ಅವನೊಬ್ಬ ಜೋಕರ್​... ಮೊದಲು ಗೋಯೆಂಕಾನನ್ನು ಬ್ಯಾನ್​ ಮಾಡಿ ಐಪಿಎಲ್​ನಿಂದ ಹೊರದಬ್ಬಿ ಎಂದು ಆಕ್ರೋಶ! Sanjiv Goenka  
ಕ್ರಿಕೆಟ್

ಅವನೊಬ್ಬ ಜೋಕರ್​... ಮೊದಲು ಗೋಯೆಂಕಾನನ್ನು ಬ್ಯಾನ್​ ಮಾಡಿ ಐಪಿಎಲ್​ನಿಂದ ಹೊರದಬ್ಬಿ ಎಂದು ಆಕ್ರೋಶ! Sanjiv Goenka

ಪ್ರಮುಖ ಮುಖ್ಯಾಂಶಗಳು

  • ಬುಧವಾರ ( ಏಪ್ರಿಲ್​ 01) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಎಲ್​ಎಸ್​ಜಿ ತಂಡ ಹೀನಾಯವಾಗಿ ಸೋಲುಂಡಿತು
  • ತಂಡದ ಮಾಲೀಕ ಸಂಜೀವ್ ಗೋಯೆಂಕಾ ಮತ್ತು ರಿಷಭ್ ಪಂತ್ ನಡುವೆ ಮೈದಾನದಲ್ಲೇ ತೀವ್ರ ವಾಗ್ವಾದ ನಡೆಯಿತು
  • ಗೋಯೆಂಕಾ ಅವರು ಪಂತ್​ ವಿರುದ್ಧ ಅಸಮಾಧಾನ ಹೊರಹಾಕಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
  • ಗೋಯೆಂಕಾ ಓರ್ವ ಲೂಸರ್​ ಆತನನ್ನು ಬ್ಯಾನ್​ ಮಾಡಿ ಐಪಿಎಲ್​ನಿಂದಲೇ ಹೊರಗಡೆ ಹಾಕಿ ಎಂದು ಆಗ್ರಹ
Sanjiv Goenka  : ಲಖನೌ ಸೂಪರ್‌ಜೈಂಟ್ಸ್ ( LSG ) ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಅವರನ್ನು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ ( BCCI ) ನಿಷೇಧಿಸಬೇಕೆಂದು ಐಪಿಎಲ್‌ ( IPL ) ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಹೇಳಿದ್ದಾರೆ. 
ಬುಧವಾರ ( ಏಪ್ರಿಲ್​ 01) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಎಲ್​ಎಸ್​ಜಿ ತಂಡ ಹೀನಾಯವಾಗಿ ಸೋಲುಂಡಿತು. ಇದರ ಬೆನ್ನಲ್ಲೇ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಮತ್ತು ರಿಷಭ್ ಪಂತ್ ನಡುವೆ ಮೈದಾನದಲ್ಲೇ ತೀವ್ರ ವಾಗ್ವಾದ ನಡೆಯಿತು. ಇದರ ಬೆನ್ನಲ್ಲೇ ಲಲಿತ್​ ಮೋದಿ, ಗೋಯೆಂಕಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಲಖನೌದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಐದನೇ ಪಂದ್ಯದಲ್ಲಿ ಲಖನೌ ಸೂಪರ್​ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದು ಬೀಗಿತು.​ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಎಲ್​ಎಸ್​ಜಿ, 18.4 ಓವರ್​ಗೆ ಕೇವಲ 141 ರನ್​ ಕಲೆಹಾಕಿತು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಅಕ್ಷರ್​ ಪಡೆಗೆ ಆರಂಭಿಕ ಆಘಾತ ಎದುರಾಯಿತು. ಓಪನರ್​ಗಳಾದ ಕೆ.ಎಲ್.