ವಂಡರ್ ಕಿಡ್ ವೈಭವ್ ಸೂರ್ಯವಂಶಿಯನ್ನು ತಂಡದಿಂದ ಕೈಬಿಡುವಂತೆ ಮಂಜ್ರೇಕರ್ ಸಲಹೆ! ಕಾರಣ ಹೀಗಿದೆ...Vaibhav Sooryavanshi
- 15 ವರ್ಷದ ಯುವ ಆಟಗಾರನಿಗೆ ಶಾಕ್ ನೀಡಲು ಸಂಜಯ್ ಮಂಜ್ರೇಕರ್ ಆಗ್ರಹ
- ವೈಭವ್ ಸೂರ್ಯವಂಶಿಯನ್ನು ತಂಡದಿಂದ ಕೈಬಿಡಲು ಭಾರತಕ್ಕೆ ಮಂಜ್ರೇಕರ್ ಸಲಹೆ
- ಮೈದಾನದ ರಾದ್ಧಾಂತದ ಬೆನ್ನಲ್ಲೇ ಇಂಡಿಯಾ ಎ ಆಟಗಾರರಿಗೆ ಬಿಸಿಸಿಐ ಕಿವಿಮಾತು
- ಸೂರ್ಯವಂಶಿ ವಿವಾದದ ಬೆನ್ನಲ್ಲೇ ದೇವಜಿತ್ ಸೈಕಿಯಾ ಖಡಕ್ ಸಂದೇಶ
Vaibhav Sooryavanshi : ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವೆ ಇತ್ತೀಚೆಗೆ ನಡೆದ ತ್ರಿಕೋನ ಎ ಸರಣಿಯ ಪಂದ್ಯದ ವೇಳೆ ನಡೆದ ಅಹಿತಕರ ಘಟನೆಯಿಂದಾಗಿ ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ಸದ್ಯ ಟೀಕೆಗಳಿಗೆ ಗುರಿಯಾಗಿದ್ದಾರೆ.
ಪಂದ್ಯದ ವೇಳೆ ಶ್ರೀಲಂಕಾದ ವಿಶೇನ್ ಹಾಲಂಬಾಗೆ ಮಾಡಿದ ಸ್ಲೆಡ್ಜಿಂಗ್ಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಸೂರ್ಯವಂಶಿ, ವಾಕ್ಸಮರದಲ್ಲಿ ತೊಡಗಿದ್ದಲ್ಲದೆ ಶ್ರೀಲಂಕಾ ಆಟಗಾರನನ್ನು ಜೋರಾಗಿ ತಳ್ಳಿದರು. ತಕ್ಷಣವೇ ಮಧ್ಯಪ್ರವೇಶಿಸಿದ ಲಂಕಾದ ಉಳಿದ ಆಟಗಾರರು ಮತ್ತು ಅಂಪೈರ್‌ಗಳು ಇಬ್ಬರನ್ನೂ ದೂರ ತಳ್ಳಿದ್ದರಿಂದ ಸಂಘರ್ಷವು ವಿಕೋಪಕ್ಕೆ ತಿರುಗುವುದು ತಪ್ಪಿತು.
ಈ ಒಂದು ಘಟನೆಯು ಕ್ರಿಕೆಟ್ ವಲಯದಲ್ಲಿ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ. ವೈಭವ್ ಸೂರ್ಯವಂಶಿ ಅವರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕ್ರೀಡಾ ಪ್ರೇಮಿಗಳಿಂದ ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಒಂದು ಕಡೆ ಅವರ ಆಕ್ರಮಣಕಾರಿ ವರ್ತನೆಗೆ ಟೀಕೆಗಳು ಕೇಳಿಬರುತ್ತಿದ್ದರೆ, ಮತ್ತೊಂದು ಕಡೆ ಅವರಿಗೆ ಬೆಂಬಲವೂ ಸಿಗುತ್ತಿದೆ. ಇನ್ನು ಈ ಅಶಿಸ್ತಿನ ವರ್ತನೆಗಾಗಿ ಮೈದಾನದಲ್ಲಿ ಗಲಾಟೆ ಮಾಡಿಕೊಂಡ ಇಬ್ಬರೂ ಆಟಗಾರರಿಗೆ ಪಂದ್ಯದ ಸಂಭಾವನೆಯಲ್ಲಿ ಕಡಿತ ಅಥವಾ ಆರ್ಥಿಕ ದಂಡ ವಿಧಿಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ತಮ್ಮ ನೇರ ಹಾಗೂ ನಿಷ್ಠುರ ಮಾತುಗಳಿಗೆ ಹೆಸರಾದ ಭಾರತ ತಂಡದ ಮಾಜಿ ಬ್ಯಾಟರ್ ಸಂಜಯ್ ಮಂಜ್ರೇಕರ್ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಒಂದು ವೇಳೆ ತಾವು ಇಂಡಿಯಾ ಎ ತಂಡದ ಉಸ್ತುವಾರಿ ಹೊಂದಿದ್ದರೆ ಅಫ್ಘಾನಿಸ್ತಾನ ಎ ವಿರುದ್ಧದ ಬುಧವಾರದ ಪಂದ್ಯದಿಂದ ವೈಭವ್ ಸೂರ್ಯವಂಶಿ ಅವರನ್ನು ಕೈಬಿಡುತ್ತಿದ್ದೆ ಎಂದು ಹೇಳಿದ್ದಾರೆ. ಮಂಜ್ರೇಕರ್ ಅವರ ಪ್ರಕಾರ, ಇಂತಹ ಕಠಿಣ ನಿರ್ಧಾರವು ಆ ಯುವ ಬ್ಯಾಟರ್‌ಗೆ ತನ್ನ ವರ್ತನೆಯ ಪರಿಣಾಮಗಳೇನು ಎಂಬುದರ ಬಗ್ಗೆ ಅತ್ಯಂತ ಬಲವಾದ ಸಂದೇಶವನ್ನು ರವಾನಿಸುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಮಂಜ್ರೇಕರ್, ನಾನೇನಾದರೂ ಇಂಡಿಯಾ ಎ ತಂಡದ ಕೋಚ್ ಅಥವಾ ಮ್ಯಾನೇಜರ್ ಆಗಿದ್ದರೆ, ಅಫ್ಘಾನಿಸ್ತಾನ ಎ ವಿರುದ್ಧದ ಪಂದ್ಯದಿಂದ ವೈಭವ್ ಸೂರ್ಯವಂಶಿ ಅವರನ್ನು ಖಂಡಿತವಾಗಿ ಹೊರಗಿಡುತ್ತಿದ್ದೆ. ಮೈದಾನದಲ್ಲಿ ಎಷ್ಟೇ ದೊಡ್ಡ ಪ್ರಚೋದನೆ ಎದುರಾದರೂ ಸಹ, ಈ ರೀತಿ ದೈಹಿಕವಾಗಿ ಆಕ್ರಮಣಕಾರಿ ವರ್ತನೆ ತೋರುವುದು ಸರಿಯಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಲು ನಾನು ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ.
ಬಿಸಿಸಿಐ (BCCI) ಗೌರವ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಇಂಡಿಯಾ ಎ ತಂಡದ ಆಟಗಾರರು ತಮ್ಮ ಕ್ರಿಕೆಟ್‌ನತ್ತ ಮಾತ್ರ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ. ಈ ಟೂರ್ನಿಯಲ್ಲಿ ನೀಡುವ ಅತ್ಯುತ್ತಮ ಪ್ರದರ್ಶನಗಳು ಹಿರಿಯ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ದಾರಿ ಮಾಡಿಕೊಡಲಿವೆ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ. ಸೂರ್ಯವಂಶಿ ಮತ್ತು ಹಾಲಂಬಾಗೆ ನಡುವೆ ಈ ವಾರದ ಆರಂಭದಲ್ಲಿ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಇಂಡಿಯಾ ಎ ತಂಡವು ಪ್ರಸ್ತುತ ಪ್ರಮುಖ ಟೂರ್ನಿಯೊಂದರಲ್ಲಿ ಆಡುತ್ತಿದೆ. ಭಾರತೀಯ ಸೀನಿಯರ್ ತಂಡಕ್ಕೆ ಪ್ರವೇಶ ಪಡೆಯಲು ಸಜ್ಜಾಗಿರುವ ಎಲ್ಲಾ ಮುಂಬರುವ ಆಟಗಾರರು ಈ ದೊಡ್ಡ ತ್ರಿಕೋನ ಸರಣಿಯ ಭಾಗವಾಗಿದ್ದಾರೆ. ಹಾಗಾಗಿ, ಅವರು ಇಂತಹ ಯಾವುದೇ ಬಾಹ್ಯ ಅಥವಾ ಅನಗತ್ಯ ವಿಷಯಗಳಿಂದ ಗಮನ ಕಳೆದುಕೊಳ್ಳದೆ ಕೇವಲ ತಮ್ಮ ಆಟದ ಮೇಲೆ ಮಾತ್ರ ಗಮನ ಕೇಂದ್ರೀಕರಿಸಬೇಕು ಎಂದು ತಿಳಿಸಿದ್ದಾರೆ. ಮುಂದುವರಿದು, "ಅವರು ಆ ಘಟನೆಯ ಬಗ್ಗೆ ತಲೆಕೆಡಿಸಿಕೊಳ್ಳಬಾರದು, ಬದಲಿಗೆ ಈ ತ್ರಿಕೋನ ಸರಣಿಯಲ್ಲಿ ಭಾರತ ಜಯಭೇರಿ ಬಾರಿಸಲು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಬೇಕು. ಸದ್ಯಕ್ಕೆ ನಮಗಿರುವ ಏಕೈಕ ಕಾಳಜಿ ಅದೇ ಆಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್).