2026-27ರ ಕ್ರಿಕೆಟ್ ಋತುವಿಗೆ ಆಯ್ಕೆ ಸಮಿತಿ ನೇಮಿಸಿದ ಕೆಎಸ್ಸಿಎ
ಬೆಂಗಳೂರು: ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಸುನೀಲ್ ಜೋಶಿ ಮತ್ತು ಜಯಶ್ರೀ ದೊರೆಸ್ವಾಮಿ ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು 2026-27ರ ಸಾಲಿನ ಕ್ರಿಕೆಟ್ ಋತುವಿಗೆ ಆಯ್ಕೆ ಸಮಿತಿಗಳನ್ನು ಶಿಫಾರಸು ಮಾಡಿದ್ದು, ಇದನ್ನು ವೆಂಕಟೇಶ್ ಪ್ರಸಾದ್ ಸಾರಥ್ಯದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮಂಗಳವಾರ ಅಂಗೀಕರಿಸಿದೆ.
ಸೀನಿಯರ್ ಮತ್ತು 23 ವಯೋಮಿತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಅಮಿತ್ ವರ್ಮ ಮುಂದುವರಿಯಲಿದ್ದಾರೆ. ತೇಜ್ಪಾಲ್ ಕೊಠಾರಿ, ಸುನೀಲ್ ರಾಜು, ಸುರೇಶ್ ಶಾನ್ಬಲ್ ಇತರ ಸದಸ್ಯರು. 19 ವಯೋಮಿತಿ ಆಯ್ಕೆ ಸಮಿತಿಗೆ ಎಸ್. ಪ್ರಕಾಶ್, 16-14 ವಯೋಮಿತಿ ಆಯ್ಕೆ ಸಮಿತಿಗೆ ಉಮೇಶ್ ಜಿಎನ್ ಅಧ್ಯಕ್ಷರಾಗಿದ್ದಾರೆ.
ಮಹಿಳೆಯರ ಸೀನಿಯರ್ ಮತ್ತು 23 ವಯೋಮಿತಿ ಆಯ್ಕೆ ಸಮಿತಿಗೆ ಗಾಯತ್ರಿ ಕೆ.ಆರ್. ಅಧ್ಯೆಯಾಗಿದ್ದಾರೆ. ಮಹಿಳೆಯರ 19 ಮತ್ತು 15 ವಯೋಮಿತಿ ಆಯ್ಕೆ ಸಮಿತಿಯನ್ನು ಮಾಲಾ ಸುಂದರೇಶನ್ ಮುನ್ನಡೆಸಲಿದ್ದಾರೆ. 2026-27ರ ದೇಶೀಯ ಕ್ರಿಕೆಟ್ ಋತು ಆಗಸ್ಟ್ 23ಕ್ಕೆ ಆರಂಭವಾಗಲಿದೆ.