ಲಖನೌ ಸೂಪರ್ಜೈಂಟ್ಸ್ ತಂಡಕ್ಕೆ ಹೊಸ ಲುಕ್! ನೂತನ ಲಾಂಛನ, ಜೆರ್ಸಿ ಅನಾವರಣ
ಬೆಂಗಳೂರು: ಮುಂಬರುವ ಐಪಿಎಲ್ 19ನೇ ಆವೃತ್ತಿಯಲ್ಲಿ ಲಖನೌ ಸೂಪರ್ ಜೈಂಟ್ಸ್ (Lucknow Super Giants) ತಂಡ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳಲಿದೆ. ಉದ್ಯಮಿ ಸಂಜೀವ್ ಗೊಯೆಂಕಾ ಮಾಲೀಕತ್ವದ ಎಲ್ಎಲ್ಜಿ ಫ್ರಾಂಚೈಸಿ, ತಂಡದ ನೂತನ ಲಾಂಛನ ಮತ್ತು ಜೆರ್ಸಿಯನ್ನು ಮಂಗಳವಾರ ಅನಾವರಣಗೊಳಿಸಿದೆ.
ಎಲ್ಎಸ್ಜಿ ತಂಡ ತನ್ನ ಹಳೆಯ ಲೋಗೊದಲ್ಲಿದ್ದ ಬ್ಯಾಟ್, ಚೆಂಡು, ರೆಕ್ಕೆಗಳನ್ನು ಕೈಬಿಟ್ಟಿದೆ. ನೂತನ ಲಾಂಛನ ಗರುಡ, ಕಿರೀಟ, ಆನೆ ಮೂರು ಶಕ್ತಿಶಾಲಿ ಚಿಹ್ನೆಗಳನ್ನು ಹೊಂದಿದ್ದು, ಧೈರ್ಯ, ಹೆಮ್ಮ,ಶಕ್ತಿ, ತಾಳ್ಮೆ ಮತ್ತು ಬುದ್ಧಿವಂತಿಕೆಯನ್ನು ಪ್ರತಿಬಿಂಬಿಸಲಿವೆ. ಇಂಗ್ಲೆಂಡ್ನ ಹಂಡ್ರೆಡ್ ಲೀಗ್ನಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡ ಸಹ ಇದೇ ರೀತಿಯ ಲೋಗೋ ಹೊಂದಿದ್ದು, ಸಂಜೀವ ಗೊಯೆಂಕಾ ತಂಡದಲ್ಲಿ ಶೇ.70 ಷೇರು ಹೊಂದಿದ್ದಾರೆ. ನೀಲಿ ಬಣ್ಣದ ಜೆರ್ಸಿಯನ್ನು ಕಂದು ಕೆಂಪು (ಮರೂನ್) ಬಣ್ಣಕ್ಕೆ ಬದಲಾಯಿಸಲಾಗಿದೆ.
ಇದು ಕೇವಲ ಗುರುತಿನ ಬದಲಾವಣೆಯಲ್ಲ ಹೊಸ ಭರವಸೆ. ಉತ್ತರಪ್ರದೇಶದ ಕಥೆಯ ಜತೆಗೆ ಫ್ರಾಂಚೈಸಿಯ ಜತೆಗೆ ಮೊದಲ ದಿನದಂದಲೂ ಜತೆಯಾಗಿ ನಿಂತಿರುವ ಅಭಿಮಾನಿಗಳ ಸಂಕೇತ.ಈ ಚಿಹ್ನೆಯು ಪ್ರೀತಿ, ನಂಬಿಕೆಯ ಗೌರವವಾಗಿದೆ. ಏಕತೆ, ಮಹತ್ವಾಂಕಾಂಕ್ಷೆಯ ಮೇಲೆ ನಿರ್ಮಿಸಲಾದ ಹೊಸ ಅಧ್ಯಾಯದ ಆರಂಭದ ಸೂಚನೆ ಇದಾಗಿದೆ ಎಂದು ಲಖನೌ ಫ್ರಾಂಚೈಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ಆವೃತ್ತಿಯಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟಿದ ರಿಷಭ್ ಪಂತ್ ಸಾರಥ್ಯದ ಲಖನೌ ಈ ಬಾರಿ ಲಾಂಛನದ ಬದಲಾವಣೆಯೊಂದಿಗೆ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಆರ್ಸಿಬಿ ತಂಡ ಸಹ ಲಾಂಛನ, ಹೆಸರು ಬದಲಾವಣೆ ನಂತರ ಐಪಿಎಲ್ನಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿತ್ತು.