​ ತಿವಾರಿ, ನೀನು ಹೀಗಿದ್ದರೆ ಆಗೋದಿಲ್ಲ ಎಂದು ಹೇಳಿದ್ದಾರೆ.

ಮೊದಲು ನಿನ್ನ....

'ಕ್ರಿಕ್​ಬಜ್'​ ಜೊತೆ ಮಾತನಾಡಿದ ತಿವಾರಿ, "ತನ್ನ ವಿಕೆಟ್​ ಕಾಪಾಡಿಕೊಳ್ಳಲು ಆಗಲಿಲ್ಲ ಎಂದರೆ, ಇಂತಹ ಕಳಪೆ ಪ್ರದರ್ಶನ ಬಂದೇ ಬರುತ್ತದೆ. ಅತೀ ಕಡಿಮೆ ಸಮಯದಲ್ಲಿ ಸ್ಟಾರ್​ಗಿರಿ ಪಡೆದಿರುವ ಅಭಿಷೇಕ್​, ಸೂಪರ್​ಸ್ಟಾರ್ ಆಗಿಯೇ ಉಳಿಯಬೇಕು ಎಂದು ಬಯಸಿದರೆ, ಮುಂದಿನ ಪಂದ್ಯಗಳನ್ನು ತನ್ನ ತಂಡಕ್ಕಾಗಿ ಗೆಲ್ಲಲೇಬೇಕು. ಇಲ್ಲಿ ತುಂಬ ಕಾಂಪಿಟೇಶನ್​ ಇದೆ. ಪಂದ್ಯ ಗೆಲ್ಲಿಸಿ ಕೊಡುವವರು ಹೆಚ್ಚಿದ್ದಾರೆ. ಹೀಗಾಗಿ, ಅವರನ್ನೆಲ್ಲ ಅಭಿ ಓವರ್​ಟೇಕ್​ ಮಾಡಬೇಕಿದೆ. ಇಲ್ಲಿ ಆತ ಮೊದಲು ತನ್ನ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು" ಎಂದರು.
ಇನ್ನು ಇರ್ಫಾನ್​ ಪಠಾಣ್​ ಮಾತನಾಡಿ, "ಅಭಿಷೇಕ್ ಫಾರ್ಮ್​ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ. ಆತನ ದೇಹದ ಭಾರ ಮೊದಲ ಪಾದದ ಮೇಲೆ ಇದ್ದರೆ ಒಳ್ಳೆಯದು. ಅದರ ಬಗ್ಗೆಯೇ ಆತ ಹೆಚ್ಚು ಗಮನ ಕೊಡುವುದು ಸೂಕ್ತ" ಎಂದು ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಹೇಳಿದ್ದಾರೆ,(ಏಜೆನ್ಸೀಸ್).