- ವಿರಾಟ್ ಕೊಹ್ಲಿ ಆಟೋಗ್ರಾಫ್ ಸಿಗದೆ ಅತ್ತ ಪುಟ್ಟ ಬಾಲಕ, ನೆಟ್ಟಿಗರಿಂದ ಬೇಸರ ವ್ಯಕ್ತ
- ಎಷ್ಟೇ ಮಿಸುಕಾಡಿದರು ನೋಡದೆ ಹೊರಟ ವಿರಾಟ್, ನೆಲಕ್ಕೆ ಕುಕ್ಕಿ ಗಳಗಳನೆ ಅತ್ತ ಬಾಲಕ
- ಪುಟ್ಟ ಅಭಿಮಾನಿ ಅತ್ತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್
Indian Premier League ಕ್ರೇಜ್ ಜೋರಾಗಿದೆ. ಅದ್ರಲ್ಲೂ ಧೋನಿ, ವಿರಾಟ್ ಕೊಹ್ಲಿ ಸೇರಿದಂತೆ ಇಷ್ಟದ ನಾಯಕರ ಸಹಿ ಪಡೆಯೋದಕ್ಕೆ ಜನ ಸೇರಿರುತ್ತಾರೆ. ಆದರೆ, ಹಸ್ತಾಕ್ಷರ ಸಿಗದಿದ್ದಾಗ ಆಗುವ ನೋವು ಅಂತಿದ್ದಲ್ಲ. ಇಂತದ್ದೇ ಒಂದು ಸಂದರ್ಭ ವಿರಾಟ್ ಕೊಹ್ಲಿಯ(Virat Kohli) ಪುಟ್ಟ ಅಭಿಮಾನಿಗೆ ಸಂಭವಿಸಿತ್ತು. ಆತ ಬೇಸರವಾಗಿ ಅತ್ತು ಕರೆದು, ಬ್ಯಾಟ್ ನೆಲಕ್ಕೆ ಕುಕ್ಕಿರುವ ವಿಡಿಯೋ ಸದ್ಯ ವೈರಲ್ ಆಗಿದೆ.
Royal Challengers Bengaluru ತಂಡದ ಪಂದ್ಯ ಮುಗಿದ ನಂತರವೋ ಅಥವಾ ಅಭ್ಯಾಸದ ಅವಧಿಯಲ್ಲಿಯೋ ನಡೆದ ಘಟನೆ ಇದು ಎನ್ನಲಾಗಿದೆ. ಈಗ ನೆಟ್ಟಿಗರು ಪುಟ್ಟ ಬಾಲಕನ ಬಗ್ಗೆ ಕರುಣೆ ತೋರಿದ್ದಾರೆ. ವಿರಾಟ್ ಹೀಗೆ ಮಾಡಬಾರದಿತ್ತು ಎನ್ನುತ್ತಿದ್ದಾರೆ
ವಿಡಿಯೋದಲ್ಲಿ ಏನಿದೆ?
ಏಪ್ರಿಲ್ 27ರಂದು ಆರ್ಸಿಬಿ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿತ್ತು. ಈ ಮಧ್ಯೆ ವಿರಾಟ್ ಅವರು ಮೈದಾನಿಂದ ಹೊರ ಬರುತ್ತಿರುವ ವೇಳೆಯಲ್ಲಿಯೋ ಅಥವಾ ಒಳಗೆ ಹೋಗುತ್ತಿರುವಾಗಲೋ ಕಿಕ್ಕಿರಿದು ಜನ ಸೇರಿದ್ದರು. ಎಲ್ಲರಿಗೂ ಆಟೋಗ್ರಾಫ್ ಕೊಟ್ಟು ಮುಂದೆ ಸಾಗಿದ್ದರು.
ಅದೇ ಸಮಯದಲ್ಲಿ ಒಬ್ಬ ಪುಟ್ಟ ಬಾಲಕ ಅವನಷ್ಟೇ ಉದ್ದದ ಬ್ಯಾಟ್ ಹಿಡಿದು, ವಿರಾಟ್ ಬಳಿ ಆಟೋಗ್ರಾಫ್ಗಾಗಿ ಅತ್ತಿಂದಿಂತ್ತ ಮಿಸುಕಾಡುತ್ತಿದ್ದ. ಆದರೆ, ಭದ್ರತಾ ಸಿಬ್ಬಂದಿ ಯಾರನ್ನು ಹತ್ತಿರಕ್ಕೂ ಸುಳಿಯಲು ಬಿಡಲಿಲ್ಲ. ಕೊನೆಗೆ ವಿರಾಟ್ ಹೋಟೆಲ್ ರೂಂನೊಳಗೆ ತೆರಳಿ ಬಿಟ್ಟರು. ಹಾಲ್ನಿಂದಲೇ ಎಕ್ಸಿಟ್ವರೆಗೂ ಅಳುತ್ತ ಬಂದ ಆತ ತನ್ನ ಪೋಷಕರ ಬಳಿ ಬರುತ್ತಲೇ ಬ್ಯಾಟ್ ನೆಲಕ್ಕೆ ಕುಕ್ಕಿ... ಸಿಟ್ಟಿಗೆ ಬ್ಯಾರಿಕೇಡ್ ಅನ್ನು ತಳ್ಳಲು ಯತ್ನಿಸಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ‘
ಈ ವಿಡಿಯೋ ಕಂಡ ನೆಟ್ಟಿಗರು ವಿರಾಟ್ ಕೊಹ್ಲಿ ವಿರುದ್ಧ ಕಿಡಿಕಾರುತ್ತಿದ್ದಾರೆ. ಆದರೆ, ಇದರಲ್ಲಿ ವಿರಾಟ್ ನೋಡಿಯೂ ಹಾಗೆ ವರ್ತಿಸಿದ್ದಾರೋ ಅಥವಾ ಇಲ್ಲವೋ ಎನ್ನುವುದು ತಿಳಿದುಬಂದಿಲ್ಲ.
ನೆಟ್ಟಿಗರು ಹೇಳೋದೇನು?
ಆ ಮಗುವತ್ತ ಒಮ್ಮೆಯಾದರೂ ವಿರಾಟ್ ಕಣ್ಣು ಹಾಯಿಸಬೇಕಿತ್ತು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಹೀಗೆಂದು ಕಾಮೆಂಟ್ ಮಾಡಿದ್ದಾರೆ. ಹೋಗುತ್ತಾ ಬರುವವರೆಲ್ಲರಿಗೂ ಆಟೋಗ್ರಾಫ್ ಕೊಡಲು ವಿರಾಟ್ಗೆ ಸಾಧ್ಯವಿಲ್ಲ ಎಂದು ಪರವಾಗಿ ವಾದಿಸಿದ್ದಾರೆ. ಆಟಗಾರರ ತಪ್ಪಿಲ್ಲ ಭದ್ರತಾ ಸಿಬ್ಬಂದಿ ಬಿಡೋದಿಲ್ಲ ಎಂದು ಕೆಲವೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಮೇಲಿನ ಅಭಿಮಾನ ಆ ಪುಟ್ಟ ಬಾಲಕನಿಗೆ ಎಷ್ಟಿದೆ ಎನ್ನುವುದು ಇಲ್ಲಿ ಸಾಬೀತಾಗಿದೆ, (ಏಜೆನ್ಸೀಸ್).