​ ರಾಹುಲ್ ಡಕ್​ ಔಟ್​ ಆದರೆ, ಪತ್ತಮ್​ ನಿಸ್ಸಂಕಾ ಒಂದು ರನ್​ಗೆ ಪೆವಿಲಿಯನ್ ಹಾದಿ ಹಿಡಿದರು. ಆರಂಭಿಕರ ಬಳಿಕ ಬಂದ ನಿತೀಶ್​ ರಾಣಾ 15 ರನ್ ಬಾರಿಸಿದರೆ,​ ಅಕ್ಷರ್​ ಪಟೇಲ್​ ಶೂನ್ಯಕ್ಕೆ ಔಟ್​ ಆದರು. ಪವರ್​ಪ್ಲೇ ಹಂತದಲ್ಲಿ ಕೇವಲ 33 ರನ್​ಗೆ 4 ಬಹುಮುಖ್ಯ ವಿಕೆಟ್​ಗಳನ್ನು ಕಳೆದುಕೊಂಡು ಕಂಗಾಲಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್​ಗೆ ಆಸರೆಯಾಗಿದ್ದು ಸಮೀರ್ ರಿಜ್ವಿ ಮತ್ತು ಟ್ರಿಸ್ಟನ್​ ಸ್ಟಬ್ಸ್​ ಅವರ ಭರ್ಜರಿ ಇನ್ನಿಂಗ್ಸ್​. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್​ 17.1 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ ಗುರಿ ಮುಟ್ಟಿತು. ಈ ಮೂಲಕ ಡೆಲ್ಲಿ ಶುಭಾರಂಭ ಮಾಡಿತು. 
ಮೊದಲ ಪಂದ್ಯದಲ್ಲೇ ಎಲ್​ಎಸ್​ಜಿ ಹೀನಾಯ ಸೋಲನ್ನು ಅನುಭವಿಸಿತು. ಯಾವಾಗ ಎಲ್​ಎಸ್​ಜಿ ಸೋಲುಂಡಿತೋ ಆಗ ಎಲ್ಲರ ಕಣ್ಣು ಮಾಲೀಕ ಗೋಯೆಂಕಾ ಅವರ ಮೇಲೆ ಬಿದ್ದಿತು. ಎಂದಿನಂತೆ ಗೋಯೆಂಕಾ ಕೂಡ ತಮ್ಮ ಆಕ್ರೋಶವನ್ನು ಹೊರಹಾಕಿದರು. ಪಂದ್ಯ ಮುಗಿದ ಕೂಡಲೇ ಮೈದಾನದ ಬೌಂಡರಿ ಲೈನ್‌ನಲ್ಲಿ ಮಾಲೀಕ ಸಂಜೀವ್ ಗೋಯೆಂಕಾ ಅವರು ತಂಡದ ನಾಯಕ ರಿಷಭ್ ಪಂತ್ ಮತ್ತು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರೊಂದಿಗೆ ಗಂಭೀರ ಚರ್ಚೆ ನಡೆಸಿದರು. ಗೋಯೆಂಕಾ ಅವರ ಮುಖದಲ್ಲಿ ಪಂದ್ಯ ಸೋತ ಅಸಮಾಧಾನ ಎದ್ದು ಕಾಣುತ್ತಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದನ್ನು ನೋಡಿದ ನೆಟ್ಟಿಗರು ಗೋಯೆಂಕಾ ಅವರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ನಾಯಿ ಬಾಲ ಯಾವತ್ತಿದರೂ ಡೊಂಕೇ, ಇವರು ಈ ಕಾಲದಲ್ಲಿ ಬದಲಾಗುವುದಿಲ್ಲ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.
ಇದೇ ಮೊದಲಲ್ಲ
ಸುಮಾರು 2 ವರ್ಷಗಳ ಹಿಂದೆ ಅಂದರೆ, 2024ರ ಐಪಿಎಲ್ ಆವೃತ್ತಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ( LSG ) ತಂಡ ಹೀನಾಯವಾಗಿ ಸೋಲುಂಡಿತು. ಪಂದ್ಯದ ನಂತರ, ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ಅಂದಿನ ನಾಯಕ ಕೆ.ಎಲ್. ರಾಹುಲ್ ವಿರುದ್ಧ ಮೈದಾನದಲ್ಲೇ ತಮ್ಮ ಆಕ್ರೋಶ ಹೊರಹಾಕಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗಿ, ಆ ಸಮಯದಲ್ಲಿ ಗೋಯೆಂಕಾ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇದಾದ ಬಳಿಕ, ಕೆ.ಎಲ್. ರಾಹುಲ್ ಲಖನೌ ತಂಡ ತೊರೆದರು. ನಂತರ ರಿಷಭ್ ಪಂತ್ ಅವರನ್ನು 27 ಕೋಟಿ ರೂಪಾಯಿಗಳಿಗೆ ಖರೀದಿಸಿ ಲಖನೌ ತಂಡದ ನಾಯಕತ್ವವನ್ನು ಹಸ್ತಾಂತರಿಸಲಾಯಿತು. ಇದೀಗ, ಪಂತ್​ಗೂ ಅದೇ ಪರಿಸ್ಥಿತಿ ಎದುರಾಗಿದೆ.

