ಮಹಾರಾಜ ಟ್ರೋಫಿ: ಬೆಂಗಳೂರು ಬ್ಲಾಸ್ಟರ್ಸ್ ಶುಭಾರಂಭ
ವಿಜಯವಾಣಿ ಸುದ್ದಿಜಾಲ ಮೈಸೂರು
ಭುವನ್ ಎಂ.ರಾಜು(56 ರನ್, 29 ಎಸೆತ, 3 ಬೌಂಡರಿ, 4 ಸಿಕ್ಸರ್) ಹಾಗೂ ಎ.ರೋಹನ್ ಪಾಟೀಲ್(31) ಜೋಡಿಯ ಬಿರುಸಿನ ಆರಂಭ ಮತ್ತು ಕಡೆಯ 5 ಓವರ್ಗಳಲ್ಲಿ ನಾಯಕ ಶುಭಾಂಗ್ ಹೆಗ್ಡೆ(36* ರನ್, 26 ಎಸೆತ, 2 ಬೌಂಡರಿ, 1 ಸಿಕ್ಸರ್ ಮತ್ತು 44ಕ್ಕೆ2) ಹಾಗೂ ಪ್ರವಿಣ್ ದುಬೆ(*32) ಜೋಡಿಯ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್ (Bengaluru Blasters) ತಂಡ 5ನೇ ಆವೃತ್ತಿಯ ಮಹಾರಾಜ ಟ್ರೋಫಿ (
Maharaja Trophy KSCA T20 2026) ಕೆಎಸ್ಸಿಎ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಕಂಡಿತು.ವಿದ್ಯಾಕಾಶಿ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಶನಿವಾರ ಆರಂಭಗೊಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಸ್ಟಾರ್ ಬ್ಯಾಟರ್ ಮನೀಷ್ ಪಾಂಡೆ ನಾಯಕತ್ವದ ಮಾಜಿ ಚಾಂಪಿಯನ್ ಗುಲ್ಬರ್ಗ ಮಿಸ್ಟಿಕ್ಸ್ (Gulbarga Mystics) ತಂಡವನ್ನು 6 ವಿಕೆಟ್ಗಳಿಂದ ಮಣಿಸಿತು. ಇದರೊಂದಿಗೆ 2022ನೇ ಆವೃತ್ತಿಯ ಫೈನಲ್ ಪಂದ್ಯದ ಸೋಲಿನ ಸೇಡು ತೀರಿಸಿಕೊಂಡಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಗುಲ್ಬರ್ಗ ಮಿಸ್ಟಿಕ್ಸ್ ತಂಡ ಪ್ರಖರ್ ಚರ್ತುವೇದಿ (64 ರನ್, 38 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಆರವ್ ಮಹೇಶ್(63 ರನ್, 41 ಎಸೆತ, 6 ಬೌಂಡರಿ, 3 ಸಿಕ್ಸರ್) ಭರ್ಜರಿ ಅರ್ಧ ಶತಕದ ನೆರವಿನಿಂದ 5 ವಿಕೆಟ್ಗೆ 201ರನ್ ಪೇರಿಸಿತು. ಪ್ರತಿಯಾಗಿ ಬೆಂಗಳೂರು ತಂಡ ಭರ್ತಿ 20 ಓವರ್ಗಲ್ಲಿ 4 ವಿಕೆಟ್ಗೆ 202 ಬಾರಿಸಿ ಜಯದ ದಡ ಸೇರಿತು.
ಕಡೆಯ ಓವರ್ನಲ್ಲಿ ಬೆಂಗಳೂರು ಗೆಲ್ಲಲು 11 ರನ್ ಬೇಕಿತ್ತು. ಮೊದಲ ಎಸೆತ ಎದುರಿಸಿದ ಪ್ರವಿಣ್ ದುಬೆ ಸಿಂಗಲ್ ಪಡೆದರೆ, ನಂತರದ ಎಸೆತವನ್ನು ಬೌಂಡರಿ ಬಾರಿಸಿದ ನಾಯಕ ಶುಭಾಂಗ್ ಚೇಸಿಂಗ್ನ ಒತ್ತಡ ಕಡಿಮೆ ಮಾಡಿದರು. ನಂತರದ ಎಸೆತದಲ್ಲಿ ಸಿಂಗಲ್ ಪಡೆದರು. ಬಳಿಕ ಸತತ ಎರಡು ಎಸೆತಗಳಲ್ಲಿ ತಲಾ ಎರಡು ರನ್ ಕಲೆಹಾಕಿದ ಪ್ರವಿಣ್ ದುಬೆ ಕಡೆ ಎಸೆತದಲ್ಲಿ ಸಿಂಗಲ್ ಪಡೆದು ತಂಡದ ಗೆಲುವಿಗೆ ಕಾರಣರಾದರು.
ಗುಲ್ಬರ್ಗ ಮಿಸ್ಟಿಕ್ಸ್: 5 ವಿಕೆಟ್ಗೆ 201 (ಲೋಚನ್ ಎಸ್. ಗೌಡ 17, ಪ್ರಖರ್ ಚರ್ತುವೇದಿ 64, ಆರವ್ ಮಹೇಶ್ 63, ಮನೀಶ್ ಪಾಂಡೆ 19, ತಿಪ್ಪ ರೆಡ್ಡಿ 20*, ಶುಭಾಂಗ್ ಹೆಗ್ಡೆ 44ಕ್ಕೆ 2, ಶ್ರೀವತ್ಸ ಆರ್.ಆಚಾರ್ 36ಕ್ಕೆ 2, ಸಮಿತ್ 31ಕ್ಕೆ 1), ಬೆಂಗಳೂರು ಬ್ಲಾಸ್ಟರ್ಸ್: 4 ವಿಕೆಟ್ಗೆ 202 (ಭುವನ್ ಎಂ.ರಾಜು 56, ರೋಹನ್ 31, ಶ್ರೀಜಿತ್ 22, ಶುಭಾಂಗ್ 36*, ಸುಮಿತ್ 11, ಪ್ರವಿಣ್ 32*, ಪಾರಸ್ 34ಕ್ಕೆ 2, ಮ್ಯಾಕ್ನೀಲ್ ನೊರೊನ್ಹಾ 27ಕ್ಕೆ 1, ಧ್ರುವ್ 29ಕ್ಕೆ). ಪಂದ್ಯಶ್ರೇಷ್ಠ: ಶುಭಾಂಗ್ ಹೆಗ್ಡೆ