ವೈಭವ್ ಸೂರ್ಯವಂಶಿ ಇನ್ನಷ್ಟು ಅಪಾಯಕಾರಿ ಆಗಬಲ್ಲರು: ಜಸ್ಟಿನ್ ಲ್ಯಾಂಗರ್ ಭವಿಷ್ಯ!
ಜೈಪುರ: ಪ್ಯಾಟ್ ಕಮ್ಮಿನ್ಸ್ ಬಳಿಕ ಆಸ್ಟ್ರೆಲಿಯಾದ ಮತ್ತೋರ್ವ ಕ್ರಿಕೆಟ್ ತಾರೆ, ಭಾರತದ ಜೆನ್ ಝೀ ಬ್ಯಾಟಿಂಗ್ ಸೆನ್ಸೇಶನ್ ವೈಭವ್ ಸೂರ್ಯವಂಶಿ (Vaibhav Sooryavanshi) ಬ್ಯಾಟಿಂಗ್ಗೆ ಮನಸೋತಿದ್ದಾರೆ. ಅವರೇ 100ಕ್ಕೂ ಅಧಿಕ ಟೆಸ್ಟ್ ಆಡಿರುವ ಮಾಜಿ ಬ್ಯಾಟರ್ ಜಸ್ಟಿನ್ ಲ್ಯಾಂಗರ್ (Justin Langer). ಲಖನೌ ಸೂಪರ್ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಿರುವ ಲ್ಯಾಂಗರ್, ಮಂಗಳವಾರ 15 ವರ್ಷದ ವೈಭವ್ ತಮ್ಮ ತಂಡದ ವಿರುದ್ಧವೇ ಆಡಿದ ಮ್ಯಾಚ್ ವಿನ್ನಿಂಗ್ ಆಟವನ್ನು ನೋಡಿ ಬೆರಗಾಗಿದ್ದಾರೆ. ಅಲ್ಲದೆ ವೈಭವ್ ಆಟ ಮುಂದೆ ಇನ್ನಷ್ಟು ಸುಧಾರಣೆ ಕಾಣಲಿದೆ ಮತ್ತು ವಿಶ್ವ ಕ್ರಿಕೆಟ್ಗೆ ಭಯ ಹುಟ್ಟಿಸಲಿದ್ದಾರೆ ಎಂದು ಭವಿಷ್ಯವನ್ನೂ ನುಡಿದಿದ್ದಾರೆ.
ಲಖನೌದ 220 ರನ್ ಸವಾಲಿಗೆ ಪ್ರತಿಯಾಗಿ ರಾಜಸ್ಥಾನ, 19.1 ಓವರ್ಗಳಲ್ಲಿ 3 ವಿಕೆಟ್ಗೆ 225 ರನ್ ಗಳಿಸಿ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿ, ಪ್ಲೇಆಫ್ ಆಸೆ ಹೆಚ್ಚಿಸಿಕೊಂಡಿದೆ. ವೈಭವ್ 38 ಎಸೆತಗಳಲ್ಲಿ 7 ಬೌಂಡರಿ, 10 ಸಿಕ್ಸರ್ ಸಹಿತ 93 ರನ್ ಸಿಡಿಸಿ ಆರ್ಆರ್ ಗೆಲುವಿನ ರೂವಾರಿ ಎನಿಸಿದರು. ಯಶಸ್ವಿ ಜೈಸ್ವಾಲ್ (43) ಮತ್ತು ಧ್ರುವ ಜುರೆಲ್ (53*) ಉತ್ತಮ ಸಾಥ್ ನೀಡಿದರು.
ಪಂದ್ಯದ ಬಳಿಕ ವೈಭವ್ ಬಳಿ ಹೋಗಿ ತಮ್ಮ ಜತೆ ಫೋಟೋಗೆ ಪೋಸ್ ನೀಡುವಂತೆ ಕೇಳಿಕೊಳ್ಳುವಷ್ಟರ ಮಟ್ಟಿಗೆ ಅವರ ಅಭಿಮಾನಿಯಾದ ಲ್ಯಾಂಗರ್, 35 ವರ್ಷಗಳ ನನ್ನ ಕ್ರಿಕೆಟ್ ನಂಟಿನಲ್ಲಿ ಕೆಲ ಅಮೋ ಆಟಗಾರರನ್ನು ನೋಡಿರುವೆ. ಆದರೆ ಇಷ್ಟು ಸಣ್ಣ ವಯಸ್ಸಿನಲ್ಲೇ ಈ ರೀತಿ ಬ್ಯಾಟಿಂಗ್ ಮಾಡುತ್ತಿರುವುದನ್ನು ನೋಡಿದರೆ ಬೆರಗಾಗುತ್ತಿದೆ. ಕಳೆದ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ಗೂ ಆತ ಸಿಕ್ಸರ್ ಸಿಡಿಸಿದ್ದನ್ನು ನೋಡಿದ್ದೆ. ಮಾಜಿ ಬ್ಯಾಟರ್ ಆಗಿ ನನಗೂ ಬ್ಯಾಟಿಂಗ್ ಎಷ್ಟು ಕಷ್ಟವಿದೆ ಎಂಬುದು ಗೊತ್ತಿದೆ. ವೈಭವ್ಗೆ ಹೇಗೆ ರನ್ ಗಳಿಸಬೇಕೆಂದು ಗೊತ್ತಿದೆ. ಆತನ ಬ್ಯಾಟಿಂಗ್ ನೋಡಿದ್ದೇ ನನ್ನ ಭಾಗ್ಯ' ಎಂದು ಕೊಂಡಾಡಿದ್ದಾರೆ. ಅಲ್ಲದೆ, ವೈಭವ್ರ ಅತ್ಯುತ್ತಮ ಆಟ ಇನ್ನೂ ಬಂದಿಲ್ಲ. ಭವಿಷ್ಯದಲ್ಲಿ ಅವರು ಇನ್ನಷ್ಟು ಅಪಾಯಕಾರಿ ಆಗಲಿದ್ದಾರೆ ಎಂದೂ ಲ್ಯಾಂಗರ್ ತಿಳಿಸಿದ್ದಾರೆ.