ಐಪಿಎಲ್ ಪಂದ್ಯದಲ್ಲಿ ಮಾಟ-ಮಂತ್ರದ ಗೊಂದಲ
- ಸಿಎಸ್ಕೆ ಮತ್ತು ಎಸ್ಆರ್ಎಚ್ ನಡುವಿನ ಐಪಿಎಲ್ ಪಂದ್ಯ
- ಸನ್‌ರೈಸರ್ಸ್ ಹೈದರಾಬಾದ್ ಫ್ಯಾನ್ ನಡೆಗೆ ಸಿಎಸ್ಕೆ ದೂರಿನ ಪತ್ರ
- ಇದೊಂದು ಫೇಕ್ ಲೆಟರ್ ಎಂದ ಲಲಿತ್ ಮೋದಿ
- 2011ರಲ್ಲಿ ಆ ಫ್ರಾಂಚೈಸಿ ಮಾಲೀಕ ನಿಜಕ್ಕೂ ಮಾಟ-ಮಂತ್ರದಲ್ಲಿ ತೊಡಗಿದ್ದ ಎಂಬ ಆರೋಪ
ಹೈದರಾಬಾದ್: ಶನಿವಾರ (ಏ.18) ಹೈದರಾಬಾದ್‌ನ ಉಪ್ಪಾಲ್ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಪಂದ್ಯದಲ್ಲಿ ಇಶಾನ್ ಕಿಶನ್ ಪಡೆ 10 ರನ್ಗಳ ರೋಚಕ ಗೆಲುವು ದಾಖಲಿಸಿತು. ಆದರೆ, ಪಂದ್ಯದ ವೇಳೆ ಎಸ್ಆರ್ಎಚ್ ಅಭಿಮಾನಿಯೊಬ್ಬ ನಿಂಬೆ ಹಣ್ಣು ಹಿಡಿದು ಪಠಿಸಿದ ಮಂತ್ರದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗೊಂದಲ, ವಿವಾದ ಸೃಷ್ಟಿಸಿದೆ.
ದುಬೆ ವಿಕೆಟ್ ಪತನ
ಸಿಎಸ್ಕೆ ಚೇಸಿಂಗ್ನಲ್ಲಿದ್ದ ವೇಳೆ ಎಸ್ಆರ್ಎಚ್ ಅಭಿಮಾನಿಗಳು ಕೈಯಲ್ಲಿ ನಿಂಬೆ ಹಣ್ಣು ಹಿಡಿದು, ಯಾವುದೋ ಮಂತ್ರ ಹೇಳುತ್ತಿರುವ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ತಂಡವನ್ನು ಗೆಲ್ಲಿಸಲು ಕ್ರೀಸ್ಗೆ ಅಂಟಿ ನಿಂತಿದ್ದ ಶಿವಂ ದುಬೆ, ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿದ್ದರು. ಇದೇ ವೇಳೆ, ಮೈದಾನದಲ್ಲಿದ್ದ ಸನ್‌ರೈಸರ್ಸ್ ಹೈದರಾಬಾದ್ ಅಭಿಮಾನಿಯೊಬ್ಬರು, ಕೈಯಲ್ಲಿ ನಿಂಬೆ ಹಣ್ಣು ಹಿಡಿದು, ಮಂತ್ರ ಹೇಳಿಬಿಟ್ಟ ಕೂಡಲೇ ದುಬೆ ಅವರ ವಿಕೆಟ್ ಪತನವಾಗುತ್ತದೆ. ಇದನ್ನು ಕಂಡ ಕ್ಷಣ ಅವರು ತೀರ ಖುಷಿಯಿಂದ ಸಂಭ್ರಮಿಸುತ್ತಾರೆ. ಈ ದೃಶ್ಯಗಳು ವೈರಲ್ ಆದ ಬೆನ್ನಲ್ಲೇ ಸಿಎಸ್ಕೆ ಬಿಸಿಸಿಐಗೆ ಪತ್ರದ ಮೂಲಕ ದೂರು ನೀಡಿದೆ ಎನ್ನಲಾದ ಒಂದು ಲೆಟರ್ ಕೂಡ ಹರಿದಾಡಿದೆ.
