ಹುಬ್ಬಳ್ಳಿ ಮೈದಾನದ ಪೆವಿಲಿಯನ್ ಬ್ಲಾಕ್ಗೆ ಸುನೀಲ್ ಜೋಶಿ ಹೆಸರು
ಬೆಂಗಳೂರು: ಹುಬ್ಬಳ್ಳಿಯ ರಾಜನಗರದಲ್ಲಿರುವ ಕೆಎಸ್ಸಿಎ ಕ್ರಿಕೆಟ್ ಮೈದಾನದ (KSCA Cricket Grounds, Rajnagar, Hubballi) ಪೆವಿಲಿಯನ್ ಬ್ಲಾಕ್ಗೆ ಟೀಮ್ ಇಂಡಿಯಾ ಪರ ಆಡಿರುವ ಕರ್ನಾಟಕದ ಮಾಜಿ ಸ್ಪಿನ್ನರ್ ಸುನೀಲ್ ಜೋಶಿ (Sunil Joshi) ಅವರ ಹೆಸರು ಇಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ನಿರ್ಧರಿಸಿದೆ.
ಈ ಮೈದಾನದಲ್ಲಿ ಮಂಗಳವಾರದಿಂದ ನಡೆಯಲಿರುವ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ನಡುವಿನ ರಣಜಿ ಟ್ರೋಫಿ ಫೈನಲ್ ಪಂದ್ಯಕ್ಕೆ ಮುನ್ನ ಈ ನಾಮಕರಣ ಸಮಾರಂಭ ನಡೆಯಲಿದೆ. ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸಮಾರಂಭದಲ್ಲಿ ಹಾಜರಿರಲಿದ್ದಾರೆ ಎಂದು ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ್ ತಿಳಿಸಿದ್ದಾರೆ.
ಸುನೀಲ್ ಜೋಶಿ ಅವರು ಕರ್ನಾಟಕ ಮತ್ತು ಭಾರತೀಯ ಕ್ರಿಕೆಟ್ಗೆ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಈ ಗೌರವ ಸಲ್ಲಿಸಲಾಗುತ್ತಿದೆ. ಗದಗ ಜಿಲ್ಲೆಯವರಾದ ಸುನೀಲ್ ಜೋಶಿ ಉತ್ತರ ಕರ್ನಾಟಕದಿಂದ ಬಂದಿದ್ದು, ಹುಬ್ಬಳ್ಳಿಯಲ್ಲೂ ಕ್ರಿಕೆಟ್ ಬೆಳವಣಿಗೆಯಲ್ಲಿ ಅವರ ಪಾತ್ರವಿದೆ ಎಂದು ಕೆಎಸ್ಸಿಎ ತಿಳಿಸಿದೆ.
ಸುನೀಲ್ ಜೋಶಿ ಎಡಗೈ ಸ್ಪಿನ್ನರ್ ಆಗಿ ಭಾರತ ಪರ 15 ಟೆಸ್ಟ್ ಮತ್ತು 69 ಏಕದಿನ ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 41 ಮತ್ತು 69 ವಿಕೆಟ್ ಕಬಳಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 6 ರನ್ಗಳಿಗೆ 5 ವಿಕೆಟ್ ಕಬಳಿಸಿದ್ದು ಅವರ ಅತ್ಯುತ್ತಮ ನಿರ್ವಹಣೆಯಾಗಿದೆ. ಐಪಿಎಲ್ನಲ್ಲಿ ಅವರು ಆರ್ಸಿಬಿ ಪರವಾಗಿಯೂ ಆಡಿದ್ದಾರೆ. ಸದ್ಯ ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಸ್ಪಿನ್ ಕೋಚ್ ಆಗಿದ್ದಾರೆ.