ಹುಬ್ಬಳ್ಳಿ ಟೈಗರ್ಸ್‌ಗೆ ಮಹಾರಾಣಿ ಟ್ರೋಫಿ: ಮೈಸೂರು ವಾರಿಯರ್ಸ್ ವಿರುದ್ಧ ನಿಕಿ ಪ್ರಸಾದ್ ಗೆಲುವಿನಾಟ
ಬೆಂಗಳೂರು:
ಹುಬ್ಬಳ್ಳಿ ಟೈಗರ್ಸ್ ತಂಡ ಸತತ ಎರಡನೇ ಬಾರಿಗೆ ಮಹಾರಾಣಿ ಟ್ರೋಫಿ ಕೆಎಸ್‌ಸಿಎ ಮಹಿಳಾ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಎನಿಸಿತು.19 ವಯೋಮಿತಿ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡದ ನಾಯಕಿ ನಿಕಿ ಪ್ರಸಾದ್ (87* ರನ್, 59 ಎಸೆತ, 10 ಬೌಂಡರಿ, 30 ಸಿಕ್ಸರ್ ಹಾಗೂ 42ಕ್ಕೆ 3 ವಿಕೆಟ್, 2 ರನೌಟ್) ಸಾಹಸದ ನೆರವಿನಿಂದ ಹುಬ್ಬಳ್ಳಿ ತಂಡ ಶನಿವಾರ ನಡೆದ ಫೈನಲ್‌ನಲ್ಲಿ ಮೈಸೂರು ವಾರಿಯರ್ಸ್ ಎದುರು 2 ವಿಕೆಟ್‌ಗಳಿಂದ ರೋಚಕ ಗೆಲುವು ಒಲಿಸಿಕೊಂಡಿತು. ಕೊನೇ ಎಸೆತದಲ್ಲಿ ಸೋಲು ಕಂಡ ಮೈಸೂರು ವಾರಿಯರ್ಸ್ ಸತತ ಎರಡನೇ ಆವೃತ್ತಿಯಲ್ಲೂ ರನ್ನರ್‌ಅಪ್‌ಗೆ ಸಮಾಧಾನ ಕಂಡಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಕಾದಾಟದಲ್ಲಿ ಟಾಸ್ ಗೆದ್ದ ಹುಬ್ಬಳ್ಳಿ ಟೈಗರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕಿ ಶುಭಾ ಸತೀಶ್ (56 ರನ್, 42 ಎಸೆತ, 8 ಬೌಂಡರಿ, 1 ಸಿಕ್ಸರ್) ಅರ್ಧಶತಕದ ನಡುವೆಯೂ ನಿಕಿ ಪ್ರಸಾದ್ ದಾಳಿಗೆ ನಿರಂತರ ವಿಕೆಟ್ ಕೈಚೆಲ್ಲಿದ ಮೈಸೂರು ವಾರಿಯರ್ಸ್ 7 ವಿಕೆಟ್‌ಗೆ 161 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.
ಪ್ರತಿಯಾಗಿ ಆರು ಓವರ್‌ಗಳಲ್ಲಿ 68 ರನ್‌ಗಳಿಸಿ ಉತ್ತಮ ಆರಂಭ ಪಡೆದ ಹುಬ್ಬಳ್ಳಿ ಟೈಗರ್ಸ್, ನಿಕಿ ಪ್ರಸಾದ್ ಏಕಾಂಗಿ ಹೋರಾಟದಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 163 ರನ್‌ಗಳಿಸಿ ಗೆದ್ದು ಬೀಗಿತು. ದೀಕ್ಷಾ ಎಸೆದ ಕೊನೇ ಓವರ್‌ನಲ್ಲಿ 17 ರನ್ ಬೇಕಿದ್ದಾಗ, 2 ಸಿಕ್ಸರ್ ಜತೆಗೆ ಕೊನೇ ಎಸೆತದಲ್ಲಿ ಬೌಂಡರಿ ಗಳಿಸಿದ ನಿಕಿ ಗೆಲುವಿನ ರೂವಾರಿ ಎನಿಸಿದರು. ಚೊಚ್ಚಲ ಆವೃತ್ತಿಯಲ್ಲೂ ಮೈಸೂರು ತಂಡವನ್ನು ಮಣಿಸಿ ಹುಬ್ಬಳ್ಳಿ ಟೈಗರ್ಸ್ ಚಾಂಪಿಯನ್‌ಪಟ್ಟಕ್ಕೇರಿತ್ತು.
ಮೈಸೂರು ವಾರಿಯರ್ಸ್: 7 ವಿಕೆಟ್‌ಗೆ 161 (ಶುಭಾ ಸತೀಶ್ 56, ಶೀತಲ್ 36, ಶಿಶಿರ 37, ಯಶಿಕಾ 5, ಕುಸುಮಾ 6, ಪೂಜಾ 8, ಜೋಯಾ 2, ದೀಕ್ಷಾ 1, ನಿಕಿ ಪ್ರಸಾದ್ 42ಕ್ಕೆ 3, ಶ್ರೇಯಾ 16ಕ್ಕೆ 1).
ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 163 (ಪ್ರತ್ಯೂಷಾ ಕೆ. 28, ವೃಂದಾ 1, ನಿಕಿ ಪ್ರಸಾದ್ 87*, ಶ್ರೇಯಾ 5, ದಿವ್ಯಾ 13, ಮೋನಿಕಾ 10, ಸಿಲ್‌ಕಿನ್ 10, ಸಹನಾ 27ಕ್ಕೆ 2, ದೀಕ್ಷಾ 47ಕ್ಕೆ2).
ಟೂರ್ನಿಯ ಗರಿಷ್ಠ ರನ್ ಸಾಧಕಿ: ಶುಭಾ ಸತೀಶ್ (362); ಗರಿಷ್ಠ ವಿಕೆಟ್ ಸಾಧಕಿ: ದೀಕ್ಷಾ (13).