ಮಹಾರಾಣಿ ಟ್ರೋಫಿ ಟಿ20: ಫೈನಲ್ಗೇರಿದ ಹುಬ್ಬಳ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ಮತ್ತು ಮೈಸೂರು ವಾರಿಯರ್ಸ್ ತಂಡಗಳು ಮಹಾರಾಣಿ ಟ್ರೋಫಿ (maharani trophy t20) ಕೆಎಸ್ಸಿಎ ಮಹಿಳಾ ಟಿ20 ಟೂರ್ನಿಯ ಎರಡನೇ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿವೆ.
ನಾಯಕಿ ವೃಂದಾ ದಿನೇಶ್ (85 ರನ್, 31 ಎಸೆತ, 12 ಬೌಂಡರಿ, 5 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ಎದುರು 6 ವಿಕೆಟ್ಗಳಿಂದ ಗೆದ್ದು, ಅಂಕಪಟ್ಟಿಯ ಅಗ್ರಸ್ಥಾನಿಯಾಗಿ ಪ್ರಶಸ್ತಿ ಸುತ್ತಿಗೇರಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಗುಲ್ಬರ್ಗ, 5 ವಿಕೆಟ್ಗೆ 171 ರನ್ ಪೇರಿಸಿತು. ಪ್ರತಿಯಾಗಿ ಹುಬ್ಬಳ್ಳಿ 17.5 ಓವರ್ಗಳಲ್ಲಿ 4 ವಿಕೆಟ್ಗೆ 177 ರನ್ಗಳಿಸಿ ಜಯಿಸಿತು.
ಕೊನೇ ಲೀಗ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಮೈಸೂರು ವಾರಿಯರ್ಸ್ ತಂಡ 8 ವಿಕೆಟ್ಗಳಿಂದ ಜಯಿಸಿತು. 141 ರನ್ ಗುರಿ ಪಡೆದ ಮೈಸೂರು ತಂಡ ನಾಯಕಿ ಶುಭಾ ಸತೀಶ್ (42), ಶೀತಲ್ ಸಂತೋಷ್ (42), ಶಿಶಿರಾ ಗೌಡ (44) ಬಲದಿಂದ 17.5 ಓವರ್ಗಳಲ್ಲೇ ಗೆದ್ದಿತು.
ಶನಿವಾರ ಫೈನಲ್
ಮಹಾರಾಣಿ ಟ್ರೋಫಿಯ ಫೈನಲ್ ಪಂದ್ಯವನ್ನು ಆಗಸ್ಟ್ 2ರ ಭಾನುವಾರ ಬದಲಿಗೆ ಒಂದು ದಿನ ಮುಂಚಿತವಾಗಿ ಕೆಎಸ್ಸಿಎ ಮರುನಿಗದಿಪಡಿಸಿದೆ. ಅಂದರೆ, ಈ ಹಿಂದೆ ಪ್ರಕಟಿತ ವೇಳಾಪಟ್ಟಿಯಲ್ಲಿ ಆ.2ರಂದು ನಿಗದಿಯಾಗಿದ್ದ ಫೈನಲ್ ಪಂದ್ಯಆಗಸ್ಟ್ 1ರ ಶನಿವಾರ ಸಂಜೆ 6.30ಕ್ಕೆ ಆರಂಭವಾಗಲಿದೆ. ದಿನಾಂಕ ಬದಲಾವಣೆಗೆ ಕೆಎಸ್ಸಿಎ ಸೂಕ್ತ ವಿವರಣೆ ನೀಡಿಲ್ಲ.