ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಸರಣಿಗೆ ವೈಭವ್ ಸೂರ್ಯವಂಶಿ
- ನಾಳೆಯಿಂದ ಭಾರತ ಮತ್ತು ಐರ್ಲೆಂಡ್ ನಡುವೆ ಟಿ20 ಸರಣಿ
- ಈ ಪಂದ್ಯದ ವೇಳೆಯಲ್ಲಿ ಕೊಂಚ ಬದಲಾವಣೆ
IND vs IRL: ಟೀಮ್ ಇಂಡಿಯಾ ಮತ್ತು ಐರ್ಲೆಂಡ್ ನಡುವಿನ ಎರಡು ಪಂದ್ಯಗಳ ಟಿ20 ಸರಣಿಯು ಇದೇ ಜೂ.26ರಿಂದ ಆರಂಭವಾಗಲಿದ್ದು, ಸೀನಿಯರ್ ಪುರುಷರ ತಂಡದಲ್ಲಿ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿಯನ್ನು ನೋಡಲು ವಿಶ್ವ ಕ್ರಿಕೆಟ್ ಪ್ರೇಮಿಗಳು ಬಹಳ ಕಾತರದಿಂದ ಕಾಯುತ್ತಿದ್ದಾರೆ. ಹೀಗಿರುವಾಗಲೇ ಪಂದ್ಯದ ಸಮಯದಲ್ಲಿ ಕೊಂಚ ಬದಲಾವಣೆಯಾಗಿದೆ.
ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಪಂದ್ಯಗಳು ಪ್ರಾರಂಭವಾಗಲಿವೆ ಎಂದು ಕ್ರಿಕೆಟ್ ಐರ್ಲೆಂಡ್ ಘೋಷಿಸಿದೆ. ಐರಿಶ್ ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2:30ಕ್ಕೆ ಆರಂಭವಾಗಬೇಕಿದ್ದ ಪಂದ್ಯಗಳು ಈಗ ಮಧ್ಯಾಹ್ನ 1:30ಕ್ಕೆ ಶುರು ಆಗಲಿವೆ. ಅಂದರೆ, ಭಾರತೀಯ ಕಾಲಮಾನದ ಪ್ರಕಾರ ಸಂಜೆ 7:00 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯಗಳು, ಸಂಜೆ 6:00ಕ್ಕೆ ಶುರುವಾಗಲಿವೆ. ಈ ನಿಟ್ಟಿನಲ್ಲಿ, ಟಾಸ್ ಸಂಜೆ 5:30ಕ್ಕೆ ನಡೆಯಲಿದೆ.
ಈ ಸಮಯ ಬದಲಾವಣೆಗೆ ಮುಖ್ಯ ಕಾರಣವೇ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ. ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ವಿಶ್ವಕಪ್ ಪಂದ್ಯ ಇದೇ ಜೂ.28ರಂದು ಭಾರತೀಯ ಕಾಲಮಾನದ ಪ್ರಕಾರ ಸಂಜೆ 7:00ಕ್ಕೆ ನಡೆಯಲಿದೆ. ಅದೇ ದಿನ ಭಾರತ-ಐರ್ಲೆಂಡ್ ನಡುವಿನ ಎರಡನೇ ಟಿ20 ಪಂದ್ಯವೂ ಇದೆ. ಎರಡು ಕುತೂಹಲಕಾರಿ ಮ್ಯಾಚ್ ಒಂದೇ ಸಮಯದಲ್ಲಿ ನಡೆಯುತ್ತಿರುವುದು ಹೆಚ್ಚು ವೀಕ್ಷಕರನ್ನು ಸೆಳೆಯಲು ಬ್ರೇಕ್ ಹಾಕಬಹುದು. ಈ ನಿಟ್ಟಿನಲ್ಲಿ ಕ್ರಿಕೆಟ್ ಐರ್ಲೆಂಡ್ ಪ್ರಸಾರಕರೊಂದಿಗೆ ಚರ್ಚಿಸಿ, ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಇಂಗ್ಲೆಂಡ್ ವಿರುದ್ಧ ಟಿ20/ ಏಕದಿನ ಸರಣಿ
ಐರ್ಲೆಂಡ್ ಸರಣಿಯ ಬೆನ್ನಲ್ಲೇ ಟೀಮ್ ಇಂಡಿಯಾ ಜು.1ರಿಂದ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಯ ವೇಳೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಇಂಗ್ಲೆಂಡ್ ವಿರುದ್ಧದ ಎರಡನೇ ಮತ್ತು ಐದನೇ ಟಿ20 ಪಂದ್ಯಗಳು ಸಂಜೆ 7:00 ಗಂಟೆಗೆ ಆರಂಭವಾಗಲಿದ್ದು, ಮೊದಲ, ಮೂರನೇ ಮತ್ತು ನಾಲ್ಕನೇ ಪಂದ್ಯಗಳು ರಾತ್ರಿ 10:00 ಗಂಟೆಗೆ ಶುರುವಾಗಲಿವೆ. ಅದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿಯು ಮಧ್ಯಾಹ್ನ 3:30ಕ್ಕೆ ಪ್ರಾರಂಭವಾಗಲಿದೆ,(ಏಜೆನ್ಸೀಸ್).