ಪಂದ್ಯದ ವೇಳೆ ಸನ್‌ರೈಸರ್ಸ್ ಹೈದರಾಬಾದ್ ಅಭಿಮಾನಿಗಳು ಇಂತಹ ಕೆಲಸ ಮಾಡಿರುವುದು ಒಪ್ಪುವಂತದ್ದಲ್ಲ. ಈ ನಡೆ ನಮಗೆ ಬೇಸರ ತಂದಿದೆ ಎಂದು ಸಿಎಸ್ಕೆ ದೂರಿನ ಪತ್ರದಲ್ಲಿ ಉಲ್ಲೇಖವಾಗಿದೆ. ಆದರೆ, ಅಸಲಿಗೆ ಈ ಪತ್ರ ಅಧಿಕೃತ ಅಲ್ಲವೇ ಅಲ್ಲ ಎನ್ನಲಾಗಿದೆ. ಕಾರಣ, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ, ಈ ಕುರಿತಂತೆ ತಮ್ಮ ಯಾವುದೇ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ದೂರನ್ನು ವ್ಯಕ್ತಪಡಿಸಿಲ್ಲ.
ಫೇಕ್ ದೂರಿನ ಲೆಟರ್
ಮತ್ತೊಂದೆಡೆ, ಮಾಜಿ ಕ್ರಿಕೆಟಿಗ, ಐಪಿಎಲ್ ಅಧ್ಯಕ್ಷರಾದ ಲಲಿತ್ ಮೋದಿ ಪ್ರತಿಕ್ರಿಯಿಸಿ, ಎಸ್ಆರ್ಎಚ್ ಅಭಿಮಾನಿಯೊಬ್ಬರು ಮೈದಾನದಲ್ಲಿ ನಿಂಬೆ ಹಣ್ಣು ಹಿಡಿದು ಮಾಟ-ಮಂತ್ರದ ದೃಶ್ಯ ಎಂದು ಹೇಳಲಾದ ವಿಡಿಯೋವನ್ನು ನಾನೂ ಕೂಡ ನೋಡಿದೆ. ಅಸಲಿಗೆ, ಇಲ್ಲಿ ಸಿಎಸ್ಕೆ ದೂರು ಸಲ್ಲಿಸಿದೆ ಎಂದು ಹರಿದಾಡುತ್ತಿರುವ ಪತ್ರ ಸುಳ್ಳು. ಇದೊಂದು ಫೇಕ್ ಲೆಟರ್ ಆಗಿದೆ ಎಂದು ಹೇಳಿದ್ದಾರೆ.
ಇದು ಸುಳ್ಳು. ಆದರೆ, ಇದೇ ರೀತಿ 2011ರ ಐಪಿಎಲ್ ಲೀಗ್ನಲ್ಲಿ ಒಬ್ಬ ಫ್ರಾಂಚೈಸಿಯ ಮಾಲೀಕ ಮಾಟ-ಮಂತ್ರದಲ್ಲಿ ತೊಡಗಿದ್ದರು ಎಂದು ಲಲಿತ್ ಆರೋಪಿಸಿರುವುದು ಸದ್ಯ ಹಲವರ ಹುಬ್ಬೇರಿಸಿದೆ. ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿರುವ ಲಲಿತ್ ಮೋದಿ, ನನಗೆ ನೆನಪಿದೆ. ಎದುರಾಳಿ ತಂಡಕ್ಕೆ ಮತ್ತೊಂದು ಫ್ರಾಂಚೈಸಿ ಮಾಲೀಕ ಮಾಡುತ್ತಿದ್ದ ಕೆಲಸಗಳ ಕುರಿತು ನಾನು ಎಚ್ಚರಿಸಿದ್ದೆ. ಎದುರಾಳಿ ತಂಡದ ಡ್ರೆಸ್ಸಿಂಗ್ ರೂಮ್ ಮುಂದೆ ಇಂತಹ ಅಭ್ಯಾಸಗಳನ್ನು ಆತ ರೂಢಿಸಿಕೊಂಡಿದ್ದ ಎಂದು ಆರೋಪಿಸಿದ್ದಾರೆ. ಅಸಲಿಗೆ, ಅದು ಯಾರು? ಯಾವ ಫ್ರಾಂಚೈಸಿ ಎಂಬುದನ್ನು ಮಾತ್ರ ಲಲಿತ್ ಬಾಯ್ಬಿಟ್ಟಿಲ್ಲ ಎಂಬುದು ಗಮನಾರ್ಹ, (ಏಜೆನ್ಸೀಸ್).