ಐಪಿಎಲ್ ಆರಂಭ 2 ದಿನ ವಿಳಂಬ? ಮಾರ್ಚ್ ಮೊದಲ ವಾರ ವೇಳಾಪಟ್ಟಿ ಪ್ರಕಟ ಸಾಧ್ಯತೆ
ಬೆಂಗಳೂರು: ಮುಂಬರುವ ಐಪಿಎಲ್ (IPL) 19ನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಸಿಸಿಐ ಇನ್ನೂ ಪ್ರಕಟಿಸಿಲ್ಲ. ಆದರೆ ಬಿಸಿಸಿಐ ಈ ಹಿಂದೆ ಘೋಷಣೆ ಮಾಡಿದ ದಿನಾಂಕಕ್ಕಿಂತ ಎರಡು ಅಥವಾ ಮೂರು ದಿನ ತಡವಾಗಿ ಐಪಿಎಲ್ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಕಳೆದ ಡಿಸೆಂಬರ್ನಲ್ಲಿ ಅಬುಧಾಬಿಯಲ್ಲಿ ನಡೆದ ಮಿನಿ ಹರಾಜು ಪ್ರಕ್ರಿಯೆಯ ಸಮಯದಲ್ಲಿ ಬಿಸಿಸಿಐ, ಮಾರ್ಚ್ 26ರಿಂದ (ಗುರುವಾರ) ಮೇ 31ರವರೆಗೆ (ಭಾನುವಾರ) ಐಪಿಎಲ್ 19ನೇ ಆವೃತ್ತಿ ನಡೆಯಲಿದೆ ಎಂದು ಫ್ರಾಂಚೈಸಿಗಳಿಗೆ ತಿಳಿಸಿತ್ತು. ಆದರೆ ಇದೀಗ ಬಿಸಿಸಿಐ ಎರಡು ತಡವಾಗಿ ಮಾರ್ಚ್ 28ರ ಶನಿವಾರದಂದು ಉದ್ಘಾಟನಾ ಪಂದ್ಯ ಆಯೋಜಿಸುವ ಚಿಂತನೆಯಲ್ಲಿದೆ. ಮಾರ್ಚ್ 29ರ ಭಾನುವಾರದಂದು ಕೂಡ ಮೊದಲ ಪಂದ್ಯ ಆಯೋಜಿಸುವ ಬಗ್ಗೆಯೂ ಪರಿಶೀಲನೆಗಳು ನಡೆದಿವೆ.
ಐಪಿಎಲ್ ಆರಂಭವನ್ನು ಬಿಸಿಸಿಐ ವಿಳಂಬಗೊಳಿಸುತ್ತಿರುವುದು ಯಾಕೆ ಎಂದು ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ವಾರಾಂತ್ಯದ ದಿನಗಳಲ್ಲಿ ಟೂರ್ನಿಗೆ ಚಾಲನೆ ನೀಡಲು ಬಿಸಿಸಿಐ ಬಯಸಿದೆ ಎನ್ನಲಾಗುತ್ತಿದೆ. ಆದರೆ ಆರಂಭ ವಿಳಂಬವಾಗುವುದರಿಂದ, ಟೂರ್ನಿ ಮುಕ್ತಾಯವೂ 2 ದಿನ ತಡವಾಗುವುದೇ ಎಂಬುದು ಸ್ಪಷ್ಟವಾಗಿಲ್ಲ.
ಎರಡು ಹಂತಗಳಲ್ಲಿ ವೇಳಾಪಟ್ಟಿ ಬಿಡುಗಡೆ?
ಏಪ್ರಿಲ್&ಮೇ ಸಮಯದಲ್ಲೇ ನಡೆಯಲಿರುವ ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಚುನಾವಣೆಯ ವೇಳಾಪಟ್ಟಿ ಇನ್ನೂ ಪ್ರಕಟವಾಗದಿರುವ ಕಾರಣ ಬಿಸಿಸಿಐ, ಐಪಿಎಲ್ ವೇಳಾಪಟ್ಟಿಯನ್ನು ಇನ್ನೂ ಬಿಡುಗಡೆಗೊಳಿಸಿಲ್ಲ. ಐಪಿಎಲ್ ಪಂದ್ಯ ನಿಗದಿಯಾದ ಸಮಯದಲ್ಲೇ ಕೋಲ್ಕತ, ಚೆನ್ನೈ, ಗುವಾಹಟಿಯಲ್ಲಿ ಪಂದ್ಯಗಳು ನಿಗದಿಯಾದರೆ, ಭದ್ರತಾ ಕಾರಣದಿಂದ ಪಂದ್ಯ ಸ್ಥಳಾಂತರಿಸಬೇಕಾಗುವ ತಾಪತ್ರಯವನ್ನು ತಪ್ಪಿಸುವುದು ಇದರ ಉದ್ದೇಶ. ಹೀಗಾಗಿ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಅದಕ್ಕೆ ತಕ್ಕಂತೆ ಐಪಿಎಲ್ ಪಂದ್ಯ ನಿಗದಿಪಡಿಸುವುದು ಬಿಸಿಸಿಐ ಯೋಜನೆ. ಆದರೆ ಚುನಾವಣಾ ಆಯೋಗ ಯಾವಾಗ ದಿನಾಂಕ ಘೋಷಿಸಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಹೀಗಾಗಿ ಬಿಸಿಸಿಐ, ಎರಡು ಹಂತಗಳಲ್ಲಿ ಐಪಿಎಲ್ ವೇಳಾಪಟ್ಟಿ ಬಿಡುಗಡೆಗೊಳಿಸಲು ಚಿಂತಿಸಿದೆ. 2019ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲೂ ಬಿಸಿಸಿಐ ಇದೇ ರೀತಿ 2 ಹಂತಗಳಲ್ಲಿ ಐಪಿಎಲ್ ವೇಳಾಪಟ್ಟಿ ಪ್ರಕಟಿಸಿತ್ತು. ಮಾರ್ಚ್ ಮೊದಲ ವಾರದಲ್ಲಿ ಐಪಿಎಲ್ 19ನೇ ಆವೃತ್ತಿಯ ಭಾಗಶಃ ಅಥವಾ ಸಂಭಾವ್ಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸುವ ಸಾಧ್ಯತೆ ಇದೆ.