ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಲುಂಗಿ ಎನ್ಗಿಡಿಗೆ ಗಂಭೀರ ಪೆಟ್ಟು
DC vs PBKS: ಇಂದು (ಏ.25) ದೆಹಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಲುಂಗಿ ಎನ್ಗಿಡಿ ಗಂಭೀರವಾಗಿ ಗಾಯಗೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡಲು ಬೌಂಡರಿ ಲೈನ್ನಲ್ಲಿ ನಿಂತಿದ್ದ ಲುಂಗಿ, ಪ್ರಭ್ಸಿಮ್ರನ್ ಹೊಡೆದ ಶಾಟ್ ಅನ್ನು ಕ್ಯಾಚ್ ಹಿಡಿಯಲು ಜಿಗಿದರು. ಈ ವೇಳೆ, ನೆಲದ ಮೇಲೆ ಹಿಡಿತ ಸಿಗದೆ ಜಾರಿಬಿದ್ದ ಎನ್ಗಿಡಿಯ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿತು. ಕೂಡಲೇ ಆ್ಯಂಬುಲೆನ್ಸ್ ಮೈದಾನಕ್ಕಿಳಿದು, ಅವರನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ದಾಖಲಿಸಿತು.
ಈ ಘಟನೆ ಪಂಜಾಬ್ ಕಿಂಗ್ಸ್ ಚೇಸಿಂಗ್ಗಿಳಿದ 2ನೇ ಓವರ್ ಮೂರನೇ ಬಾಲ್ನಲ್ಲಿ ಸಂಭವಿಸಿತು. ಕ್ಯಾಚ್ ಹಿಡಿಯಲು ಎತ್ತರಕ್ಕೆ ಹಾರಿದ ಲುಂಗಿ, ಆಯಾತಪ್ಪಿ ಕೆಳಗೆ ಬಿದ್ದಾಗ ತಲೆಗೆ ಗಂಭೀರ ಗಾಯವಾಗಿದೆ. ಮೇಲೇಳಲು ಪರದಾಡಿದ ಲುಂಗಿಯನ್ನು ಕಂಡು ಇತರೆ ಆಟಗಾರರು ಓಡಿ ಬಂದು, ಅವರನ್ನು ವಿಚಾರಿಸಿದರು. ಪ್ರಸ್ತುತ, ಅವರು ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರವೇ ಗುಣಮುಖರಾಗಲಿ ಎಂದು ಕ್ರಿಕೆಟ್ ಪ್ರೇಮಿಗಳು ಹಾರೈಸಿದ್ದಾರೆ.