Vaibhav Sooryavanshi: ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್, ಕ್ರಿಕೆಟ್ ಲೋಕದಲ್ಲಿ ಸಾಲು ಸಾಲು ಹೊಸ ದಾಖಲೆಗಳನ್ನು ಬರೆಯುತ್ತಿರುವ 15 ವರ್ಷದ ಸ್ಟಾರ್ ಬ್ಯಾಟರ್ ವೈಭವ್ ಸೂರ್ಯವಂಶಿ ಹೆಸರು ಒಂದಲ್ಲ ಒಂದು ರೀತಿ ಮುನ್ನೆಲೆಗೆ ಬರುತ್ತಲೇ ಇದೆ. ವೈಭವ್ ಮೈದಾನಕ್ಕೆ ಇಳಿದರೂ ಸುದ್ದಿಯೇ, ಹೊರಗಿದ್ದರೂ ಸುದ್ದಿಯೇ ಎನ್ನುವುದಕ್ಕೆ ಭಾರತದ ಮಾಜಿ ಹಿರಿಯ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಅವರ ಕಿಡಿನುಡಿಯೇ ಕಾರಣ.
15 ವರ್ಷಕ್ಕೆ ಸ್ಫೋಟಕ ಬ್ಯಾಟಿಂಗ್ ಸಾಮರ್ಥ್ಯದಿಂದ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳನ್ನು ಸಂಪಾದಿಸಿರುವ ವೈಭವ್ನಂತಹ ಪ್ರತಿಭೆಗೆ ಬಿಸಿಸಿಐ ಮತ್ತು ಟೀಮ್ ಮ್ಯಾನೇಜ್ಮೆಂಟ್ನಿಂದ ಸರಿಯಾದ ಅವಕಾಶಗಳು ಸಿಗುತ್ತಿಲ್ಲ. ಕೇವಲ ಒಂದು ಪಂದ್ಯದಲ್ಲಿ ಆಡಿಸಿ, ನಂತರ ಹಲವು ಪಂದ್ಯಗಳಿಂದ ಹೊರಗಿಡುವ ನಿರ್ಧಾರ ನಿಜಕ್ಕೂ ಒಪ್ಪುವಂತದ್ದಲ್ಲ. ಇದು ಯುವ ಆಟಗಾರನನ್ನು ಪ್ರೋತ್ಸಾಹಿಸುವ ಬದಲು ನಿರುತ್ಸಾಹಕ್ಕೆ ದೂಡಿದಂತೆ ಎಂದು ಶ್ರೀಕಾಂತ್ ಕಿಡಿಕಾರಿದ್ದಾರೆ.
ವೈಭವ್ ಸೂರ್ಯವಂಶಿಯನ್ನು ಒಂದು ಪಂದ್ಯದಲ್ಲಿ ಆಡಿಸಿ ನಂತರ ಉಳಿದೆಲ್ಲ ಪಂದ್ಯಗಳಿಂದ ಹೊರಗಿಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಶ್ರೀಕಾಂತ್, "ಆಯ್ಕೆಗಾರರು ಮತ್ತು ಟೀಮ್ ಮ್ಯಾನೇಜ್ಮೆಂಟ್ ಆತನ ವಿಚಾರದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಸರಿಯಲ್ಲ. ಅವರು ಆತನನ್ನು ಪ್ರೋತ್ಸಾಹಿಸುವ ಬದಲು ನಿರುತ್ಸಾಹಗೊಳಿಸುತ್ತಿದ್ದಾರೆ. ಇದು ದೊಡ್ಡ ತಪ್ಪು. ಒಂದು ಪಂದ್ಯ ಆಡಿಸಿ ನಂತರ ಐದು ಪಂದ್ಯಗಳಲ್ಲಿ ಅವಕಾಶ ಕೊಡದೆ, ಬೆಂಚ್ನಲ್ಲಿ ಕೂರಿಸುವುದು ಒಪ್ಪುವಂತದ್ದಲ್ಲ" ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈ ಹುಡುಗ ಈಗಾಗಲೇ ಸಾಕಷ್ಟು ಅದ್ಭುತ ಪ್ರದರ್ಶನ ನೀಡಿದ್ದಾನೆ. ಹೀಗಾಗಿ, ಆತನಿಗೆ ಎಲ್ಲ ಪಂದ್ಯಗಳಲ್ಲೂ ಆಡುವ ಅವಕಾಶ ಕೊಡಿ. ವೈಭವ್ ಟೆಸ್ಟ್, ಏಕದಿನ ಎರಡನ್ನೂ ಚೆನ್ನಾಗಿ ಆಡಬಲ್ಲ. ಆತನನ್ನು 20 ಇನಿಂಗ್ಸ್ಗಳಲ್ಲಿ ಆಡಿಸಿ. ಒಬ್ಬನೇ ಐದರಿಂದ ಏಳು ಪಂದ್ಯಗಳನ್ನು ಗೆಲ್ಲಿಸಿಕೊಡುತ್ತಾನೆ. ಆ ಸಾಮರ್ಥ್ಯ ಅವನಲ್ಲಿದೆ. ಯುವ ಆಟಗಾರನ ಮೇಲೆ ನಂಬಿಕೆ ಇಟ್ಟು ಆತನಿಗೆ ಸಾಕಷ್ಟು ಪಂದ್ಯಗಳಲ್ಲಿ ಆಡುವ ಅವಕಾಶ ನೀಡಬೇಕು. ಪದೇ ಪದೆ ತಂಡದಿಂದ ಕೈಬಿಡುವ ನಿರ್ಧಾರ ಆತನ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರಬಹುದು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.
ವೈಭವ್ ಟೆಸ್ಟ್ನಲ್ಲೂ ಯಶಸ್ವಿಯಾದರೆ ವಿಶ್ವದಾದ್ಯಂತ ಟೆಸ್ಟ್ ಕ್ರಿಕೆಟ್ಗೆ ಹೊಸ ಆಸಕ್ತಿ ಮೂಡಬಹುದು. ನ್ಯೂಜಿಲೆಂಡ್ನಲ್ಲಿ ಆತ ಟಿ20 ಪಂದ್ಯಗಳನ್ನು ಆಡುತ್ತಿದ್ದಾಗ ಆತನ ಬ್ಯಾಟಿಂಗ್ ನೋಡಲು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ವೈಭವ್ ಎಲ್ಲಿಗೆ ಹೋದರೂ ಆತನ ಬ್ಯಾಟಿಂಗ್ ನೋಡಲು ಕ್ರಿಕೆಟ್ ಪ್ರೇಮಿಗಳ ದಂಡು ಹರಿದುಬರುತ್ತಿದೆ. ಈ ಮಾದರಿಯಲ್ಲೂ ಸೂರ್ಯವಂಶಿ ಹೆಚ್ಚು ರನ್ ಬಾರಿಸಿದರೆ, ಟೆಸ್ಟ್ ಕ್ರಿಕೆಟ್ಗೆ ಹೊಸ ಚೈತನ್ಯ ಸಿಗಲಿದೆ ಎಂದಿದ್ದಾರೆ,(ಏಜೆನ್ಸೀಸ್).