Sanjiv Goenka  
ಕ್ರಿಕೆಟ್

ಮೂರೇ ವರ್ಷಕ್ಕೆ ಮೌಲ್ಯ ಡಬಲ್; ಲಕ್ನೋ ಸೂಪರ್ ಜೈಂಟ್ಸ್ ಈಗ 14,000 ಕೋಟಿಯ ಆಸ್ತಿ : Sanjiv Goenka ಬಿಚ್ಚಿಟ್ಟ ಲಾಭದ ಗುಟ್ಟು!

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಎಂಬುದು ಕೇವಲ ಕ್ರಿಕೆಟ್ ಮೈದಾನದ ಹೋರಾಟಕ್ಕೆ ಸೀಮಿತವಾಗಿಲ್ಲ. ಇದೊಂದು ದೈತ್ಯ ಆರ್ಥಿಕ ಸಾಮ್ರಾಜ್ಯವಾಗಿ ಬೆಳೆದು ನಿಂತಿದೆ. ಇತ್ತೀಚೆಗೆ ನಡೆದ ಪಾಡ್‌ಕಾಸ್ಟ್ ಒಂದರಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಮಾಲೀಕ ಸಂಜೀವ್ ಗೋಯೆಂಕಾ(Sanjiv Goenka) ಅವರು ಐಪಿಎಲ್ ತಂಡಗಳ ಆರ್ಥಿಕ ಮೌಲ್ಯದ ಬಗ್ಗೆ ನೀಡಿರುವ ಹೇಳಿಕೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಪ್ರತಿಷ್ಠೆಗಲ್ಲ, ಲಾಭಕ್ಕಾಗಿ 7000 ಕೋಟಿ ಹೂಡಿಕೆ!

ರಾಜ್ ಶಮಾನಿ ಅವರೊಂದಿಗಿನ ಸಂವಾದದಲ್ಲಿ, "7000 ಕೋಟಿ ರೂಪಾಯಿ ನೀಡಿ ಐಪಿಎಲ್ ತಂಡವನ್ನು ಖರೀದಿಸಿದ್ದು ನಿಮ್ಮ ಪ್ರತಿಷ್ಠೆಯ (Ego) ನಿರ್ಧಾರವೇ?" ಎಂಬ ಪ್ರಶ್ನೆಗೆ ಗೋಯೆಂಕಾ ಅವರು ಖಡಕ್ ಉತ್ತರ ನೀಡಿದ್ದಾರೆ. "ಜನರು ಪ್ರತಿಷ್ಠೆಗಾಗಿ 5-10 ಕೋಟಿ ರೂಪಾಯಿ ಖರ್ಚು ಮಾಡಬಹುದು, ಆದರೆ ಯಾರೂ 7000 ಕೋಟಿ ರೂಪಾಯಿಗಳನ್ನು ಸುಮ್ಮನೆ ಚೆಲ್ಲುವುದಿಲ್ಲ. ನನ್ನ ಪಾಲಿಗೆ ಇದೊಂದು ಗಂಭೀರವಾದ ವ್ಯವಹಾರಿಕ ಹೂಡಿಕೆ (Business Investment)," ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮೂರು ವರ್ಷದಲ್ಲಿ ಡಬಲ್ ಲಾಭ!

ಸಂಜೀವ್ ಗೋಯೆಂಕಾ ಅವರ ಪ್ರಕಾರ, ಅವರು ಸುಮಾರು 7000 ಕೋಟಿ ರೂಪಾಯಿಗಳಿಗೆ ಖರೀದಿಸಿದ ಲಕ್ನೋ ಫ್ರಾಂಚೈಸಿಯ ಮೌಲ್ಯವು ಕೇವಲ ಮೂರೇ ವರ್ಷಗಳಲ್ಲಿ ಭಾರಿ ಏರಿಕೆ ಕಂಡಿದೆ. ಪ್ರಸ್ತುತ ಈ ತಂಡದ ಮೌಲ್ಯ ಸುಮಾರು 12,000 ರಿಂದ 14,000 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಅಂದಾಜಿಸಲಾಗಿದೆ. ಅಂದರೆ ಹೂಡಿಕೆ ಮಾಡಿದ ಮೊತ್ತವು ಕೇವಲ ಮೂರು ವರ್ಷಗಳಲ್ಲಿ ಎರಡರಷ್ಟು ಬೆಳೆದಿದೆ!

'ಟ್ರೋಫಿ ಬಿಸಿನೆಸ್' ಅಂದ್ರೆ ಏನು?

ಐಪಿಎಲ್ ತಂಡವನ್ನು ಹೊಂದುವುದು ಈಗ ಕಾರ್ಪೊರೇಟ್ ಜಗತ್ತಿನಲ್ಲಿ ಒಂದು ಶಕ್ತಿಯುತ ಆಸ್ತಿಯಾಗಿ (Asset) ಮಾರ್ಪಟ್ಟಿದೆ. ದೊಡ್ಡ ಉದ್ಯಮಿಗಳು ತಂಡಗಳನ್ನು ಖರೀದಿಸುವುದು ಕೇವಲ ಕ್ರಿಕೆಟ್ ಮೇಲಿನ ಪ್ರೀತಿಗಾಗಿ ಮಾತ್ರವಲ್ಲ, ಅದರ ಬ್ರ್ಯಾಂಡ್ ಮೌಲ್ಯ ಮತ್ತು ಅದರಿಂದ ಬರುವ ಭಾರಿ ಲಾಭಾಂಶಕ್ಕಾಗಿ. ಹಾಗಾಗಿಯೇ ಐಪಿಎಲ್ ಅನ್ನು ಇಂದಿನ ದಿನಗಳಲ್ಲಿ 'ಟ್ರೋಫಿ ಬಿಸಿನೆಸ್' ಎಂದು ಕರೆಯಲಾಗುತ್ತಿದೆ.
ಒಟ್ಟಾರೆಯಾಗಿ, ಐಪಿಎಲ್ ಎಂಬುದು ಕ್ರೀಡೆಯನ್ನು ಮೀರಿ ಬೆಳೆದಿರುವ ಒಂದು ಬೃಹತ್ ವ್ಯಾಪಾರೀಕರಣದ ವೇದಿಕೆಯಾಗಿದ್ದು, ಇಲ್ಲಿ ಪ್ರತಿ ರನ್ ಮತ್ತು ಪ್ರತಿ ವಿಕೆಟ್ ಕೂಡ ಕೋಟಿ ಕೋಟಿ ರೂಪಾಯಿಗಳ ವ್ಯವಹಾರವನ್ನು ನಿರ್ಧರಿಸುತ್ತದೆ,(ಎಜೆನ್ಸೀಸ್​).