RCB VS LSG 
ಕ್ರಿಕೆಟ್

ರಾಸಿಕ್, ಭುವಿ ಬೌಲಿಂಗ್ ದಾಳಿಗೆ ಬೆಚ್ಚಿಬಿದ್ದ ಲಖನೌ; ಕೇವಲ 146 ರನ್​ಗೆ ಆಲೌಟ್ ಆದ ಪಂತ್ ಪಡೆ | RCB VS LSG

RCB VS LSG: ಬುಧವಾರ ನಡೆದ ಐಪಿಎಲ್ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ವಿಭಾಗವು ಸಾಂಘಿಕ ಮತ್ತು ಕ್ಲಿನಿಕಲ್ ಪ್ರದರ್ಶನ ನೀಡಿತು. ಯುವ ವೇಗಿ ರಾಸಿಕ್ ಸಲಾಂ ದಾರ್ ಮತ್ತು ಅನುಭವಿ ಭುವನೇಶ್ವರ ಕುಮಾರ್​ ಮಾರಕ ದಾಳಿಗೆ ತತ್ತರಿಸಿದ ಲಖನೌ ಸೂಪರ್ ಜೈಂಟ್ಸ್ ತಂಡವು ಕೇವಲ 146 ರನ್‌ಗಳಿಗೆ ಆಲೌಟ್​ ಆಗಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಖನೌ ತಂಡಕ್ಕೆ ರಾಸಿಕ್ ಸಲಾಂ ದಾರ್ ಸಿಂಹಸ್ವಪ್ನವಾದರು. ಕೇವಲ 24 ರನ್ ನೀಡಿ 4 ಪ್ರಮುಖ ವಿಕೆಟ್ ಕಬಳಿಸಿದ ರಾಸಿಕ್, ಪಂದ್ಯದ ಗತಿಯನ್ನು ಸಂಪೂರ್ಣವಾಗಿ ಬೆಂಗಳೂರಿನ ಪರವಾಗಿ ತಿರುಗಿಸಿದರು.
ಲಖನೌ ಪರ ಮಿಚೆಲ್ ಮಾರ್ಷ್ 40 ರನ್ ಮತ್ತು ಆಯುಷ್ ಬಡೋನಿ 38 ರನ್, ಕೊನೆಯಲ್ಲಿ ಮುಕುಲ್​ ಚೌಧರಿ 39 ರನ್​ ಮಾತ್ರ ಪ್ರತಿರೋಧ ತೋರಿದರು. ಇವರನ್ನು ಹೊರತುಪಡಿಸಿ ಉಳಿದ ಯಾವುದೇ ಬ್ಯಾಟರ್‌ಗಳು ಉತ್ತಮ ಮೊತ್ತ ದಾಖಲಿಸಲು ಬೆಂಗಳೂರು ಬೌಲರ್‌ಗಳು ಅವಕಾಶ ನೀಡಲಿಲ್ಲ. ನಿರಂತರವಾಗಿ ವಿಕೆಟ್ ಕಳೆದುಕೊಂಡ ಲಖನೌ, ಅಂತಿಮವಾಗಿ 146 ರನ್‌ಗಳಿಗೆ ತನ್ನೆಲ್ಲಾ ವಿಕೆಟ್​ ಕಳೆದುಕೊಂಡಿತು.

ನಾಯಕ ಪಂತ್‌ಗೆ ಗಾಯದ ಆಘಾತ

ಲಖನೌ ತಂಡದ ಇನ್ನಿಂಗ್ಸ್‌ನ 5ನೇ ಓವರ್‌ನಲ್ಲಿ ದೊಡ್ಡ ಆಘಾತವೊಂದು ಸಂಭವಿಸಿದ್ದು, ವೇಗಿ ಜೋಶ್ ಹ್ಯಾಜಲ್‌ವುಡ್ ಎಸೆದ ಬೌನ್ಸರ್ ನಾಯಕ ರಿಷಬ್ ಪಂತ್ ಎಡಗೈ ಮೊಣಕೈಗೆ ಬಲವಾಗಿ ತಗುಲಿತು. ನೋವಿನಿಂದ ಬಳಲಿದ ಪಂತ್ ಅನಿವಾರ್ಯವಾಗಿ ಮೈದಾನದಿಂದ ಹೊರನಡೆದರು. ಇದಾದ ಬಳಿಕ ಇನ್ನಿಂಗ್ಸ್‌ನ ಅಂತ್ಯದಲ್ಲಿ ಮರಳಿ ಕ್ರೀಸ್‌ಗೆ ಬಂದರೂ, ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು(ಏಜೆನ್ಸೀಸ್​).