ಮದುವೆ ಮುರಿದುಬಿದ್ದ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಸ್ಮೃತಿ!
ನವದೆಹಲಿ: ನಾನು ಕ್ರಿಕೆಟ್ಗಿಂತ ಹೆಚ್ಚಾಗಿ ಬೇರೇನನ್ನೂ ಪ್ರೀತಿಸಲಾರೆ. ಭಾರತ ತಂಡದ ಜೆರ್ಸಿ ಧರಿಸುವುದೇ ಎಲ್ಲಕ್ಕಿಂತ ಹೆಚ್ಚು ಉತ್ತೇಜನ ನೀಡುತ್ತದೆ. ಕ್ರಿಕೆಟ್ ವಿಚಾರ ಬಂದಾಗ ಎಲ್ಲ ಸಮಸ್ಯೆಗಳನ್ನೂ ಬದಿಗಿಡುತ್ತೇನೆ ಮತ್ತು ಆಟದ ಬಗ್ಗೆ ಮಾತ್ರ ಗಮನಹರಿಸುತ್ತೇನೆ ಎಂದು ಭಾರತ ತಂಡದ ಉಪನಾಯಕಿ ಸ್ಮೃತಿ ಮಂದನಾ (Smriti Mandhana) ಹೇಳಿದ್ದಾರೆ. ಈ ಮೂಲಕ ಮದುವೆ ಮುರಿದುಬಿದ್ದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎಂದೂ ಪರೋಕ್ಷವಾಗಿ ಸಾರಿದರು.
ದೀರ್ಘಕಾಲದ ಗೆಳೆಯ ಪಲಾಶ್ ಮುಚ್ಚಲ್ ಜತೆಗಿನ ಮದುವೆ (marriage) ಕೊನೇಕ್ಷಣದಲ್ಲಿ ಮುರಿದುಬಿದ್ದ ಆಘಾತದ ಬಳಿಕ ಬುಧವಾರ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಸ್ಮೃತಿ ಮಂದನಾ, ಅಮೇಜಾನ್ ಸಂಭಾವನಾ ಶೃಂಗಸಭೆಯಲ್ಲಿ ತನ್ನ 12 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನ ಅನುಭವಗಳನ್ನು ಹಂಚಿಕೊಂಡರು.
ಕ್ರಿಕೆಟ್ ಮೇಲಿನ ಪ್ರೀತಿ ಇನ್ನೂ ಕುಗ್ಗಿಲ್ಲ. ಬ್ಯಾಟಿಂಗ್ ಯಾವಾಗಲೂ ಆನಂದ ನೀಡುತ್ತದೆ. ನಾನು ಯಾವಾಗಲೂ ವಿಶ್ವ ಚಾಂಪಿಯನ್ ಎಂದು ಕರೆಸಿಕೊಳ್ಳಲು ಇಷ್ಟಪಡುತ್ತಿದ್ದೆ. ನಮ್ಮ ನಿರಂತರ ಹೋರಾಟಕ್ಕೆ ಈ ವಿಶ್ವಕಪ್ ಗೆಲುವಿನ ಬಹುಮಾನ ಒಲಿದಿದೆ. ನಾವು ಇದಕ್ಕಾಗಿ ಹಾತೊರೆಯುತ್ತಿದ್ದೆವು. ವಿಶ್ವಕಪ್ ಗೆಲುವು ನಮ್ಮ ಪಾಲಿಗೆ ವಿಶೇಷ ಕ್ಷಣವಾಗಿತ್ತು. ಎಂದು ಸ್ಮೃತಿ ಏಕದಿನ ವಿಶ್ವಕಪ್ ಗೆಲುವಿನ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ಭಾರತ ತಂಡದ ನಾಯಕಿ ಹರ್ಮಾನ್ಪ್ರೀತ್ ಕೌರ್ ಕೂಡ ಈ ಸಮಾರಂಭದಲ್ಲಿ ಹಾಜರಿದ್ದರು.