ಯುವ ಬ್ಯಾಟರ್ ವೈಭವ್ ಸೂರ್ಯವಂಶಿ
- ಐದನೇ ಟಿ20 ಪಂದ್ಯದಿಂದ ವೈಭವ್ ಸೂರ್ಯವಂಶಿ ಕೈಬಿಟ್ಟ ಮ್ಯಾನೇಜ್‌ಮೆಂಟ್
- ಸ್ಟಾರ್ ಯುವ ಆಟಗಾರನ ಹತಾಶೆ ನೋಡಿ ಮಾಜಿ ಕ್ರಿಕೆಟಿಗರು ಬೇಸರ
Vaibhav Sooryavanshi: ಇಂಗ್ಲೆಂಡ್ ಎದುರು ಐದು ಪಂದ್ಯಗಳ ಟಿ20 ಸರಣಿಯಲ್ಲಿ ವೈಟ್ ವಾಷ್ ಆದ ಟೀಮ್ ಇಂಡಿಯಾ ವಿರುದ್ಧ ಸದ್ಯ ಭಾರಿ ಟೀಕೆ, ವ್ಯಂಗ್ಯಗಳು ಹರಿದುಬರುತ್ತಿವೆ. ಗೆಲ್ಲುವ ಅವಕಾಶವಿದ್ದರೂ ತಂಡದಲ್ಲಿ ಹಾಗೂ ಆಟಗಾರರು ಮಾಡಿದ ಕೆಲವೊಂದು ಮಿಸ್ಟೇಕ್ಗಳೇ ಇಂತಹ ಸೋಲಿಗೆ ಕಾರಣ ಎನ್ನಲಾಗಿದೆ. ಐದನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ತಂಡದಿಂದ ವೈಭವ್ ಸೂರ್ಯವಂಶಿಯನ್ನು ಕೈಬಿಟ್ಟ ಮ್ಯಾನೇಜ್‌ಮೆಂಟ್ ವಿರುದ್ಧ ಮಾಜಿ ಕ್ರಿಕೆಟಿಗರು ಸಿಟ್ಟಿಗೆದ್ದಿದ್ದಾರೆ.
ತಂಡದಲ್ಲಿ ಸ್ಥಾನ ಪಡೆಯುವುದು ಎಷ್ಟು ಕಷ್ಟವೋ, ತಂಡದಿಂದ ಕೈಬಿಟ್ಟ ರೀ-ಎಂಟ್ರಿ ಇನ್ನೂ ಕಷ್ಟ. ಪ್ರಸ್ತುತ, 15 ವರ್ಷದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಕೂಡ ಅದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ವೈಭವ್ರನ್ನು ಅಂತಿಮ ತಂಡದಿಂದ ಕೈಬಿಟ್ಟಿದ್ದು ಸರಿಯಾದ ನಿರ್ಧಾರವಲ್ಲ ಎಂದು ಕ್ರಿಕೆಟ್ ಪ್ರೇಮಿಗಳು ಅಭಿಪ್ರಾಯಿಸಿದ್ದಾರೆ.
ತನ್ನನ್ನು ಟೀಮ್ನಿಂದ ಡ್ರಾಪ್ ಮಾಡಿದ ಬಗ್ಗೆ ತಿಳಿದ ಕೂಡಲೇ ಮೈದಾನದಲ್ಲಿ ಬೇಸರದಿಂದ ವೈಭವ್ ಓಡಾಡುತ್ತಿರುವ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಲ್ಲೇ ಇದ್ದ ಸಂಜು ಸ್ಯಾಮ್ಸನ್, ವೈಭವ್ರನ್ನು ತಬ್ಬಿಕೊಂಡು ಸಮಾಧಾನ ಹೇಳುತ್ತಿರುವ ದೃಶ್ಯಗಳು ಸಹ ಹರಿದಾಡಿವೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಮಾಜಿ ಆಟಗಾರರಾದ ಅಂಬಟಿ ರಾಯುಡು ಮತ್ತು ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್, ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅಂಬಟಿ ರಾಯುಡು, “ವೈಭವ್ ಸೂರ್ಯವಂಶಿಯ ಮಾತುಗಳನ್ನು ನೋಡಿದರೆ, ಆತ ಈ ಪಂದ್ಯದಿಂದ ಹೊರಗುಳಿದ ವಿಚಾರ ಹಿಂದಿನ ರಾತ್ರಿಯವರೆಗೂ ಆಡಳಿತ ಮಂಡಳಿ ಅವರಿಗೆ ಹೇಳಿಲ್ಲ ಎಂಬುದು ಸ್ಪಷ್ಟ. ಟಾಸ್ ದಿನವೇ ಸಂಜು ಸ್ಯಾಮ್ಸನ್ರನ್ನು ವೈಭವ್ ಜಾಗಕ್ಕೆ ಆಡಿಸಲಾಗಿದೆ. ತಂಡದಲ್ಲಿ ಇಂತಹ ವಿಷಯಗಳಲ್ಲಿ ಸ್ಪಷ್ಟ ಸಂಭಾಷಣೆ ಬಹಳ ಮುಖ್ಯ. ಮುಂದಿನ 20ರಿಂದ 25 ವರ್ಷಗಳ ಕಾಲ ಭಾರತೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸುವ ಅದ್ಭುತ ಪ್ರತಿಭೆ ಹೊಂದಿರುವ 15 ವರ್ಷದ ಹುಡುಗನನ್ನು ಹೀಗೆಲ್ಲ ನಿರ್ಲಕ್ಷಿಸಬಾರದು ಎಂದು ರಾಯುಡು ಕಟುವಾಗಿ ಹೇಳಿದರು.
ಇನ್ನು, ರಾಯುಡು ಮಾತನ್ನು ಒಪ್ಪಿದ ಸುನಿಲ್ ಗವಾಸ್ಕರ್, ನನ್ನ ಪ್ರಕಾರ, ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಓಪನ್ ಆಡುತ್ತಾರೆ ಮತ್ತು ವೈಭವ್ ಸೂರ್ಯವಂಶಿ ಮೂರನೇ ಕ್ರಮಾಂಕದಲ್ಲಿ ಬರುತ್ತಾರೆ ಎಂದುಕೊಂಡಿದ್ದೆ. ಆದರೆ, ಅವರನ್ನು ತಂಡದಿಂದಲೇ ಕೈಬಿಟ್ಟಿರುವುದು ನನಗೆ ಸರಿ ಅನಿಸಲಿಲ್ಲ. ಇಲ್ಲಿ ಸಂಜು ಸ್ಯಾಮ್ಸನ್ ತಂಡಕ್ಕೆ ಸೇರ್ಪಡೆಯಾಗಿದ್ದಕ್ಕೆ ನನಗೆ ಅಭ್ಯಂತರವಿಲ್ಲ. ಆದರೆ, ಸೂರ್ಯವಂಶಿಯನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಸಿಟ್ಟು ಬರುತ್ತಿದೆ. ಆತ ಎಷ್ಟು ನಿರಾಸೆಯಿಂದ ಇದ್ದಾನೆ ಎಂದು ಬೇಸರ ಹೊರಹಾಕಿದರು,(ಏಜೆನ್ಸೀಸ್).