ಕೃನಾಲ್ಗೆ ಐದನೇ ಕಪ್; ಪಾಂಡ್ಯ ಸಹೋದರರಿಗೆ 10ನೇ ಐಪಿಎಲ್ ಟ್ರೋಫಿ ಸಂಭ್ರಮ!
ಬೆಂಗಳೂರು: ಆರ್ಸಿಬಿ (RCB) ಆಲ್ರೌಂಡರ್ ಕೃನಾಲ್ ಪಾಂಡ್ಯ ಐಪಿಎಲ್ನಲ್ಲಿ (IPL) 5 ಟ್ರೋಫಿ ಗೆದ್ದ ಸಾಧನೆ ಮಾಡಿದರು. ಈ ಮೂಲಕ ಅವರು ತಲಾ 5 ಬಾರಿ ಗೆದ್ದ ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಕೈರಾನ್ ಪೊಲ್ಲಾರ್ಡ್ ಸಾಧನೆ ಸರಿಗಟ್ಟಿದರು. 2017, 2019, 2020ರಲ್ಲಿ ಮುಂಬೈ ಪರ ಟ್ರೋಫಿ ಗೆದ್ದಿದ್ದ ಕೃನಾಲ್, ಕಳೆದ ವರ್ಷ ಆರ್ಸಿಬಿ ಪರ ಈ ಸಾಧನೆ ಮಾಡಿದ್ದರು. ರೋಹಿತ್ ಶರ್ಮ (1 ಡೆಕ್ಕನ್ ಚಾರ್ಜರ್ಸ್, 5 ಮುಂಬೈ) ಮತ್ತು ಅಂಬಟಿ ರಾಯುಡು (3 ಮುಂಬೈ, 3 ಸಿಎಸ್ಕೆ) ತಲಾ 6 ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವುದು ದಾಖಲೆಯಾಗಿದೆ.
ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಸಹೋದರರು ಐಪಿಎಲ್ನಲ್ಲಿ ಆಡಿದ 12 ವರ್ಷಗಳಲ್ಲಿ ಒಟ್ಟು 10 ಪ್ರಶಸ್ತಿ ಗೆದ್ದುಕೊಂಡ ಸಾಧನೆ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಕೂಡ ಈಗಾಗಲೆ 5 ಬಾರಿ ಐಪಿಎಲ್ ಟ್ರೋಫಿ ಗೆದ್ದಿದ್ದಾರೆ. 2015, 2017, 2019, 2020ರಲ್ಲಿ ಮುಂಬೈ ಪರ ಮತ್ತು 2022ರಲ್ಲಿ ಗುಜರಾತ್ ಟೈಟಾನ್ಸ್ ಪರ ಅವರು ಈ ಸಾಧನೆ ಮಾಡಿದ್ದರು. ಕೃನಾಲ್ ಆಡಿದ ಎಲ್ಲ 5 ಐಪಿಎಲ್ನಲ್ಲಿ ಗೆದ್ದ ಅಜೇಯ ದಾಖಲೆ ಹೊಂದಿದ್ದರೆ, ಹಾರ್ದಿಕ್ ಪಾಂಡ್ಯ 2023ರ ಫೈನಲ್ನಲ್ಲಿ ಸೋತಿದ್ದರು.
ಸಾಲ್ಟ್, ಸುಯಶ್ಗೆ ಹ್ಯಾಟ್ರಿಕ್ ಕಪ್!
ಫಿಲ್ ಸಾಲ್ಟ್ ಮತ್ತು ಸುಯಶ್ ಶರ್ಮ ಐಪಿಎಲ್ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಸಾಧನೆ ಮಾಡಿದರು. ಕಳೆದ 2 ವರ್ಷಗಳಿಂದ ಆರ್ಸಿಬಿ ಭಾಗವಾಗಿರುವ ಇವರಿಬ್ಬರು, 2024ರಲ್ಲಿ ಪ್ರಶಸ್ತಿ ಗೆದ್ದ ಕೆಕೆಆರ್ ತಂಡದ ಭಾಗವಾಗಿದ್ದರು. ಈ ಮುನ್ನ ಕರ್ಣ್ ಶರ್ಮ ಐಪಿಎಲ್ನಲ್ಲಿ ಹ್ಯಾಟ್ರಿಕ್ ಟ್ರೋಫಿ ಗೆದ್ದ ಮೊದಲಿಗರೆನಿಸಿದ್ದರು. ಅವರು 2016ರಲ್ಲಿ ಸನ್ರೈಸರ್ಸ್, 2017ರಲ್ಲಿ ಮುಂಬೈ, 2018ರಲ್ಲಿ ಸಿಎಸ್ಕೆ ಪರ ಟ್ರೋಫಿ ಗೆದ್ದಿದ್ದರು.