ಲಲಿತ್​ ಮೋದಿ ಆಕ್ರೋಶ

ಗೋಯೆಂಕಾ ಅವರು ಪಂತ್​ ಮೇಲೆ ಅಸಮಾಧಾನ ಹೊರ ಹಾಕಿದ ವಿಡಿಯೋವನ್ನು ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗ ಮೈಕೆಲ್​ ವಾನ್​ ತಮ್ಮ ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಿಕೊಂಡು, ಇದು ಟೂರ್ನಮೆಂಟ್​ನ ಮೊದಲ ಪಂದ್ಯ, ಈ ಸಮಯದಲ್ಲಿ ಇದು ಬೇಕಾಗಿರಲಿಲ್ಲ ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಮೈಕೆಲ್​ ವಾನ್​ ಅವರ ಟ್ವೀಟ್​ ಅನ್ನು ರೀಟ್ವೀಟ್​ ಮಾಡಿರುವ ಲಲಿತ್ ಮೋದಿ, ಸಂಜೀವ್ ಗೋಯೆಂಕಾ ಅವರ ವರ್ತನೆಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಲಖನೌ ಮಾಲೀಕ ಸಂಜೀವ್ ಗೋಯೆಂಕಾ ಓರ್ವ ಲೂಸರ್​ ಮತ್ತು ಜೋಕರ್. ಆತನ ನಡವಳಿಕೆಯಿಂದ ನನಗೆ ನಾಚಿಕೆಯಾಗುತ್ತದೆ. ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಲು ನಾವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ತಂದಿದ್ದೇವೆ. ಕ್ರಿಕೆಟ್‌ಗೆ ಸಂಬಂಧವೇ ಇಲ್ಲದ ಫ್ರಾಂಚೈಸಿ ಮಾಲೀಕರು ಆಟಗಾರರ ಮೇಲೆ ನಿಯಂತ್ರಣ ಸಾಧಿಸುವುದನ್ನು ನೋಡುವುದು ಸರಿಯಲ್ಲ. ಇದು ಪ್ರತಿ ವರ್ಷವೂ ನಡೆಯಬಾರದೆಂದು ನಾನು ಬಯಸಿದ್ದೆ. ನಾನೇನಾದರೂ ಐಪಿಎಲ್​ ಅಧ್ಯಕ್ಷ ಅಥವಾ ಆಯುಕ್ತನಾಗಿದ್ದರೆ ಈ ಕೂಡಲೇ ಗೋಯೆಂಕಾ ಅವರನ್ನು ನಿಷೇಧಿಸಿ, ತಂಡದ ಮಾಲೀಕತ್ವವನ್ನು ಶಾಶ್ವತವಾಗಿ ಕಳೆದುಕೊಳ್ಳುವಂತೆ ಮಾಡುತ್ತಿದ್ದೆ. ಗೋಯೆಂಕಾ ಓರ್ವ ಅವಕಾಶವಾದಿ. ವಾಸ್ತವವಾಗಿ, ಅಂತಹ ಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲು ನಾವು ಐಪಿಎಲ್ ನಿಯಮಗಳಲ್ಲಿ ಒಂದು ಷರತ್ತನ್ನು ಮಾಡಿದ್ದೇವೆ. ಬಿಸಿಸಿಐ ಆ ಷರತ್ತನ್ನು ಪರಿಶೀಲಿಸಿ ಸಂಜೀವ್ ಗೋಯೆಂಕಾ ವಿರುದ್ಧ ಕ್ರಮ ಕೈಗೊಂಡರೆ ಒಳ್ಳೆಯದು. ಪ್ರಾಮಾಣಿಕತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರೆ ಉತ್ತಮ ಎಂದು ನಾನು ಭಾವಿಸುತ್ತೇನೆ ಎಂದು ಲಲಿತ್​ ಮೋದಿ ಅವರು ಹೇಳಿದ್ದಾರೆ. 
ಎಲ್​ಎಸ್​ಜಿ ಆಡಳಿತ ಮಂಡಳಿ ಪ್ರತಿಕ್ರಿಯೆ ಏನು?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗೋಯೆಂಕಾ ಮತ್ತು ಪಂತ್ ನಡುವಿನ ಸಂಭಾಷಣೆಯ ವಿಡಿಯೋಗೆ ಲಖನೌ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿದೆ. ನೀವು ನಿಮ್ಮ ಕಣ್ಣಿನಿಂದ ನೋಡುವ ಎಲ್ಲವೂ ನಿಜವಲ್ಲ. ಪಂತ್ ಮತ್ತು ಗೋಯೆಂಕಾ ನಡುವಿನ ಗಂಭೀರ ಚರ್ಚೆಯ ವಿಡಿಯೋ ಕ್ಲಿಪ್ಪಿಂಗ್ ಅನ್ನು ಕತ್ತರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಆದರೆ, ಅದಕ್ಕೂ ಮೊದಲು ಏನಾಯಿತು ಎಂದು ಯಾರಿಗೂ ತಿಳಿದಿಲ್ಲ. ನಾವೀಗ ಅದರ ಸಂಪೂರ್ಣ ವಿಡಿಯೋವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಸತ್ಯವನ್ನು ತಿಳಿದುಕೊಳ್ಳಿ ಎಂದು ಎಲ್​ಎಸ್​ಜಿ ಪೋಸ್ಟ್ ಮಾಡಿದೆ. ಲಖನೌ ಆಡಳಿತ ಮಂಡಳಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ಪಂತ್ ಮತ್ತು ಗೋಯೆಂಕಾ ಮಾತನಾಡುವ ಮೊದಲು ನಗುತ್ತಾ ಮತ್ತು ಪರಸ್ಪರ ಅಪ್ಪಿಕೊಳ್ಳುತ್ತಾರೆ. ಇದಾದ ನಂತರ, ಇಬ್ಬರೂ ಪಂದ್ಯದ ಬಗ್ಗೆ ದೀರ್ಘ ಚರ್ಚೆ ನಡೆಸುತ್ತಾರೆ. ಈ ಮೂಲಕ ಹರಿದಾಡುತ್ತಿರುವ ವದಂತಿಗೆ ಎಲ್​ಎಸ್​ಜಿ ಬ್ರೇಕ್​ ಹಾಕಿದೆ, (ಏಜೆನ್ಸೀಸ್​).